Headlines

ಯಡಿಯೂರಪ್ಪ, ವಿಜಯೇಂದ್ರರ ಕಡೆಗಣಿಸಿದರೆ ಪಕ್ಷಕ್ಕೆ ಭಾರಿ ನಷ್ಟ: ಬಿಜೆಪಿಗೆ ರಂಭಾಪುರಿ ಶ್ರೀಗಳ ಎಚ್ಚರಿಕೆ – Kannada News | Rambhapuri Swamiji Warns BJP: Ignoring BSY and BY Vijayendra Will Lead to Huge Political Loss in Karnataka

ರಂಭಾಪುರಿ ಶ್ರೀ, ವಿಜಯೇಂದ್ರ, ಯಡಿಯೂರಪ್ಪImage Credit source: tv9

ದಾವಣಗೆರೆ, ಜುಲೈ 2: ರಾಜ್ಯ ಬಿಜೆಪಿಯಲ್ಲಿ (BJP) ಆಂತರಿಕ ಬೇಗುದಿ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವ ಸಂದರ್ಭದಲ್ಲೇ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಹಾಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರೋಧಿಗಳಿಗೆ ರಂಭಾಪುರಿ ಜಗದ್ಗುರುಗಳು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಕರ್ನಾಟಕದಲ್ಲಿ ಕೇವಲ ಎರಡು ಸ್ಥಾನಗಳಿದ್ದ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತೇರಿಸಿದ ಮುತ್ಸದ್ದಿ ಬಿಎಸ್ ಯಡಿಯೂರಪ್ಪ. ಅಂತಹ ನಾಯಕರನ್ನು ಹಾಗೂ ಅವರ ಪುತ್ರ ವಿಜಯೇಂದ್ರ ಅವರನ್ನು ಕಡೆಗಣಿಸಿ, ವೀರಶೈವ ಲಿಂಗಾಯತ ಸಮುದಾಯವನ್ನು ಅಲಕ್ಷ್ಯ ಮಾಡಿದರೆ ಪಕ್ಷಕ್ಕೆ ಭಾರಿ ನಷ್ಟವಾಗಲಿದೆ ಎಂದು ಪರೋಕ್ಷವಾಗಿ ದೆಹಲಿ ನಾಯಕರಿಗೂ ಸಂದೇಶ ರವಾನಿಸಿದ್ದಾರೆ.

ಯಡಿಯೂರಪ್ಪ ಅಧಿಕಾರದಲ್ಲಿದ್ದಾಗಲೂ ಕಾಲು ಎಳೆಯುವವರಿದ್ದರು!

ಬಿ.ಎಸ್. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರೂ ಅವರಿಗೆ ಪರಿಪೂರ್ಣವಾಗಿ ಅಧಿಕಾರ ನಡೆಸಲು ಪಕ್ಷದ ಒಳಗಿನವರೇ ಬಿಡಲಿಲ್ಲ. ಅವರು ಸಿಎಂ ಆಗಿದ್ದಾಗಲೂ ಕಾಲು ಎಳೆಯುವ ಜನರಿದ್ದರು, ಈಗ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೂ ಅಂತಹದ್ದೇ ಪಿತೂರಿಗಳು ಪಕ್ಷದೊಳಗೆ ಮುಂದುವರಿದಿವೆ ಎಂದು ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಿಂದೆ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದಾಗ ಚುನಾವಣೆಯಲ್ಲಿ ಯಾವ ರೀತಿ ದುಷ್ಪರಿಣಾಮ ಎದುರಿಸಬೇಕಾಯಿತೋ, ಈಗಲೂ ಅದೇ ತಪ್ಪು ಮರುಕಳಿಸಿದರೆ ತಕ್ಕ ಪಾಠ ಕಲಿಯಬೇಕಾಗುತ್ತದೆ.

ಕೇಂದ್ರ ನಾಯಕರು ಬೇಗುದಿ ತಣ್ಣಗಾಗಿಸಲಿ: ರಂಭಾಪುರಿ ಶ್ರೀ

ಬಿಜೆಪಿಯಲ್ಲಿ ಎರಡು-ಮೂರು ಗುಂಪುಗಳಾಗದೆ ಪರಸ್ಪರ ಒಂದಾಗಿ ಕೆಲಸ ಮಾಡಬೇಕು, ಇಲ್ಲದಿದ್ದರೆ ಇದರ ನೇರ ಲಾಭವನ್ನು ವಿರೋಧ ಪಕ್ಷಗಳು ಪಡೆಯಲಿವೆ ಎಂದು ಎಚ್ಚರಿಸಿದರು. ಕೇಂದ್ರ ನಾಯಕರು ತಕ್ಷಣವೇ ಮಧ್ಯಪ್ರವೇಶಿಸಿ ಈ ಬೇಗುದಿಯನ್ನು ತಣ್ಣಗಾಗಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಮ ಮಂದಿರ ದೇಣಿಗೆ ದುರ್ಬಳಕೆ: ಕಠಿಣ ಶಿಕ್ಷೆಗೆ ಒತ್ತಾಯ

ಇದೇ ವೇಳೆ ಅಯೋಧ್ಯೆ ರಾಮ ಮಂದಿರದ ದೇಣಿಗೆ ದುರ್ಬಳಕೆ ವಿವಾದದ ಕುರಿತು ಪ್ರತಿಕ್ರಿಯಿಸಿದ ರಂಭಾಪುರಿ ಶ್ರೀಗಳು, ‘ಜಗತ್ತಿನಾದ್ಯಂತ ಇರುವ ಎಲ್ಲಾ ವರ್ಗದ ಭಕ್ತರು ಭಕ್ತಿ-ಭಾವದಿಂದ ರಾಮ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಮಾಡಿದ್ದಾರೆ. ಆದರೆ ಅಲ್ಲಿನ ಕೆಲವು ವ್ಯಕ್ತಿಗಳು ಅಡ್ಡದಾರಿಯಲ್ಲಿ ಹೋಗಿ ಪವಿತ್ರವಾದ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿರುವುದು ವಿಷಾದನೀಯ. ಇಂತಹ ಪವಿತ್ರ ಸ್ಥಳದಲ್ಲಿ ಭ್ರಷ್ಟಾಚಾರದ ಕೃತ್ಯಗಳು ನಡೆಯಬಾರದು. ತಪ್ಪು ಮಾಡಿದವರು ಯಾರೇ ಇರಲಿ ಅವರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಲೂಟಿ ಮಾಡಲಾದ ಹಣವನ್ನು ಅವರಿಂದಲೇ ವಸೂಲಿ ಮಾಡಿ ಮರಳಿ ಮಂದಿರದ ನಿಧಿಗೆ ಜಮಾ ಮಾಡುವ ಕೆಲಸವಾಗಬೇಕು’ ಎಂದು ಆಗ್ರಹಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *