ಆರತಿ ಮಾಡಿ ಸ್ವಾಗತಿಸುತ್ತಿರುವುದು Image Credit source: tv9 kannada
ಬಳ್ಳಾರಿ, ಮಾರ್ಚ್ 05: ಅವರೆಲ್ಲಾ ದುಬೈಗೆ ಪ್ರವಾಸಕ್ಕೆ ಹೋದವರು. ಪ್ರವಾಸ ಮುಗಿಸಿ ಇನ್ನೇನು ತಾಯ್ನಾಡಿಗೆ ಮರಳಬೇಕಿತ್ತು. ಅಷ್ಟರಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ (Israel-Iran War) ಆರಂಭವಾಗಿ ಬಿಟ್ಟಿದೆ. ಇತ್ತ ವಿಮಾನ ಇಲ್ಲದೆ ಜೀವ ಕೈಯಲ್ಲಿ ಹಿಡಿದು 35ಕ್ಕೂ ಹೆಚ್ಚು ಬಳ್ಳಾರಿಗರು ದುಬೈನಲ್ಲಿ ಪರದಾಡಿದ್ದಾರೆ. ಆದರೆ ಸರ್ಕಾರದ ನೆರವಿನಿಂದ ಇಂದು ಬಳ್ಳಾರಿಗೆ ವಾಪಾಸ್ ಆಗಿದ್ದಾರೆ. ಆ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ ಇತ್ತ ಕುಟುಂಬಸ್ಥರು ಅವರನ್ನ ಸಿಹಿ ತಿನ್ನಿಸಿ, ಹಾರ ಹಾಕಿ, ಪಟಾಕಿ ಸಿಡಿಸಿ ಅದ್ದೂರಿಯಾಗಿ ಬರ ಮಾಡಿಕೊಂಡಿದ್ದಾರೆ.
ಬಳ್ಳಾರಿಯಿಂದ ಸುಮಾರು 35 ಜನರು ಪ್ರವಾಸಕ್ಕೆ ಅಂತಾ ದುಬೈಗೆ ಹೋಗಿದ್ದರು. ದುಬೈ ಸುತ್ತಾಡಿ ಪ್ರವಾಸ ಮುಗಿಸಿ ಇನ್ನೇನು ತವರಿಗೆ ಮರಳಬೇಕಿತ್ತು. ಅಷ್ಟರಲ್ಲೇ ಯುದ್ಧ ಶುರುವಾಗಿ ಬಿಟ್ಟಿದೆ. ಯುದ್ಧದ ಕಾರ್ಮೋಡ ಕವಿಯುತ್ತಿದ್ದಂತೆ ಇತ್ತ ವಿಮಾನ ಹಾರಾಟ ರದ್ದಾಗಿವೆ. ತವರಿಗೆ ಮರಳಬೇಕಿದ್ದ 35 ಜನ ಬಳ್ಳಾರಿಗರು ವಿಮಾನ ಇಲ್ಲದೆ, ಉಳಿದುಕೊಳ್ಳಲು ವಸತಿ ವ್ಯವಸ್ಥೆಯಿಲ್ಲದೆ ಪರದಾಡಿದ್ದಾರೆ.
ಇದನ್ನೂ ಓದಿ: ದುಬೈನಿಂದ ಬೆಂಗಳೂರಿಗೆ ಬಂದಿಳಿದ 5ನೇ ವಿಮಾನ: 3 ದಿನಗಳಲ್ಲಿ 1,500 ಮಂದಿ ಸುರಕ್ಷಿತವಾಗಿ ವಾಪಸ್
ವಿಡಿಯೋ ಮುಖಾಂತರ ತಾವು ದುಬೈನಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವಿದ್ದ ಸ್ಥಳದ ಅಕ್ಕಪಕ್ಕದಲ್ಲಿಯೇ ಬಾಂಬ್‌ಗಳು ಬಿಳುತ್ತಿವೆ. ನಮ್ಮಹತ್ತಿರ ಹಣ ಸಹ ಇಲ್ಲ, ನಮ್ಮನ್ನ ವಾಪಾಸ್ ಕರ್ನಾಟಕಕ್ಕೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದರು. ತಕ್ಷಣವೇ ಸ್ಪಂದಿಸಿದ ಶಾಸಕ ಬಿ. ನಾಗೇಂದ್ರ ವಿಡಿಯೋ ಕರೆ ಮೂಲಕ ಅವರಿಗೆ ಧೈರ್ಯ ತುಂಬಿ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದರು. ಇದೀಗ ಪ್ರವಾಸಿಗರೆಲ್ಲಾ ಬಳ್ಳಾರಿಗೆ ಮರಳಿದ್ದು, ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಶಾಸಕ ಬಿ. ನಾಗೇಂದ್ರ, ಡ್ರೋನ್ ಪ್ರತಾಪ ಸಹಾಯ
ರಾಜ್ಯ ಸರ್ಕಾರ ಮತ್ತು ಶಾಸಕ ಬಿ. ನಾಗೇಂದ್ರ, ಡ್ರೋನ್ ಪ್ರತಾಪ ಸಹಾಯದಿಂದ ಅಲ್ಲಿ ಊಟ, ವಸತಿ ವ್ಯವಸ್ಥೆ ಆಯಿತು. ನಾವೆಲ್ಲಾ ಸುರಕ್ಷಿತವಾಗಿ ವಾಪಾಸ್ ಆಗಿದ್ದಾರೆ. ದುಬೈನ ಶಾರ್ಜಾದಿಂದ ಕೊಚ್ಚಿನ್ಗೆ ವಿಮಾನದಲ್ಲಿ ಬಂದು ಅಲ್ಲಿಂದ ಮತ್ತೊಂದು ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದಾರೆ.
ದೃಷ್ಟಿ ತೆಗೆದು ಬರ ಮಾಡಕೊಂಡ ಕುಟುಂಬಸ್ಥರು
ಶಾಸಕ ಬಿ. ನಾಗೇಂದ್ರ ಕೊಚ್ಚಿನನಿಂದ ಬೆಂಗಳೂರಿಗೆ ಟಿಕೆಟ್ ವ್ಯವಸ್ಥೆ ಮಾಡಿಸಿದ್ದಾರೆ. ಬಳ್ಳಾರಿಗೆ ಬಂದ ಪ್ರವಾಸಿಗರಿಗೆ ಎಡಿಸಿ ಮೊಮ್ಮದ ಜುಬೇದ್ ಹೂ ಗುಚ್ಚ ಕೊಡುವ ಮೂಲಕ ಸ್ವಾಗತಿಸಿದರು. ಕುಟುಂಬಸ್ಥರು ಹೂ ಹಾರ ಹಾಕಿ, ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ, ದೃಷ್ಟಿ ತೆಗೆದು ಬರ ಮಾಡಕೊಂಡಿದ್ದು, ಸಂತಸ ಮನೆ ಮಾಡಿತ್ತು.
ಇದನ್ನೂ ಓದಿ: ದುಬೈನಿಂದ ಬೆಂಗಳೂರಿಗೆ ಆಗಮಿಸಿದ ಮತ್ತೊಂದು ವಿಮಾನ: ಇಲ್ಲಿಯವರೆಗೆ ತಾಯ್ನಡಿಗೆ ಬಂದ 1,053 ಪ್ರಯಾಣಿಕರು
ಒಟ್ಟಿನಲ್ಲಿ ದುಬೈ ಸೌಂದರ್ಯ ಕಣ್ಣತುಂಬಿಕೊಳ್ಳಲು ಹೋದವರು ಯುದ್ಧದ ಕಾಮೋರ್ಡದಲ್ಲಿ ಸಿಲುಕಿ ಪರದಾಡುವಂತಾಗಿತ್ತು. ಇದೀಗ ಎಲ್ಲರೂ ಸುರಕ್ಷಿತವಾಗಿ ಸಂತಸದಿಂದ ವಾಪಾಸ್ ಆಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.