Headlines

ಯುಬಿ ಸಿಟಿ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ: 45 ಕೆಜಿ ಕೊಳೆತ ಮಾಂಸ, 15 ಲೀ. ಕರಿದ ಅಡುಗೆ ಎಣ್ಣೆ ಪತ್ತೆ – Kannada News | Bengaluru UB City 5 Star Hotel Raids: 45 Kg Rotten Meat, 15 Litres Used Cooking Oil Seized

ಯುಬಿ ಸಿಟಿ ಹೋಟೆಲ್‌ಗಳ ಮೇಲೆ ದಾಳಿImage Credit source: tv9

ಬೆಂಗಳೂರು, ಆಗಸ್ಟ್ 10: ಬೆಂಗಳೂರಿನ (Bengaluru) ಪ್ರತಿಷ್ಠಿತ ಯುಬಿ ಸಿಟಿಯಲ್ಲಿರುವ ಪಂಚತಾರಾ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಹೋಟೆಲ್‌ಗಳ ಅಡುಗೆಮನೆಗಳಲ್ಲಿನ ಅವ್ಯವಸ್ಥೆ ಬಯಲಾಗಿದೆ. ಐದು ಹೋಟೆಲ್‌ಗಳ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ಕೊಳೆತ ಮಾಂಸ, ಅವಧಿ ಮೀರಿದ ಆಹಾರ ಪದಾರ್ಥಗಳು ಸೇರಿದಂತೆ ಹಲವು ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

45 ಕೆಜಿ ಕೊಳೆತ ಮಾಂಸ, 15 ಲೀಟರ್ ಕರಿದ ಅಡುಗೆ ಎಣ್ಣೆ ಪತ್ತೆ

ಬೆಂಗಳೂರಿನಲ್ಲಿ ಆಹಾರ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿದಿದ್ದು, ರಾತ್ರಿ ಯುಬಿ ಸಿಟಿಯಲ್ಲಿರುವ ಐದು ಹೋಟೆಲ್‌ಗಳ ಮೇಲೆ ಸುಮಾರು 15 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಸ್ಕೈ ಹೋಟೆಲ್, ರಾಯಲ್ ಚೈನ್, ಮದ್ರಾಸ್ ಕಿಚನ್, ಟೆಸ್ಕಾನ್ ಹೋಟೆಲ್ ಹಾಗೂ ಸೆಂಚೆಜ್ ಹೋಟೆಲ್‌ಗಳ ಅಡುಗೆಮನೆಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ 45 ಕೆ.ಜಿ. ಕೊಳೆತ ಕೋಳಿ ಮತ್ತು ದನದ ಮಾಂಸ, 15 ಲೀಟರ್ ಬಳಸಿದ ಅಡುಗೆ ಎಣ್ಣೆ ಹಾಗೂ 6 ಕೆ.ಜಿ. ವೆಜಿಟೇಬಲ್ ಕಟ್ಲೆಟ್ ಸೇರಿದಂತೆ ಒಟ್ಟು 51 ಕೆ.ಜಿ. ಆಹಾರ ಪದಾರ್ಥಗಳನ್ನು ಸ್ಕೈ ಹೋಟೆಲ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಕೊಳೆತ ಮಾಂಸ ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾದ ಹಿನ್ನೆಲೆಯಲ್ಲಿ ಹೋಟೆಲ್‌ನ ಅಡುಗೆಮನೆಗೆ ಅಧಿಕಾರಿಗಳು ಬೀಗ ಹಾಕಿ ಸೀಲ್ ಮಾಡಿದ್ದಾರೆ.

ಇನ್ನು ಯುಬಿ ಸಿಟಿಯ ರಾಯಲ್ ಚೈನ್ ಹೋಟೆಲ್‌ನಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, 50 ಕೆ.ಜಿ. ಬಾತುಕೋಳಿ ಮಾಂಸ ಹಾಗೂ 5 ಕೆ.ಜಿ. ಮೀನು ಸೇರಿದಂತೆ ಒಟ್ಟು 55 ಕೆ.ಜಿ. ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಮದ್ರಾಸ್ ಕಿಚನ್‌ನಲ್ಲಿ 5 ಕೆ.ಜಿ. ಹಸಿ ಬಟಾಣಿ, ಟೆಸ್ಕಾನ್ ಹೋಟೆಲ್‌ನಲ್ಲಿ 5 ಕೆ.ಜಿ. ಅಣಬೆ ವಶಕ್ಕೆ ಪಡೆಯಲಾಗಿದೆ. ಸೆಂಚೆಜ್ ಹೋಟೆಲ್‌ನಲ್ಲಿ 3 ಕೆ.ಜಿ. ಮೀನು, 7 ಕೆ.ಜಿ. ಕೇಕ್, ಆಲೂಗಡ್ಡೆ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಶೀತಲೀಕರಣ ಮಾಡದೇ ಮಾಂಸ ಸಂಗ್ರಹ

ಯುಬಿ ಸಿಟಿ ಹಾಗೂ ಬ್ರಿಗೇಡ್ ರಸ್ತೆಯ ಸುತ್ತಮುತ್ತ ನಡೆದ ಪರಿಶೀಲನೆ ವೇಳೆ ಕೆಲವು ಹೋಟೆಲ್‌ಗಳಲ್ಲಿ ಚಿಕನ್, ಮಟನ್ ಹಾಗೂ ಮೀನುಗಳನ್ನು ಸರಿಯಾದ ರೀತಿಯಲ್ಲಿ ಶೀತಲೀಕರಣ ಮಾಡದೇ ಸಂಗ್ರಹಿಸಿರುವುದು ಪತ್ತೆಯಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಆಯುಕ್ತರ ಮಾತಿನ ವಿಡಿಯೋ


ಹೋಟೆಲ್​ಗಳ ವಿರುದ್ಧ ಕಾನೂನು ಕ್ರಮಕ್ಕೆ ಆಹಾರ ಇಲಾಖೆ ಸಿದ್ಧತೆ

ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಂಡುಬಂದಿರುವ ಹೋಟೆಲ್‌ಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ. ಪ್ರತಿಷ್ಠಿತ ಹೋಟೆಲ್‌ಗಳ ಅಡುಗೆಮನೆಗಳಲ್ಲೇ ಇಂತಹ ಅಕ್ರಮಗಳು ಪತ್ತೆಯಾಗಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *