ಯೂಟ್ಯೂಬ್Image Credit source: CFOTO/Future Publishing via Getty Images
ನವದೆಹಲಿ, ಆಗಸ್ಟ್ 16: ಯೂಟ್ಯೂಬ್ ತನ್ನ ಯೂಟ್ಯೂಬ್ ಪಾರ್ಟ್‌ನರ್ ಪ್ರೋಗ್ರಾಂಗೆ (YPP) ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಘೋಷಿಸಿದೆ. 2018ರ ನಂತರ ಯೂಟ್ಯೂಬ್ ಅರ್ಹತಾ ನಿಯಮಗಳಲ್ಲಿ (Youtube eligibility rules) ಮಾಡುತ್ತಿರುವ ಪ್ರಮುಖ ಬದಲಾವಣೆ ಇದಾಗಿದ್ದು, 2027ರ ಫೆಬ್ರವರಿ 1ರಿಂದ ಹೊಸದಾಗಿ ಸೇರ್ಪಡೆಯಾಗುವ ಕ್ರಿಯೇಟರ್ಸ್‌ಗಳಿಗೆ ಇದು ಅನ್ವಯಿಸಲಿದೆ. ಯೂಟ್ಯೂಬ್ನಲ್ಲಿ ಹೊಸದಾಗಿ ಚಾನಲ್ ಆರಂಭಿಸಿ, ಆದಾಯ ಗಳಿಸಲು ಬಯಸುವ ಕಂಟೆಂಟ್ ಕ್ರಿಯೇಟರ್ಸ್ಗೆ (content creators) ತುಸು ಕ್ಲಿಷ್ಟಕರ ಸವಾಲು ಇರಲಿದೆ.
ಜಾಹೀರಾತು (Ads) ಮತ್ತು ಯೂಟ್ಯೂಬ್ ಪ್ರೀಮಿಯಂ (YouTube Premium) ಮೂಲಕ ಗಳಿಕೆ ಆರಂಭಿಸಲು ಹೊಸ ಕ್ರಿಯೇಟರ್ಸ್‌ಗಳು ಇನ್ಮುಂದೆ ಹೆಚ್ಚಿನ ಅರ್ಹತೆ ಹೊಂದಿರಬೇಕಾಗುತ್ತದೆ:
- ವೀಕ್ಷಣಾ ಅವಧಿ (Watch Hours): ಕಳೆದ 365 ದಿನಗಳಲ್ಲಿ 8,000 ಅರ್ಹ ವಾಚ್ ಅವರ್ಸ್ ಹೊಂದಿರಬೇಕು. ಹಿಂದೆ ಇದು 4,000 ಗಂಟೆಗಳಷ್ಟಿತ್ತು. ವಾಟ್ ಅವರ್ಸ್ ಎಂದರೆ ಒಂದು ಚಾನಲ್ನ ಎಲ್ಲಾ ವಿಡಿಯೋಗಳನ್ನು ಸೇರಿಸಿ ವೀಕ್ಷಕರು ಒಟ್ಟಾರೆ ಎಷ್ಟು ಗಂಟೆ ವೀಕ್ಷಿಸಿದ್ದಾರೆ ಎಂಬುದು.
- ಶಾರ್ಟ್ಸ್ ವೀಕ್ಷಣೆ (Shorts Views): ಕಳೆದ 90 ದಿನಗಳಲ್ಲಿ 2 ಕೋಟಿ ಶಾರ್ಟ್ಸ್ ವೀವ್ಸ್ ಪಡೆದಿರಬೇಕು. ಹಿಂದೆ 1 ಕೋಟಿ ಇತ್ತು.
- ಸಬ್‌ಸ್ಕ್ರೈಬರ್‌ಗಳು: ಕನಿಷ್ಠ 1,000 ಸಬ್‌ಸ್ಕ್ರೈಬರ್ ಹೊಂದಿರಬೇಕೆಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ.
ವೀಕ್ಷಣಾ ಅವಧಿ ಮತ್ತು ಶಾರ್ಟ್ಸ್ ವೀಕ್ಷಣೆಯ ನಿಯಮಗಳಲ್ಲಿ ಮಾನದಂಡವು ಎರಡು ಪಟ್ಟು ಹೆಚ್ಚಾಗಿರುವುದನ್ನು ಗಮನಿಸಬೇಕು. ಈಗಾಗಲೇ YPP ಸೇರಿರುವ ಹಾಲಿ ಯೂಟ್ಯೂಬರ್‌ಗಳಿಗೆ ಈ ಹೊಸ ನಿಯಮಗಳು ಅನ್ವಯಿಸುವುದಿಲ್ಲ, ಅವರ ಆದಾಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.
ಕೃತಕ ಬುದ್ಧಿಮತ್ತೆ (AI) ಮತ್ತು ನಕಲಿ ವೀಡಿಯೊಗಳಿಗೆ ಕಟ್ಟುನಿಟ್ಟಿನ ತಡೆ
ಎಐ (AI) ಬಳಸಿ ದೊಡ್ಡ ಸಂಖ್ಯೆಯಲ್ಲಿ, ಮತ್ತು ಒಂದೇ ಶೈಲಿ ಹಾಗೂ ಮಾದರಿಯಲ್ಲಿ (Template-based) ದೊಡ್ಡ ಸಂಖ್ಯೆಯಲ್ಲಿ ನಿರ್ಮಿಸುವ ಕಂಟೆಂಟ್ಗೆ ಕಡಿವಾಣ ಹಾಕಲು ನಿಯಮ ಬಿಗಿಗೊಳಿಸಲಾಗಿದೆ.
ವೀಡಿಯೊಗಳಲ್ಲಿ ಕ್ರಿಯೇಟರ್ಸ್ ಸ್ವಂತ ಧ್ವನಿ, ನಿರೂಪಣೆ, ಎಡಿಟಿಂಗ್ ಅಥವಾ ಹೊಸ ವಿಷಯಗಳನ್ನು ಸೇರಿಸದಿದ್ದರೆ ಅಂತಹ ಚಾನೆಲ್‌ಗಳು ಡಿ-ಮಾನಿಟೈಸ್ (Demonetize) ಆಗುವ ಸಾಧ್ಯತೆಯಿದೆ.
ಇದನ್ನೂ ಓದಿ: ತೆರಿಗೆದಾರರಿಗೆ FAST-DS ಸ್ಕೀಮ್; ವಿದೇಶಿ ಆಸ್ತಿಗಳನ್ನು ಸ್ವಯಂ ಆಗಿ ಘೋಷಿಸಲು ಹೊಸ ಯೋಜನೆ
ಫ್ಯಾನ್ ಫಂಡಿಂಗ್ ಮತ್ತು ಶಾಪಿಂಗ್‌ಗೆ ಹಳೆಯ ನಿಯಮವೇ ಅನ್ವಯ
ಸೂಪರ್ ಚಾಟ್, ಚಾನೆಲ್ ಮೆಂಬರ್‌ಶಿಪ್ ಮತ್ತು ಯೂಟ್ಯೂಬ್ ಶಾಪಿಂಗ್ (Shopping) ಫೀಚರ್‌ಗಳ ಮೂಲಕ ಗಳಿಸುವ ಫ್ಯಾನ್ ಫಂಡಿಂಗ್ ಅರ್ಹತಾ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಯೂಟ್ಯೂಬ್‌ನ ಈ ಕ್ರಮವು ಪ್ಲಾಟ್‌ಫಾರ್ಮ್‌ನಲ್ಲಿ ಗುಣಮಟ್ಟದ ಹಾಗೂ ಮೂಲ ಸೃಜನಶೀಲ (Original) ವೀಡಿಯೊಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ