
ಚಿಕ್ಕಬಳ್ಳಾಪುರ ಜಿಲ್ಲೆಯೂ ಹಣ್ಣು, ತರಕಾರಿ ಮತ್ತು ದ್ರಾಕ್ಷಿ ಬೆಳೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಈ ಬಾರಿ ಜಿಲ್ಲೆಯಾದ್ಯಂತ ಬರೋಬ್ಬರಿ 5,000 ಹೆಕ್ಟೇರ್ ಪ್ರದೇಶದಲ್ಲಿ ವೈವಿಧ್ಯಮಯ ದ್ರಾಕ್ಷಿ ಬೆಳೆಯಲಾಗುತ್ತಿದೆ. ದಿಲ್ ಖುಷ್ ಎಂಬ ವಿಶೇಷ ತಳಿಗೆ ಸದ್ಯ ಭಾರೀ ಬೇಡಿಕೆ ಬಂದಿದೆ. ಹಾಗಾಗಿ ರೈತರು ಮಂದಹಾಸ ಬೀರಿದ್ದಾರೆ.

ರಣ ಬಿಸಿಲಿನ ನಡುವೆಯೂ, ವಿಶೇಷವಾಗಿ ‘ದಿಲ್ ಖುಷ್’ ತಳಿಯ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದೆ. ಸದ್ಯ ಈ ವಿಶಿಷ್ಟ ತಳಿಯ ದ್ರಾಕ್ಷಿಯು ಮಾರುಕಟ್ಟೆಯಲ್ಲಿ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ.

ದ್ರಾಕ್ಷಿ ಬೆಳೆಗಾರರಿಗೆ ಈ ವರ್ಷ ಉತ್ತಮ ಬೆಲೆ ಸಿಗುತ್ತಿದೆ. ವರ್ತಕರು ಸ್ವತಃ ತೋಟಗಳಿಗೆ ಬಂದು, ರೈತರಿಗೆ ಪ್ರತಿ ಕೆ.ಜಿ ದ್ರಾಕ್ಷಿಗೆ 50 ರೂಪಾಯಿಯಂತೆ ನೀಡಿ ನೇರವಾಗಿ ಖರೀದಿಸುತ್ತಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ದ್ರಾಕ್ಷಿಯ ಇಳುವರಿ ಕಡಿಮೆಯಾಗಿರುವುದರಿಂದ, ಅಲ್ಲಿನ ದೊಡ್ಡ ದೊಡ್ಡ ವರ್ತಕರು ಇದೀಗ ಚಿಕ್ಕಬಳ್ಳಾಪುರದ ರೈತರತ್ತ ಮುಖ ಮಾಡಿದ್ದಾರೆ. ಇದು ಸ್ಥಳೀಯ ರೈತರಿಗೆ ವರದಾನವಾಗಿದ್ದು, ಜಣ ಜಣ ಕಾಂಚಣ ಎಣಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರದ ಈ ದ್ರಾಕ್ಷಿಗೆ ಬಾಂಗ್ಲಾದೇಶ ಸೇರಿದಂತೆ ನೆರೆಯ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಹೀಗಾಗಿ ವ್ಯಾಪಾರಿಗಳು ರೈತರನ್ನು ಹುಡುಕಿಕೊಂಡು ಬಂದು ಮುಂಗಡ ಹಣ ನೀಡಿ ತೋಟದಲ್ಲೇ ದ್ರಾಕ್ಷಿಯನ್ನು ಖರೀದಿಸುತ್ತಿದ್ದಾರೆ.

ದ್ರಾಕ್ಷಿ ಬೆಳೆಗಾರರಾದ ವೆಂಕಟರೆಡ್ಡಿ ಮತ್ತು ಚಿಕ್ಕನಾಗವಳ್ಳಿ ಗ್ರಾಮದ ಕೊಂಡಪ್ಪನವರಂತಹ ಅನೇಕ ರೈತರು, ಈ ವರ್ಷ ತಮ್ಮ ಬೆಳೆಗೆ ಸಿಕ್ಕಿರುವ ಉತ್ತಮ ಬೆಲೆ ಮತ್ತು ಬೇಡಿಕೆಯನ್ನು ಕಂಡು ಸಂತಸಗೊಂಡಿದ್ದಾರೆ.
Published On – 8:07 pm, Sun, 3 May 26