‘ರಣವೀರ್ ಸಿಂಗ್‌ ಶಕ್ತಿಮಾನ್ ಆಗಲು ಮುಖೇಶ್ ಖನ್ನಾ ಒಪ್ಪಿಲ್ಲ ಎಂಬುದೆಲ್ಲ ಪ್ರಚಾರದ ಗಿಮಿಕ್’ – Kannada News

ಭಾರತದ ಮೊದಲ ಸೂಪರ್ ಹೀರೋ ‘ಶಕ್ತಿಮಾನ್’ (Shaktimaan) ಮತ್ತೆ ಸುದ್ದಿಯಲ್ಲಿದೆ. ಈ ಐಕಾನಿಕ್ ಕಥೆಯನ್ನು ಬಿಗ್ ಸ್ಕ್ರೀನ್ ಮೇಲೆ ತರಲು ಬಾಲಿವುಡ್‌ನಲ್ಲಿ ಪ್ರಯತ್ನ ನಡೆಯುತ್ತಿರುವುದು ಹಳೆಯ ವಿಷಯವಾದರೂ, ಶಕ್ತಿಮಾನ್ ಪಾತ್ರಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿಯೇ ಸದ್ಯದ ದೊಡ್ಡ ಚರ್ಚೆ. ಶಕ್ತಿಮಾನ್ ಪಾತ್ರಧಾರಿ ಹಾಗೂ ನಿರ್ಮಾಪಕ ಮುಖೇಶ್ ಖನ್ನಾ (Mukesh Khanna) ಅವರು ರಣವೀರ್ ಸಿಂಗ್ ಆಯ್ಕೆಯನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಆದರೆ, ಈಗ ಈ ಇಡೀ ವಿವಾದದ ಹಿಂದೆ ಪ್ರಚಾರದ ಗಿಮಿಕ್ ಅಡಗಿದೆ ಎಂದು ಸಹನಟ ಲಲಿತ್ ಪರಿಮೂ ಹೇಳಿದ್ದಾರೆ.

‘ರಣವೀರ್ ಸಿಂಗ್ ಅವರು ಮುಖೇಶ್ ಖನ್ನಾ ಆಫೀಸ್‌ಗೆ ಬಂದು, ಶಕ್ತಿಮಾನ್ ಪಾತ್ರ ನೀಡುವಂತೆ ಮೂರು ಗಂಟೆಗಳ ಕಾಲ ಕಾಡಿ ಬೇಡಿದರೂ ಮುಖೇಶ್ ಒಪ್ಪಲಿಲ್ಲ’ ಎಂದು ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಲಲಿತ್ ಪರಿಮೂ ಅವರಿಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು, ‘ನಾನು ಮುಖೇಶ್ ವಿರುದ್ಧ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ ಇವತ್ತಿನ ಕಾಲ ಪಬ್ಲಿಸಿಟಿ ಜಮಾನಾ. ಸಿನಿಮಾ ಅಥವಾ ಟಿವಿ ಶೋಗಳಿಗಾಗಿ ಜನ ಬೇಕಂತಲೇ ಇಂತಹ ಪಬ್ಲಿಸಿಟಿ ಗಿಮಿಕ್‌ಗಳನ್ನು ಮಾಡುತ್ತಾರೆ. ಜನಮನದಲ್ಲಿ ಸುದ್ದಿ ಸೃಷ್ಟಿಸಲು ಏನಾದರೊಂದು ಮಾಡಬೇಕಾಗುತ್ತದೆ. ಮುಖೇಶ್ ಖನ್ನಾ ಕೂಡ ಅದೇ ಹಾದಿಯಲ್ಲಿ ಯೋಚಿಸುತ್ತಿದ್ದಾರೆ ಅನ್ನಿಸುತ್ತಿದೆ’ ಎಂದಿದ್ದಾರೆ.

‘ಅಲ್ಲಿ ನಡೆದ ನಿಜವಾದ ಸತ್ಯ ಏನೆಂಬುದು ಯಾರಿಗೂ ಗೊತ್ತಿಲ್ಲ, ಅದನ್ನು ಕಾಲವೇ ನಿರ್ಧರಿಸಬೇಕು’ ಎಂದು ಲಲಿತ್ ಮಾರ್ಮಿಕವಾಗಿ ನುಡಿದಿದ್ದಾರೆ. ಇದೇ ವೇಳೆ ರಣವೀರ್ ಸಿಂಗ್ ಅವರ ನಟನೆಯನ್ನು ಲಲಿತ್ ಪರಿಮೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇತ್ತೀಚೆಗಷ್ಟೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್’ ಸಿನಿಮಾದಲ್ಲಿ ರಣವೀರ್ ನಟನೆಯನ್ನು ಕೊಂಡಾಡಿದ ಅವರು, ‘ರಣವೀರ್ ಅದ್ಭುತ ನಟ, ಅವರಿಗೆ ಶಕ್ತಿಮಾನ್ ಪಾತ್ರವನ್ನು ನಿಭಾಯಿಸುವ ಎಲ್ಲಾ ಶಕ್ತಿ ಇದೆ’ ಎಂದಿದ್ದಾರೆ ಲಲಿತ್ ಪರಿಮೂ.

ಆದರೆ, ಟಿವಿ ಶೋ ನೀಡಿದ ಮ್ಯಾಜಿಕ್ ಅನ್ನು ಸಿನಿಮಾ ನೀಡಬಲ್ಲದೇ ಎಂಬ ಅನುಮಾನವನ್ನೂ ಲಲಿತ್ ಪರಿಮೂ ಅವರು ವ್ಯಕ್ತಪಡಿಸಿದ್ದಾರೆ. ‘ಶಕ್ತಿಮಾನ್ 350 ಎಪಿಸೋಡ್‌ಗಳಲ್ಲಿ ಸಾಕಷ್ಟು ಕಥೆಯನ್ನು ಹೇಳಿದೆ. ಇಂದಿನ ಜನರೇಷನ್ ಸೂಪರ್ ಹೀರೋ ಸಿನಿಮಾವನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರೀಕ್ಷಿಸುತ್ತದೆ. ತಾಂತ್ರಿಕವಾಗಿ ಸಿನಿಮಾ ಅತಿ ಉನ್ನತ ಮಟ್ಟದಲ್ಲಿ ಮೂಡಿಬರದಿದ್ದರೆ, ಹಳೆಯ ಮ್ಯಾಜಿಕ್ ಮರುಸೃಷ್ಟಿಸುವುದು ಕಷ್ಟ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಹುಡುಗಿ ಸಿಕ್ಕರೆ ಮದುವೆ ಆಗ್ತೀನಿ: 67ನೇ ವಯಸ್ಸಿನಲ್ಲಿ ಆಸೆ ತಿಳಿಸಿದ ‘ಶಕ್ತಿಮಾನ್’ ನಟ ಮುಕೇಶ್ ಖನ್ನಾ

ಈ ಹಿಂದೆ ಮುಖೇಶ್ ಖನ್ನಾ ಯೂಟ್ಯೂಬ್ ಸಂದರ್ಶನವೊಂದರಲ್ಲಿ ರಣವೀರ್ ಸಿಂಗ್ ವಿರುದ್ಧ ಕಿಡಿಕಾರಿದ್ದರು. ‘ಆ ಪಾಪದ ಹುಡುಗ ರಣವೀರ್ ನನ್ನ ಎದುರು ಮೂರು ಗಂಟೆ ಕುಳಿತಿದ್ದ ಎಂಬುದು ನಿಜ. ಆದರೆ ಆತನ ಮುಖದಲ್ಲಿ ಶಕ್ತಿಮಾನ್ ಪಾತ್ರಕ್ಕೆ ಬೇಕಾದ ತೇಜಸ್ಸು ಇಲ್ಲ. ಆತನನ್ನು ನೋಡಿದರೆ ಯಾರನ್ನೋ ಮೋಸ ಮಾಡುವ ಚಂಚಲ ಸ್ವಭಾವದವನಂತೆ ಕಾಣುತ್ತಾನೆ. ಬೇಕಿದ್ದರೆ ಆತ ವಿಲನ್ ಪಾತ್ರ ಮಾಡಲಿ, ಶಕ್ತಿಮಾನ್ ಆಗಲು ಸಾಧ್ಯವಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *