ಖ್ಯಾತ ನಟ ರವಿ ಮೋಹನ್ ಹಾಗೂ ಅವರ ಪತ್ನಿ ಆರತಿ ನಡುವಿನ ವಿಚ್ಛೇದನ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಪತ್ನಿ ಬೇಡಿಕೆಯಿಟ್ಟಿದ್ದ ಬೃಹತ್ ಮೊತ್ತದ ಜೀವನಾಂಶವನ್ನು ಕೋರ್ಟ್ ನಿರಾಕರಿಸಿದೆ. ಜೊತೆಗೆ, ತಂದೆಗೆ ತನ್ನ ಮಕ್ಕಳನ್ನು ಭೇಟಿಯಾಗಲು ಮುಕ್ತ ಅವಕಾಶ ನೀಡಿದೆ. ಚಿತ್ರರಂಗದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸ್ಟಾರ್ ದಂಪತಿಯ ಕಾನೂನು ಹೋರಾಟದಲ್ಲಿ ರವಿ ಮೋಹನ್ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತೆ ಆಗಿದೆ.
ಕೋರ್ಟ್ ನೀಡಿದ ಆದೇಶವೇನು?
ನಟ ರವಿ ಮೋಹನ್ ಅವರಿಂದ ಪ್ರತಿ ತಿಂಗಳು 40 ಲಕ್ಷ ರೂಪಾಯಿ ಜೀವನಾಂಶ ಕೊಡಿಸಬೇಕು ಎಂದು ಪತ್ನಿ ಆರತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಚೆನ್ನೈನ ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿದೆ. ಅಂತಿಮ ತೀರ್ಪು ಬರುವವರೆಗೂ ಪ್ರತಿ ತಿಂಗಳು 3 ಲಕ್ಷ ರೂಪಾಯಿ ನೀಡುವಂತೆ ನಟನಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಮಕ್ಕಳನ್ನು ಭೇಟಿಯಾಗಲು ಗ್ರೀನ್ ಸಿಗ್ನಲ್
ದುಡ್ಡಿನ ವಿಚಾರದ ಜೊತೆಗೆ ಮಕ್ಕಳ ಭೇಟಿಗೆ ಸಂಬಂಧಿಸಿದಂತೆ ಕೋರ್ಟ್ ಮಹತ್ವದ ಆದೇಶ ನೀಡಿದೆ. ರವಿ ಮೋಹನ್ ತಮ್ಮ ಇಬ್ಬರು ಗಂಡು ಮಕ್ಕಳಾದ ಆರವ್ ಮತ್ತು ಅಯಾನ್ ಅವರನ್ನು ಭೇಟಿ ಮಾಡಲು ಯಾವುದೇ ನಿರ್ಬಂಧ ಇರಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
₹40 lakh per month maintenance claim by Aarti was not granted. Aarthi will receive ₹3 lakh per month from #RaviMohan until the divorce proceedings conclude⚖️ pic.twitter.com/IS1qXZaBn8
— AmuthaBharathi (@CinemaWithAB) July 27, 2026
ನಟನಿಗೆ ಕಾಡಿದ್ದ ಬೇಸರವೇನು?
ಪತ್ನಿ ಆರತಿ ತನ್ನ ಮಕ್ಕಳನ್ನು ಭೇಟಿ ಮಾಡಲು ಬಿಡುತ್ತಿಲ್ಲ ಎಂದು ರವಿ ಮೋಹನ್ ಈ ಹಿಂದೆ ಸಾರ್ವಜನಿಕವಾಗಿ ಆರೋಪಿಸಿದ್ದರು. ಮಕ್ಕಳಿಗೆ ಭದ್ರತೆ ನೀಡಿ ಶಾಲೆಗೆ ಕಳುಹಿಸಲಾಗುತ್ತಿದೆ ಎಂದು ದೂರಿದ್ದರು. ಅಷ್ಟೇ ಅಲ್ಲ, ಮಕ್ಕಳು ಕಾರು ಅಪಘಾತಕ್ಕೆ ಒಳಗಾಗಿದ್ದಾಗಲೂ ತಮಗೆ ಮಾಹಿತಿ ನೀಡಿರಲಿಲ್ಲ ಎಂದು ತೀವ್ರ ಆತಂಕ ಹಾಗೂ ಬೇಸರ ವ್ಯಕ್ತಪಡಿಸಿದ್ದರು. ಈ ಆದೇಶದ ಮೂಲಕ ನಟನಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.
ಇದನ್ನೂ ಓದಿ: ವಿಚ್ಛೇದನ ಸಿಗೋ ತನಕ ಸಿನಿಮಾ ಮಾಡಲ್ಲ ಅಂತ ಹೇಳಿ ಈಗ ಉಲ್ಟಾ ಹೊಡೆದ ಜಯಂ ರವಿ
ಅಂತ್ಯದತ್ತ 15 ವರ್ಷಗಳ ದಾಂಪತ್ಯ
ರವಿ ಮೋಹನ್ ಹಾಗೂ ಆರತಿ 2009ರ ಜೂನ್ ತಿಂಗಳಲ್ಲಿ ವಿವಾಹವಾಗಿದ್ದರು. ಸುಮಾರು 15 ವರ್ಷಗಳ ಕಾಲ ಒಟ್ಟಿಗೆ ಇದ್ದ ಇವರ ಸಂಸಾರದಲ್ಲಿ ನಂತರ ಭಿನ್ನಾಭಿಪ್ರಾಯಗಳು ಮೂಡಿದವು. ಪರಿಣಾಮ, 2024ರ ಸೆಪ್ಟೆಂಬರ್‌ನಲ್ಲಿ ರವಿ ಮೋಹನ್ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ತಮ್ಮ ಗಮನಕ್ಕೆ ಬಾರದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರತಿ ಆರೋಪಿಸಿದ್ದರು. ಸದ್ಯ ಮಧ್ಯಂತರ ಆದೇಶ ಹೊರಬಿದ್ದಿದ್ದು, ಮುಖ್ಯ ವಿಚ್ಛೇದನ ಪ್ರಕರಣದ ವಿಚಾರಣೆ ಮುಂದುವರಿದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 2:54 pm, Wed, 29 July 26