ರಷ್ಯಾ-ಉಕ್ರೇನ್ ಯುದ್ಧಕ್ಕೆ ಬೀಳುತ್ತಾ ತೆರೆ? ಶಾಂತಿ ಮಾತುಕತೆಯ ಸುಳಿವು ನೀಡಿದ ಪುಟಿನ್ – Kannada News

ಮಾಸ್ಕೋ, ಜೂನ್ 5: ರಷ್ಯಾ ಮತ್ತು ಉಕ್ರೇನ್ (Ukraine) ನಡುವಿನ ದೀರ್ಘಾವಧಿಯ ಯುದ್ಧಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಪ್ರಸ್ತಾಪದ ಅಡಿಯಲ್ಲಿ ಯುದ್ಧವನ್ನು ಕೊನೆಗೊಳಿಸಿ, ಶಾಂತಿ ಮಾತುಕತೆಗೆ ತಾವು ಸಿದ್ಧರಿರುವುದಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸುಳಿವು ನೀಡಿದ್ದಾರೆ. ಅಂತಾರಾಷ್ಟ್ರೀಯ ಸಮಾವೇಶವೊಂದರಲ್ಲಿ ಮಾತನಾಡಿದ ವ್ಲಾಡಿಮಿರ್ ಪುಟಿನ್, “ನಾವು ಮೊದಲಿನಿಂದಲೂ ಶಾಂತಿ ಮಾತುಕತೆಯ ಪರವಾಗಿಯೇ ಇದ್ದೇವೆ. ಡೊನಾಲ್ಡ್ ಟ್ರಂಪ್ ಯುದ್ಧವನ್ನು ಕೊನೆಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಅವರ ಪ್ರಸ್ತಾಪಗಳನ್ನು ನಾವು ಸ್ವಾಗತಿಸುತ್ತೇವೆ” ಎಂದು ಹೇಳಿದ್ದಾರೆ.

ಯುದ್ಧ ನಿಲ್ಲಿಸಲು ರಷ್ಯಾ ತನ್ನದೇ ಆದ ಕೆಲವು ಷರತ್ತುಗಳನ್ನು ವಿಧಿಸಿದೆ. ಪ್ರಸ್ತುತ ಯುದ್ಧಭೂಮಿಯಲ್ಲಿನ ವಾಸ್ತವ ಸ್ಥಿತಿ ಮತ್ತು ಈ ಹಿಂದೆ ಇಸ್ತಾನ್‌ಬುಲ್‌ನಲ್ಲಿ ನಡೆದ ಮಾತುಕತೆಯ ನಿಯಮಗಳನ್ನು ಆಧರಿಸಿ ಶಾಂತಿ ಒಪ್ಪಂದ ನಡೆಯಬೇಕು ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಡೊನಾಲ್ಡ್ ಟ್ರಂಪ್ ರಷ್ಯಾ-ಉಕ್ರೇನ್ ಯುದ್ಧವನ್ನು 24 ಗಂಟೆಗಳಲ್ಲಿ ನಿಲ್ಲಿಸುವುದಾಗಿ ಹೇಳುತ್ತಾ ಬಂದಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಈ ಹಿಂದೆ ತಮ್ಮ ಭೂಭಾಗವನ್ನು ರಷ್ಯಾಕ್ಕೆ ಬಿಟ್ಟುಕೊಡುವ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಅಮೆರಿಕದಿಂದ ಸಿಗುತ್ತಿರುವ ಮಿಲಿಟರಿ ಧನಸಹಾಯದ ಕೊರತೆ ಮತ್ತು ಜಾಗತಿಕ ಒತ್ತಡದಿಂದಾಗಿ ಉಕ್ರೇನ್ ಕೂಡ ಈಗ ಮಣಿಯುವ ಪರಿಸ್ಥಿತಿಗೆ ಬಂದು ತಲುಪಿದೆ ಎನ್ನಲಾಗಿದೆ.

ಇದನ್ನೂ ಓದಿ: Video: ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ, ವಿಡಿಯೋ ಇಲ್ಲಿದೆ

ಕಳೆದ ವರ್ಷ ಅಲಾಸ್ಕಾದ ಆಂಕರೇಜ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆದ ಭೇಟಿಯನ್ನು ನೆನಪಿಸಿಕೊಂಡ ಪುಟಿನ್, ಆ ಮಾತುಕತೆಯೇ ಯುದ್ಧದ ಅಂತ್ಯಕ್ಕೆ ದಾರಿಯಾಗಬಲ್ಲದು ಎಂದಿದ್ದಾರೆ. “ಆಂಕರೇಜ್ ಸಭೆಯಲ್ಲಿ ಚರ್ಚಿಸಲಾದ ರಾಜಿ ಸೂತ್ರಗಳಿಗೆ ರಷ್ಯಾ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಈಗ ಉಕ್ರೇನ್ ಕೂಡ ಅದಕ್ಕೆ ಸಮ್ಮತಿಸಿದರೆ, ಈ ಸಂಘರ್ಷವು ಅತ್ಯಂತ ಸಹಜವಾಗಿ ಮತ್ತು ಶೀಘ್ರವಾಗಿ ಕೊನೆಗೊಳ್ಳುತ್ತದೆ” ಎಂದು ಪುಟಿನ್ ಹೇಳಿದ್ದಾರೆ. ಆದರೆ ಆ ರಾಜಿ ಸೂತ್ರಗಳು ಯಾವುವು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

ಮತ್ತೊಂದೆಡೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾ ಅಧ್ಯಕ್ಷರಿಗೆ ಬಹಿರಂಗ ಪತ್ರ ಬರೆಯುವ ಮೂಲಕ ನೇರ ಮಾತುಕತೆಗೆ ಪ್ರಸ್ತಾಪ ಇಟ್ಟಿದ್ದಾರೆ. “ಈ ಯುದ್ಧವನ್ನು ಕೊನೆಗೊಳಿಸಲು ನಾವು ಮತ್ತು ನೀವು ಮುಖಾಮುಖಿ ಭೇಟಿಯಾಗುವುದು ಅಗತ್ಯ” ಎಂದು ಝೆಲೆನ್ಸ್ಕಿ ಕೋರಿದ್ದಾರೆ. ಅಲ್ಲದೆ, ಯಾವುದೇ ಪ್ರಮುಖ ಮಾತುಕತೆಗೂ ಮುನ್ನ ಸಂಪೂರ್ಣ ಕದನ ವಿರಾಮ ಘೋಷಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: 

2022ರಲ್ಲಿ ರಷ್ಯಾದ ಆಕ್ರಮಣದೊಂದಿಗೆ ಆರಂಭವಾದ ಈ ಯುದ್ಧವನ್ನು ನಿಲ್ಲಿಸಲು ಈ ಹಿಂದೆ ಜಿನೀವಾ, ಅಬುಧಾಬಿ ಮತ್ತು ಇಸ್ತಾನ್‌ಬುಲ್‌ನಲ್ಲಿ ನಡೆದ ಮಾತುಕತೆಗಳು ವಿಫಲವಾಗಿದ್ದವು. ಸದ್ಯ ಪುಟಿನ್ ಮತ್ತು ಝೆಲೆನ್ಸ್ಕಿ ಇಬ್ಬರೂ ಮಾತುಕತೆಯ ಸೂಚನೆ ನೀಡಿದ್ದರೂ, ಭೂಪ್ರದೇಶದ ಹಕ್ಕು ಮತ್ತು ಭದ್ರತೆಯ ವಿಚಾರದಲ್ಲಿ ಇಬ್ಬರ ನಡುವೆ ಇರುವ ಭಿನ್ನಾಭಿಪ್ರಾಯಗಳ ಕಾರಣದಿಂದ ಈ ಮಾತುಕತೆ ಫಲಪ್ರದವಾಗಲಿದೆಯೇ ಎಂಬ ಅನುಮಾನ ಮಾತ್ರ ಹಾಗೆಯೇ ಉಳಿದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:21 pm, Fri, 5 June 26

Source link

Leave a Reply

Your email address will not be published. Required fields are marked *