Headlines

ರಸ್ತೆ ಅಪಘಾತ ಮತ್ತು ಅತಿ ವೇಗ ಚಾಲನೆಯಲ್ಲಿ ಇಡೀ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ! – Kannada News | Bengaluru Tops India in Over Speeding and Straight Road Crashes; Second in Total Accidents

ರಸ್ತೆ ಅಪಘಾತ ಮತ್ತು ಅತಿ ವೇಗ ಚಾಲನೆಯಲ್ಲಿ ಇಡೀ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ!

ಬೆಂಗಳೂರು, ಜೂನ್ 29: ಸಿಲಿಕಾನ್ ಸಿಟಿ ಬೆಂಗಳೂರು ರಸ್ತೆ ಸುರಕ್ಷತೆಯಲ್ಲಿ ಮತ್ತೊಮ್ಮೆ ಆತಂಕಕಾರಿ ದಾಖಲೆ ಬರೆದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ 2024ರ ರಸ್ತೆ ಅಪಘಾತಗಳ (Road Accidents) ವರದಿಯ ಪ್ರಕಾರ, ದೇಶದ ಪ್ರಮುಖ ನಗರಗಳ ಪೈಕಿ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳು ಹಾಗೂ ಅತಿ ವೇಗದ (Over-speeding) ಚಾಲನೆಯಿಂದ ನಡೆಯುವ ರಸ್ತೆ ದುರಂತಗಳಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

ನೇರ ರಸ್ತೆಗಳಲ್ಲಿ ಭೀಕರ ಅಪಘಾತಗಳು

ಸಾಮಾನ್ಯವಾಗಿ ತಿರುವುಗಳು ಅಥವಾ ಕೆಟ್ಟ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುವುದು ಸಹಜ. ಆದರೆ, ಬೆಂಗಳೂರಿನಲ್ಲಿ ನೇರ ಮತ್ತು ಸುಸ್ಥಿತಿಯಲ್ಲಿರುವ ರಸ್ತೆಗಳಲ್ಲೇ ಅತಿ ಹೆಚ್ಚು ಅಪಘಾತಗಳು ವರದಿಯಾಗಿವೆ. ವರದಿಯ ಪ್ರಕಾರ, ನಗರದ ನೇರ ರಸ್ತೆಗಳಲ್ಲಿ ಬರೋಬ್ಬರಿ 4,161 ಅಪಘಾತಗಳು ಸಂಭವಿಸಿದ್ದು, ಇವುಗಳಲ್ಲಿ 766 ಜನರು ಸಾವನ್ನಪ್ಪಿದ್ದಾರೆ ಮತ್ತು 3,463 ಜನರು ಗಾಯಗೊಂಡಿದ್ದಾರೆ. ಇದಕ್ಕೆ ವಿರುದ್ಧವಾಗಿ, ತಿರುವು ರಸ್ತೆಗಳಲ್ಲಿ (Curved roads) 415 ಅಪಘಾತಗಳು ನಡೆದು 87 ಜನರು ಮೃತಪಟ್ಟಿದ್ದಾರೆ. ಆಶ್ಚರ್ಯಕರವಾಗಿ, ಗುಂಡಿಗಳಿಂದಾಗಿ (Potholes) ಕೇವಲ ಎರಡು ಅಪಘಾತಗಳು ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ನಿರ್ಮಾಣ ಹಂತದಲ್ಲಿರುವ ರಸ್ತೆಗಳಲ್ಲಿ 21 ಅಪಘಾತಗಳು ಸಂಭವಿಸಿದ್ದು, 6 ಮಂದಿ ಜೀವ ಕಳೆದುಕೊಂಡಿದ್ದಾರೆ.

ಅತಿ ವೇಗವೇ ಅಪಘಾತಕ್ಕೆ ಕಾರಣ

ಅತಿ ವೇಗದ ಚಾಲನೆಯ ವಿಭಾಗದಲ್ಲೂ ಬೆಂಗಳೂರು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಅತಿ ವೇಗದಿಂದಾಗಿ ನಗರದಲ್ಲಿ ಒಟ್ಟು 4,290 ಅಪಘಾತಗಳು ಸಂಭವಿಸಿದ್ದು, 776 ಜನರು ಬಲಿಯಾಗಿದ್ದಾರೆ ಹಾಗೂ 3,609 ಜನರು ಗಾಯಗೊಂಡಿದ್ದಾರೆ. ಈ ಪಟ್ಟಿಯಲ್ಲಿ ಮಧ್ಯಪ್ರದೇಶದ ಜಬಲ್ಪುರ ನಗರವು 3,878 ಅಪಘಾತಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದರಿಂದ (Drunken driving) 129 ಅಪಘಾತಗಳು ಸಂಭವಿಸಿದ್ದು, 45 ಜನರು ಮೃತಪಟ್ಟಿದ್ದಾರೆ.

ಒಟ್ಟು ಅಪಘಾತಗಳಲ್ಲಿ ದೇಶದಲ್ಲೇ ಎರಡನೇ ಸ್ಥಾನ

2024 ರಲ್ಲಿ ಒಟ್ಟಾರೆ ಸಂಭವಿಸಿದ ರಸ್ತೆ ಅಪಘಾತಗಳ ಸಂಖ್ಯೆಯನ್ನು ಪರಿಗಣಿಸಿದರೆ, ಬೆಂಗಳೂರು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ದೆಹಲಿಯಲ್ಲಿ 5,657 ಅಪಘಾತಗಳು ನಡೆದು 1,551 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 4,769 ರಸ್ತೆ ಅಪಘಾತಗಳು ದಾಖಲಾಗಿದ್ದು, 894 ಜನರು ಸಾವನ್ನಪ್ಪಿದ್ದಾರೆ ಮತ್ತು 4,022 ಜನರು ಗಾಯಗೊಂಡಿದ್ದಾರೆ. 2023 ಕ್ಕೆ ಹೋಲಿಸಿದರೆ (4,974 ಅಪಘಾತಗಳು, 915 ಸಾವು) ನಗರದಲ್ಲಿ ಅಪಘಾತಗಳ ಸಂಖ್ಯೆ ಶೇ 4.1 ರಷ್ಟು ಕಡಿಮೆಯಾಗಿದೆಯಾದರೂ, 2020 ಕ್ಕೆ ಹೋಲಿಸಿದರೆ (3,233 ಅಪಘಾತಗಳು) ಕಳೆದ ನಾಲ್ಕು ವರ್ಷಗಳಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ಇದನ್ನೂ ಓದಿ ಕೊಪ್ಪಳ: ಭಾನಾಪೂರ ಬಳಿ ಭೀಕರ ಅಪಘಾತ, ನಾಲ್ವರು ಸಾವು

ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳೇ ಹೆಚ್ಚಿನ ಬಲಿ

ನಗರದಲ್ಲಿ ಸಂಭವಿಸಿದ ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳದ್ದೇ ಸಿಂಹಪಾಲು. ಬೈಕ್ ಅಪಘಾತಗಳಿಗೆ ಸಂಬಂಧಿಸಿದಂತೆ 2,175 ಪ್ರಕರಣಗಳು ದಾಖಲಾಗಿದ್ದು, 467 ಸವಾರರು ಮೃತಪಟ್ಟಿದ್ದಾರೆ. ಇನ್ನು ಪಾದಚಾರಿಗಳಿಗೆ ಸಂಬಂಧಿಸಿದಂತೆ 216 ಅಪಘಾತಗಳು ಸಂಭವಿಸಿದ್ದರೂ, ಬಲಿಯಾದ ಪಾದಚಾರಿಗಳ ಸಂಖ್ಯೆ ಬರೋಬ್ಬರಿ 241 ಆಗಿದೆ. ಬಹುತೇಕ ಅಪಘಾತಗಳು (4,213 ಅಪಘಾತಗಳು, 755 ಸಾವು) ಹವಾಮಾನವು ಸಂಪೂರ್ಣ ಸ್ವಚ್ಛವಾಗಿದ್ದ ಹಾಗೂ ಬಿಸಿಲಿದ್ದ ಸಂದರ್ಭದಲ್ಲೇ ನಡೆದಿರುವುದು ವಿಶೇಷವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *