ಬೆಂಗಳೂರು, ಜು.4: ರಾಜಧಾನಿಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಯುವತಿಯೊಬ್ಬಳು ಹಳಿಗೆ ಹಾರಿದ ಪರಿಣಾಮ ಮೆಟ್ರೋ ರೈಲು ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾದ ಘಟನೆ ಇಂದು (ಜು.4) ಮಧ್ಯಾಹ್ನ ನಡೆದಿದೆ. ಬೆಂಗಳೂರಿನ ಹಸಿರು ಮಾರ್ಗದ (Green Line) ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮಧ್ಯಾಹ್ನ ಸುಮಾರು 12:25 ಗಂಟೆಗೆ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ಮೆಟ್ರೋ ಹಳಿಗೆ ಹಾರಿದ್ದಾಳೆ.
ಆದರೆ, ನಿಲ್ದಾಣದ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ತ್ವರಿತ ಕಾರ್ಯಾಚರಣೆಯಿಂದಾಗಿ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಯುವತಿ ಹಳಿಗೆ ಹಾರುತ್ತಿದ್ದಂತೆ ತಕ್ಷಣವೇ ಅಲರ್ಟ್ ಆದ ನಿಲ್ದಾಣ ನಿಯಂತ್ರಕರು ಮತ್ತು ಭದ್ರತಾ ಸಿಬ್ಬಂದಿ ನಿಗದಿತ ತುರ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಹಳಿಯ ಮೇಲಿದ್ದ ಯುವತಿಯನ್ನು ಅತ್ಯಂತ ಜಾಗರೂಕತೆಯಿಂದ, ಯಾವುದೇ ಗಾಯಗಳು ಆಗದಂತೆ ಸುರಕ್ಷಿತವಾಗಿ ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಡಿ ಗ್ರೂಪ್ ನೌಕರ, ಗಂಭೀರ ಗಾಯ
ಈ ಆಕಸ್ಮಿಕ ಘಟನೆಯ ಪರಿಣಾಮವಾಗಿ ಹಸಿರು ಮಾರ್ಗದ ಮೆಟ್ರೋ ರೈಲು ಸಂಚಾರವು ಸುಮಾರು 10 ನಿಮಿಷಗಳ ಕಾಲ ವಿಳಂಬಗೊಂಡಿತು. ಸಿಬ್ಬಂದಿಯು ಹಳಿ ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸಿ, ರೈಲು ಸಂಚಾರಕ್ಕೆ ನಿಗದಿತ ಎಲ್ಲಾ ಸುರಕ್ಷತಾ ನಿಯಮಗಳನ್ನು ಪೂರ್ಣಗೊಳಿಸಿದರು. ತದನಂತರ ಮಧ್ಯಾಹ್ನ 12:34 ಗಂಟೆಗೆ ಮೆಟ್ರೋ ರೈಲು ಸಂಚಾರವನ್ನು ಎಂದಿನಂತೆ ಪುನರಾರಂಭಿಸಲಾಯಿತು. ಸದ್ಯ ಪ್ರಯಾಣಿಕ ಸುರಕ್ಷಿತವಾಗಿದ್ದು, ಆತ ಹಳಿಗೆ ಹಾರಲು ಕಾರಣವೇನೆಂಬುದರ ಬಗ್ಗೆ ಬಿಎಂಆರ್‌ಸಿಎಲ್ ಮತ್ತು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಈ ಹಿಂದೆ ಕೂಡ ಇಂತಹ ಘಟನೆಗಳು ನಡೆದಿತ್ತು. ಅಧಿಕಾರಿಗಳು ಎಷ್ಟೇ ಎಚ್ಚರ ವಹಿಸಿದರು ಈ ರೀತಿ ಘಟನೆಗಳು ನಡೆಯುತ್ತಿದೆ. ಈ ಹಿಂದೆ ಡಿ ಗ್ರೂಪ್ ನೌಕರ ನಮ್ಮ ಮೆಟ್ರೋ ರೈಲು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಬೆಂಗಳೂರು ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಹಸಿರು ಮಾರ್ಗದಲ್ಲಿ ನಡೆದಿತ್ತು. ಸದ್ಯ ಮೆಟ್ರೋ ಅಧಿಕಾರಿಗಳು ವ್ಯಕ್ತಿಯನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಚಿಕಿತ್ಸೆ ನೀಡಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 3:52 pm, Sat, 4 July 26