Headlines

ರಾಜೇಗೌಡ vs ಜೀವರಾಜ್: ಅಂಚೆ ಮತಗಳ ಮರು ಎಣಿಕೆ ಹೈಕೋರ್ಟ್ ಆದೇಶದಿಂದ ಇಲ್ಲಿಯವರೆಗೆ ಆಗಿದ್ದೇನು? ಯಾರಿಗೆ ಗೆಲುವು? – Kannada News | Sringeri Recount Saga: Invalid Ballots Challenge Rajegowda’s Win, EC Decision Awaited

ಚಿಕ್ಕಮಗಳೂರು, ಮೇ. 3: ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಈ ಪ್ರಕ್ರಿಯೆ ಏಳು ಗಂಟೆಗೆ ಆರಂಭವಾಗಿ ದಿನವಿಡೀ ಮುಂದುವರಿದು ಅಂತಿಮವಾಗಿ ಅಂತ್ಯಗೊಂಡಿದೆ. ಈ ಘಟನೆಯ ಕುರಿತು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಪ್ರತಿಕ್ರಿಯಿಸಿದ್ದು, ಸ್ಟ್ರಾಂಗ್ ರೂಂನಿಂದಲೂ ಗೊಂದಲ ಶುರುವಾಗಿದ್ದು, ಇವಿಎಂಗಳನ್ನು ಇರಿಸಿರುವ ಕೋಣೆಯಲ್ಲಿ ಅನಗತ್ಯ ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ಅವರು ಆರೋಪಿಸಿದ್ದಾರೆ. ಒಂಬತ್ತು ಗಂಟೆಗೆ ಎಲ್ಲಾ 22 ಟ್ರಂಕ್‌ಗಳನ್ನು ತೆರೆದು ಬ್ಯಾಲೆಟ್‌ಗಳನ್ನು ಎಣಿಕೆ ಮಾಡಲಾಗಿದೆ. ಅಮಾನ್ಯ ಎಂದು ಪರಿಗಣಿಸಲಾಗಿದ್ದ ಮತಗಳಲ್ಲಿ ಡಿಕ್ಲರೇಶನ್ ಕೊರತೆಯಿಂದ ಕೆಲವು ಮತಗಳನ್ನು ಕೈಬಿಡಲಾಗಿದೆ. ಡಿ.ಎನ್. ಜೀವರಾಜ್ ಅವರ ಪ್ರಕಾರ, ಮಾನ್ಯ ಮತಗಳನ್ನು ಮತ್ತು ತಮ್ಮ ಎದುರಾಳಿ ಅಭ್ಯರ್ಥಿಯ ಮಾನ್ಯ ಮತಗಳನ್ನು ಲೆಕ್ಕ ಹಾಕಿದಾಗ, ಪ್ರಸ್ತುತ ಪರಿಸ್ಥಿತಿಯಲ್ಲಿ ತಮಗೆ ಬಹುಮತ ಬರುತ್ತಿದೆ. ಈ ಅಂಕಿಅಂಶಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು ಮತ್ತು ಆಯೋಗದ ನಿರ್ಧಾರಕ್ಕಾಗಿ ಕಾಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. 2023ರ ಮೇ 13ರಂದು ಅಮಾನ್ಯ ಮತಗಳನ್ನು ಮಾನ್ಯಗೊಳಿಸುವಂತೆ ತಾವು ಸಲ್ಲಿಸಿದ್ದ ಅರ್ಜಿಯ ಕುರಿತು ಉಲ್ಲೇಖಿಸಿದ ಅವರು, ಕಳೆದ ಮೂರು ವರ್ಷಗಳಿಂದ ತಾವು ನಡೆಸುತ್ತಿದ್ದ ಹೋರಾಟಕ್ಕೆ ಈಗ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ಚುನಾವಣಾ ಆಯೋಗ ಇಂದು ಫಲಿತಾಂಶ ಘೋಷಿಸುತ್ತದೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಈ ಪ್ರಕ್ರಿಯೆಯಲ್ಲಿ ರಾಜಕೀಯ ಒತ್ತಡಗಳ ಬಗ್ಗೆಯೂ ಜೀವರಾಜ್ ಸುಳಿವು ನೀಡಿದ್ದಾರೆ. ಹೈಕೋರ್ಟ್‌ನ ನಿರ್ದೇಶನವಿದ್ದರೂ, ಕೇವಲ ವೋಟ್‌ಗಳನ್ನು ಡಿಕ್ಲೇರ್ ಮಾಡಿ ಕಳುಹಿಸಬೇಕೇ ಹೊರತು ಫಲಿತಾಂಶವನ್ನು ಘೋಷಿಸುವುದಲ್ಲ, ಆಡಳಿತಾರೂಢ ಪಕ್ಷವು ಈ ವಿಷಯವನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕು ಎಂದಿದ್ದಾರೆ. ಇದೀಗ ಈ ಫಲಿತಾಂಶ ಕಾಂಗ್ರೆಸ್ ಪಕ್ಷದ ಸಂಭ್ರಮಾಚರಣೆ ನಿರಾಶೆಯಾಗಿ ಪರಿಣಮಿಸಿದ್ದು, ಈಗ ಬೇರೆ ರೀತಿಯ ಪರಿಣಾಮಗಳು ಕಂಡುಬರುತ್ತಿವೆ. ಆಡಳಿತಾರೂಢ ಪಕ್ಷವೇ ಆಗಿರುವುದರಿಂದ ಒತ್ತಡಗಳು ಇರಬಹುದು ಎಂದು ಜೀವರಾಜ್ ಅಭಿಪ್ರಾಯಪಟ್ಟಿದ್ದಾರೆ. ಡಿ. ರಾಜೇಗೌಡ ಅವರು ಎಣಿಕೆಯನ್ನು ನಿಲ್ಲಿಸಲು ಒತ್ತಡ ಹಾಕಿದ ಬಗ್ಗೆ ಪ್ರತಿಕ್ರಿಯಿಸಿದ ಜೀವರಾಜ್, ಅದು ರಾಜಕೀಯ ಪಕ್ಷದ ಸಹಜ ಕ್ರಿಯೆ ಎಂದು ಹೇಳಿ, ಕೋರ್ಟ್‌ನಲ್ಲಿರುವ ವಿಷಯದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣದ ಹಿನ್ನಲೆ ಏನು?:

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ನ ರಾಜೇಗೌಡ ಅವರು ಗೆಲುವು ಸಾಧಿಸಿದ್ದರು. ಆದರೆ ರಾಜೇಗೌಡ ಆಯ್ಕೆಯನ್ನು ಅಸಿಂಧಗೊಳಿಸಬೇಕು ಎಂದು ಡಿ.ಎನ್.ಜೀವರಾಜ್ ಅವರು ಅರ್ಜಿ ಸಲ್ಲಿಸಿದರು. ಕೇವಲ 200 ಮತಗಳ ಅಂತರದಿಂದ ಗೆದ್ದಿದ್ದು, ಅಂಚೆ ಮತಗಳ ಎಣಿಕೆಯಲ್ಲಿ ಅಧಿಕಾರಿಗಳು ಲೋಪ ಎಸಗಿದ್ದಾರೆ. ಜಿತೆಗೆ ಎದುರಾಳಿಯು ಚುನಾವಣೆಗೆ 120 ಕೋಟಿ ರೂ. ಖರ್ಚು ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಇದೆ ಎಂದು ಅರ್ಜಿ ಸಲ್ಲಿಸಿದರು. ಜೀವರಾಜ್ ಅವರ ಅರ್ಜಿಯನ್ನು ವಜಾಗೊಳಿಸಬೇಕೆಂದು ಕಾಂಗ್ರೆಸ್​​ ಶಾಸಕ ರಾಜೇಗೌಡ ಅವರು ಹೈಕೋರ್ಟ್​​​ಗೆ ಮೇಲ್ಮನವಿ ಸಲ್ಲಿಸಿದ್ದರು. ಆದ್ರೆ ಹೈಕೋರ್ಟ್, ಅರ್ಜಿ ವಜಾಗೊಳಿಸಲು ನಿರಾಕರಿಸಿತ್ತು. ಬಳಿಕ ರಾಜೇಗೌಡ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಬಳಿಕ ಸುಪ್ರೀಂಕೋರ್ಟ್​ ರಾಜೇಗೌಡರ ಅರ್ಜಿಯನ್ನು ವಿಲೇವಾರಿ ಮಾಡಿದ್ದು, ಈ ಪ್ರಕರಣದ ಅರ್ಜಿಯನ್ನು ಹೈಕೋರ್ಟ್ ಮುಂದುವರಿಸಲಿದ್ದು, ಅರ್ಜಿದಾರರು ಅಲ್ಲಿ ಆಕ್ಷೇಪಣೆ ಸಲ್ಲಿಸಲು ಅರ್ಹರು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತ್ತು.

ಅಂಚೆ ಮತಪತ್ರಗಳ ಮರುಪರಿಶೀಲನೆ ಬಗ್ಗೆ ಹೈಕೋರ್ಟ್ ಆದೇಶದಲ್ಲಿ ಏನಿತ್ತು?

2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಗೆದ್ದು, ಶಾಸಕರಾಗಿದ್ದ ಕಾಂಗ್ರೆಸ್‌ನ ಕೆವೈ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿ ಮರು ಮತ ಎಣಿಕೆಗೆ ಆದೇಶಿಸಿತ್ತು. ಆದ್ರೆ, ಮರುಮತದಾನದಲ್ಲಿ ನಂಜೇಗೌಡ ಅವರೇ ಗೆದ್ದಿದ್ದಾರೆ. ಹೀಗಾಗಿ ನಂಜೇಗೌಡ ಅವರ ಪ್ರಕರಣ ಸುಖಾಂತ್ಯ ಕಂಡಿತ್ತು. ಇದರ ಬೆನ್ನಲ್ಲೇ ಮತ್ತೊರ್ವ ಶಾಸಕ ಸ್ಥಾನಕ್ಕೆ ಕುತ್ತುಬಂದಿದೆ. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಸಲ್ಲಿಸಿದ್ದ ತಕರಾರು ಅರ್ಜಿ ಸಂಬಂಧ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು. ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ 279 ಅಂಚೆ ಮತಪತ್ರಗಳನ್ನು ಮೇ 2ಕ್ಕೆ ಮರುಪರಿಶೀಲನೆ ಮಾಡಿ ಫಲಿತಾಂಶ ಪ್ರಕಟಿಸುವಂತೆ ಹೇಳಿತ್ತು. ಇದೀಗ ಕೋರ್ಟ್​​ ಆದೇಶದಂತೆ ಚುನಾವಣಾ ಆಯೋಗ ಈ ಪ್ರಕ್ರಿಯೆಯನ್ನು ನಡೆಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ರಾಜೇಗೌಡರಿಗೆ ಬಿಗ್ ಶಾಕ್; ಅಂಚೆ ಮತಗಳ ಮರು ಎಣಿಕೆಯಲ್ಲಿ ತಿರುವು!

ಮರು ಮತ ಎಣಿಕೆಯಲ್ಲೂ ಶಾಸಕ ಟಿಡಿ ರಾಜೇಗೌಡಗೆ ಗೆಲುವು ಎಂದಿದ್ದೇಕೆ?

ಹೈಕೋರ್ಟ್ ಆದೇಶದ ಮೇರೆಗೆ ನೆನ್ನೆ (ಮೇ.2) ಮರು ಮತ ಎಣಿಕೆಯನ್ನು ನಡೆಸಲಾಗಿತ್ತು. ಈ ಮತ ಎಣಿಕೆ ನಡೆಯುತ್ತಿರುವಾಗಲೇ ಕಾಂಗ್ರೆಸ್​​​​​ ಶಾಸಕರ ಗೆಲುವು ಎಂದು ಹೇಳಲಾಗಿತ್ತು. ಈ ಹಿನ್ನಲ್ಲೆ ಚಿಕ್ಕಮಗಳೂರಿನ ಐಡಿಎಸ್​ಜಿ ಕಾಲೇಜು ಮುಂಭಾಗ ಕೈ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜೋರಾಗಿತ್ತು. ಆದರೆ ಈ ಬಗ್ಗೆ ಚುನಾವಣಾ ಆಯೋಗ ಅಧಿಕೃತ ಘೋಷಣೆ ಮಾಡಿರಲಿಲ್ಲ. ರಾತ್ರಿ ಹೊತ್ತಿಗೆ ಮರು ಮತ ಎಣಿಕೆಯಲ್ಲಿ ದೊಡ್ಡ ತಿರುವು ಪಡೆದುಕೊಂಡಿತ್ತು. ಮತ ಎಣಿಕೆ ವೇಳೆ, ಸಿಂಧು, ಅಸಿಂಧು ಮತ ಲೆಕ್ಕಚಾರ ಕೂಡ ನಡೆದಿದೆ. ಈ ವೇಳೆ ಅಂಚೆ ಮತಗಳ ಪತ್ರದಲ್ಲಿ ರಾಜೇಗೌಡ ಮತ್ತು ಮತ್ತೊಬ್ಬ ಅಭ್ಯರ್ಥಿ ಇಬ್ಬರಿಗೂ ‘ಡಬ್ಬಲ್ ಟಿಕ್’ ಮಾಡಿರುವುದು ಕಂಡುಬಂದಿದೆ. ಈ ಕಾರಣಕ್ಕೆ 258 ಮತಗಳನ್ನು ತಿರಸ್ಕರಿಸಲಾಗಿದೆ. ಈ ಹಿಂದೆ 569 ಅಂಚೆ ಮತಗಳನ್ನು ಪಡೆದಿದ್ದ ರಾಜೇಗೌಡರ ಪಟ್ಟಿಯಿಂದ ಈಗ 255 ಮತಗಳು ಮರು ಎಣಿಕೆ ವೇಳೆ ಕಡಿತಗೊಂಡಿವೆ. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಬಂದಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳು ಮಾತ್ರ ತಿರಸ್ಕೃತಗೊಂಡಿವೆ. ಈಗಿನ ಮರು ಎಣಿಕೆಯಲ್ಲಿ ರಾಜೇಗೌಡರ 255 ಅಂಚೆ ಮತಗಳು ಕಡಿತಗೊಂಡಿರುವುದರಿಂದ, ಚುನಾವಣಾ ಫಲಿತಾಂಶದ ಅಂತಿಮ ಚಿತ್ರಣವು ಬದಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:51 am, Sun, 3 May 26

Source link

Leave a Reply

Your email address will not be published. Required fields are marked *