Headlines

ರಾಜ್ಯದಲ್ಲಿನ ಎ ಮತ್ತು ಬಿ ವರ್ಗದ ದೇವಸ್ಥಾನಗಳ ಹೆಸರಿಗೆ ಭೂಮಿ ಖರೀದಿಗೆ ಡಿಸಿಎಂ ಪರಮೇಶ್ವರ್ ಸೂಚನೆ – Kannada News | DCM G. Parameshwara Directs Land Purchase for ‘A’ and ‘B’ Category Temples Across Karnataka

ಡಿಸಿಎಂ ಡಾ.ಜಿ.ಪರಮೇಶ್ವರ್​​ ನೇತೃತ್ವದಲ್ಲಿ ನಡೆದ ಮೀಟಿಂಗ್
Image Credit source: tv9 kannada

ಬೆಂಗಳೂರು, ಆಗಸ್ಟ್​​ 01: ‘ರಾಜ್ಯದಲ್ಲಿನ ದೇವಸ್ಥಾನಗಳಲ್ಲಿ ಸಾಕಷ್ಟು ಹಣವಿದೆ. ಹಾಗಾಗಿ ‘ಎ’ ವರ್ಗ ಮತ್ತು ‘ಬಿ’ ವರ್ಗದ ದೇವಸ್ಥಾನಗಳ ಹೆಸರಿಗೆ ಭೂಮಿ ಖರೀದಿಸಬೇಕು. ಈ ಆಸ್ತಿ ಶಾಶ್ವತವಾಗಿ ದೇವಸ್ಥಾನಕ್ಕೆ ಉಳಿಯುತ್ತದೆ. ಇದರಿಂದ ಭಕ್ತರಿಗೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ದೇವಸ್ಥಾನದ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮತ್ತಷ್ಟು ಅನುಕೂಲವಾಗುತ್ತದೆ‌’ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ (Dr. G Parameshwara) ಹೇಳಿದ್ದಾರೆ.

ಹುಂಡಿ ಮೇಲೆ ನಿಗಾವಹಿಸಲು ಸಿಸಿಟಿವಿ ಅಳವಡಿಕೆಗೆ ಆಗಸ್ಟ್ ತಿಂಗಳು ಡೆಡ್​ಲೈನ್​

ವಿಧಾನಸೌಧದಲ್ಲಿ ಇಂದು ಡಿಸಿಎಂ ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ ಮಾಡಲಾಗಿದ್ದು, ಸದಸ್ಯರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಬಳಿಕ ಕೆಲ ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ. ‘ದೇವಸ್ಥಾನಗಳ ಹುಂಡಿ ಹಣ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಹುಂಡಿ ಮೇಲೆ ನಿಗಾವಹಿಸಲು ಸಿಸಿಟಿವಿ ಅಳವಡಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಇದನ್ನು ಆಗಸ್ಟ್ ಕೊನೆಯ ವೇಳೆಗೆ ಪೂರ್ಣಗೊಳಿಸಬೇಕು. ಈ ಬಗ್ಗೆ ಹಗುರವಾಗಿ ಪರಿಗಣಿಸುವುದು ಬೇಡ‌’ ಎಂದಿದ್ದಾರೆ.

ಡಿಸಿಎಂ ಡಾ. ಜಿ. ಪರಮೇಶ್ವರ ಟ್ವೀಟ್​

‘ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಇದೆ. ನಾನು ಭೇಟಿ ನೀಡಿ ಪರಿಶೀಲಿಸಿದ ದೇವಸ್ಥಾನಗಳಲ್ಲಿ ‘ನಾವು ಯಾವ ಯುಗದಲ್ಲಿದ್ದೇವೆ’ ಎಂಬ ಪ್ರಶ್ನೆ‌ ಮೂಡುತ್ತದೆ. ಯಾರೊಬ್ಬರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ‌. ದೇವಸ್ಥಾನಗಳಲ್ಲಿ ಪಾವಿತ್ರ್ಯತೆ ಕಾಪಾಡದೆ ಹೋದರೆ ಹೇಗೆ’ ಎಂದು ಪ್ರಶ್ನಿಸಿದರು.

ಅನುದಾನದಲ್ಲಿ ಶೇ. 10ರಷ್ಟನ್ನು ಅಭಿವೃದ್ಧಿಗೆ ಬಳಕೆಗೆ ಸೂಚನೆ

‘ದೇವಸ್ಥಾನಗಳಲ್ಲಿ ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಯಾವುದೇ ರೀತಿಯಲ್ಲೂ ಹಣದ ಕೊರತೆ ಇಲ್ಲ. ಮಾಸ್ಟರ್ ಪ್ಲಾನ್ ರೂಪಿಸಲು ಸೂಚಿಸಲಾಗಿದೆ. ಈ ಬಗ್ಗೆ ನಿರ್ಲಕ್ಷಿಸುವುದು ಬೇಡ.‘ಸಿʼ ವರ್ಗದ ದೇವಸ್ಥಾನಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಯಾವುದೇ ರೀತಿಯ ಸಂಸ್ಥೆಗಳಿಗೆ ದತ್ತು ನೀಡಬಾರದು. ಅಭಿವೃದ್ಧಿ ಹೆಸರಿನಲ್ಲಿ ದತ್ತು ಪಡೆದವರು ದೇವಸ್ಥಾನದ ಆಸ್ತಿ ನಮ್ಮದು ಎಂದು ತಕಾರಾರು ತೆಗೆಯುತ್ತಾರೆ. ‘ಎ’ ವರ್ಗದ ದೇವಸ್ಥಾನಗಳ ಅನುದಾನದಲ್ಲಿ ಶೇ. 10ರಷ್ಟನ್ನು ‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬಳಸಬೇಕು’ ಎಂದಿದ್ದಾರೆ.

‘ದೇವಸ್ಥಾನಗಳ ಒತ್ತುವರಿಯಾದ ಭೂಮಿಯನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ. ದೇವಸ್ಥಾನಗಳ ಒತ್ತುವರಿಯಾದ ಆಸ್ತಿಗಳನ್ನು ತೆರವುಗೊಳಿಸಲು ಆದ್ಯತೆ ಮೇರೆಗೆ ಸರ್ವೇ ಮಾಡಿಸಿ, ತೆರವುಗೊಳಿಸಿ ಮುಜರಾಯಿ ಇಲಾಖೆಗೆ ಒಪ್ಪಿಸಲು ಕ್ರಮ ಕೈಗೊಳ್ಳಬೇಕು. ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ’ ಸೂಚಿಸಿದ್ದಾರೆ.

ಇದನ್ನೂ ಓದಿ: ದೇವಸ್ಥಾನ ನಿರ್ಮಾಣಕ್ಕೆ ಟೊಂಕ ಕಟ್ಟಿದ ಗೃಹಲಕ್ಷ್ಮಿಯರು: ಗ್ಯಾರಂಟಿ ಹಣ ದೇಣಿಗೆ ನೀಡಿದ ಮಹಿಳೆಯರು

ಇನ್ನು ‘ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಧಿಸೂಚಿತ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ನೌಕರರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲು ಕ್ರಮ ಕೈಗೊಳ್ಳುವಂತೆ’ ಡಿಸಿಎಂ ಡಾ. ಜಿ. ಪರಮೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:46 pm, Sat, 1 August 26

Source link

Leave a Reply

Your email address will not be published. Required fields are marked *