ಬೆಂಗಳೂರು, ಆ. 08: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ. ಒಂದು ಕಾಂಗ್ರೆಸ್ನ ಹಿರಿಯ ನಾಯಕರು ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕೋಪವಿದ್ದರೆ, ಇನ್ನೊಂದು ಕಡೆ ಕಾರ್ಯಕರ್ತರು ನಾಯಕರ ವಿರೋಧ ಅಸಮಾಧನಗೊಂಡಿದ್ದಾರೆ. ಪಕ್ಷದ ಹೈಕಮಾಂಡ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಾಯಕರು ರಾಜಕೀಯ ಲಾಭ ಪಡೆಯುತ್ತಿದ್ದಾರೆ ಹಾಗೂ ನಿಷ್ಠಾವಂತರಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ‘ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರು’ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪತ್ರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಅಸ್ತಿತ್ವವೇ ಇರುವುದಿಲ್ಲ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಪತ್ರದಲ್ಲಿ ಏನಿದೆ?:
“ರಾಹುಲ್ ಜೀ, ನೀವು ಕೇಂದ್ರ ಸರ್ಕಾರದ ಭ್ರಷ್ಟಾಚಾರ ವಿರುದ್ಧ ನಿರಂತರ ಹೋರಾಡುತ್ತಿದ್ದೀರಿ. ಆದರೆ ದುರಂತವೆಂದರೆ ಕರ್ನಾಟಕದಲ್ಲಿ ಅನೇಕ ನಾಯಕರು ನಿಮ್ಮ ಹಾಗೂ ಹೈಕಮಾಂಡ್ ಹೆಸರನ್ನು ಬಳಸಿಕೊಂಡು ಸ್ವಂತ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಈ ವಂಚನೆಯನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಹಿರಿಯರಿಗೆ ಅನ್ಯಾಯ, ನಿಷ್ಠದ್ರೋಹಿಗಳಿಗೆ ಸಂಪುಟ ಸ್ಥಾನ:
ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆಯಲ್ಲಿ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಪಕ್ಷಕ್ಕೆ ದ್ರೋಹ ಬಗೆದವರು ಮತ್ತು ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರನ್ನು ಸಚಿವರನ್ನಾಗಿ ಮಾಡಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಹಾಗೂ ಸಚಿವ ಸ್ಥಾನದಿಂದ ವೈಯಕ್ತಿಕ ಲಾಭ ಮಾಡಿಕೊಂಡಿರುವ ಶಾಸಕರನ್ನು ತಕ್ಷಣವೇ ಸಂಪುಟದಿಂದ ತೆಗೆದುಹಾಕಬೇಕು ಎಂದು ನಿಷ್ಠಾವಂತ ನಾಯಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಗೋಲ್ ಮಾಲ್: ಮೃತಪಟ್ಟವರ ಖಾತೆಗೆ ಹಣ, 86 ಲಕ್ಷ ರೂ. ರಿಕವರಿ
ಜಾತಿ, ಹಣದ ಪ್ರಭಾವಕ್ಕೆ ಬ್ರೇಕ್ ಹಾಕಿ:
ಜಾತಿ ಮತ್ತು ಹಣಬಲದಿಂದ ಹೈಕಮಾಂಡ್ ಹೆಸರಿನಲ್ಲಿ ಅಧಿಕಾರ ಹಿಡಿಯುವವರನ್ನು ಬದಿಗೊತ್ತಿ, ಸಾಮಾನ್ಯ ಕಾರ್ಯಕರ್ತರ ಹಾಗೂ ಪಕ್ಷದ ಧ್ವನಿಯಾಗಿ ಹೋರಾಡುವ ಶಾಸಕರನ್ನು ಸಚಿವರನ್ನಾಗಿ ಪರಿಗಣಿಸಬೇಕು ಎಂದು ಪತ್ರದಲ್ಲಿ ಮನವರಿಕೆ ಮಾಡಿಕೊಡಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:12 am, Sat, 8 August 26