ಬೆಂಗಳೂರು, ಜು.30: ಬ್ಯಾಡರಹಳ್ಳಿ ನಿವಾಸಿಗಳಿಗೆ ಚಿರತೆ ಕಾಟ ತಪ್ಪುತ್ತಿಲ್ಲ. ರಾತ್ರಿಯಾದ್ರೆ ಪದೇಪದೇ ಪ್ರತ್ಯಕ್ಷವಾಗ್ತಿರುವ ಚಿರತೆ, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜುಲೈ ತಿಂಗಳಿನಲ್ಲಿ ಇದು ಆರನೇ ಬಾರಿಗೆ ಚಿರತೆ ಕಾಣಿಸಿಕೊಂಡಿದ್ದು, ಕಳೆದ ರಾತ್ರಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮತ್ತೊಮ್ಮೆ ದರ್ಶನ ನೀಡಿದೆ. ಚಿರತೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಬೋನ್ ಇಟ್ಟು ಕೈತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರಂಭದಲ್ಲಿ ಬೋನ್ ನಲ್ಲಿ ಕೋಳಿ ಇಡಲಾಗಿತ್ತು, ಆದರೆ ಈಗ ಕೋಳಿಯೂ ಇಲ್ಲ. ಆಮಿಷವಿಲ್ಲದೆ ಚಿರತೆ ಹೇಗೆ ಸೆರೆ ಸಿಕ್ಕೀತು ಎಂಬುದು ಸ್ಥಳೀಯರ ಪ್ರಶ್ನೆ. ಪದೇಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದು ಜನರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು, ವೈಜ್ಞಾನಿಕ ವಿಧಾನಗಳನ್ನು ಬಳಸಿ ಚಿರತೆಯನ್ನು ಸೆರೆಹಿಡಿಯಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಚಿರತೆ ಸೆರೆಹಿಡಿಯುವ ಪ್ರಯತ್ನಗಳು ಸಮರ್ಪಕವಾಗಿ ಆಗುತ್ತಿಲ್ಲ ಎಂದು ದೂರಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ