
ಕನ್ನಡದ ನಟ ಪ್ರಜ್ವಲ್ ದೇವರಾಜ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದವರು. ಅವರು ಈಗ ಕಾರ್ತಿಕ್ ಮಹೇಶ್ ನಟನೆಯ ‘ರಾಮರಸ’ ಸಿನಿಮಾದ ಭಾಗ ಆಗುತ್ತಿದ್ದಾರೆ. ಸಾಕಷ್ಟು ಭಿನ್ನ ಶೈಲಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಪ್ರಜ್ವಲ್ ಅವರು ಗುರುಸಿದ್ಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಗಮನ ಸೆಳೆದಿದೆ.
ರಾಮನವಮಿ ಪ್ರಯುಕ್ತ ‘ರಾಮರಸ’ ಚಿತ್ರದಲ್ಲಿನ ಪ್ರಜ್ವಲ್ ದೇವರಾಜ್ ಲುಕ್ ಅನಾವರಣಗೊಂಡಿದೆ. ವಿನಯ್ ಗುರೂಜಿ ಅವರು ಈ ಲುಕ್ ಅನಾವರಣ ಮಾಡಿದರು. ಪೋಸ್ಟರ್ ಅಲ್ಲಿ ಉದ್ದನೆಯ ಕೂದಲು ಬಿಟ್ಟು, ಕತ್ತಲ್ಲಿ ರುದ್ರಾಕ್ಷಿ ಮಾಲೆ ಧರಿಸಿದ್ದಾರೆ ಪ್ರಜ್ವಲ್. ಮುಖದಲ್ಲಿ ಕೋಪ ಮನೆ ಮಾಡಿದೆ. ಹಿಂಭಾಗದಲ್ಲಿ ನಾನಾ ರೀತಿಯ ಕಟ್ಟಡಗಳನ್ನು ಕಾಣಬಹುದು. ಅವರ ಪಾತ್ರದ ಪೋಸ್ಟರ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಸಿನಿಮಾದಲ್ಲಿ ಈ ಪಾತ್ರ ತುಂಬಾನೇ ಪ್ರಾಮುಖ್ಯತೆ ಪಡೆಯಲಿದೆಯಂತೆ.
‘ದೈವಿಕ ಕಥೆಗೆ ಅದ್ಭುತ ಸೇರ್ಪಡೆ. ಸಿನಿಪಯಣದ ಈ ಅದ್ಧೂರಿ ಪಥದಲ್ಲಿ, ಈಗ ಪ್ರಜ್ವಲ್ ದೇವರಾಜ್ ಅವರ ಸಾಟಿಯಿಲ್ಲದ ಪ್ರತಿಭೆ ನಮಗೆ ಜೊತೆಯಾಗಿದೆ. ರಾಮರಸದ ಈ ಮಹಾನ್ ಕಥಾ ಲೋಕಕ್ಕೆ ಗುರು ಸಿದ್ಧರಿಗೆ ಆತ್ಮೀಯ ಸ್ವಾಗತ. ಇದು ಬರೀ ಸಿನಿಮಾ ಅಲ್ಲ, ಒಂದು ಅದ್ಭುತ ಅನುಭವ’ ಎಂದು ಪೋಸ್ಟರ್ ಕ್ಯಾಪ್ಶನ್ ಅಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ‘ರಾಮರಸ’ ಚಿತ್ರದಲ್ಲಿ ಮಿಂಚಲು ಬಂದ ‘ಅಧ್ಯಕ್ಷ’ ಸುಂದರಿ ಹೆಬಾ ಪಟೇಲ್
‘ರಾಮರಸ’ ಸಿನಿಮಾದಲ್ಲಿ ಮಾಟ ಮಂತ್ರದ ವಿಷಯಗಳು ಹೈಲೈಟ್ ಆಗಿವೆ. ಕಾರ್ತಿಕ್ ಮಹೇಶ್, ಪ್ರಜ್ವಲ್ ದೇವರಾಜ್ ಜೊತೆಗೆ ಶರಣ್ ಕೂಡ ನಟಿಸಿದ್ದಾರೆ. ಇನ್ನೂ ಅನೇಕ ಕಲಾವಿದರು ಸಿನಿಮಾದ ಭಾಗ ಆಗಲಿದ್ದು, ಅದನ್ನು ಗುಟ್ಟಾಗಿಯೇ ಇಡಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ರಿವೀಲ್ ಮಾಡುವ ಸಾಧ್ಯತೆ ಇದೆ.
View this post on Instagram
ಎಂಬಿ ಗಿರಿರಾಜ್ ಅವರು ‘ರಾಮರಸ’ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಗುರು ದೇಶಪಾಂಡೆ ಅವರು ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಗುರು ದೇಶಪಾಂಡೆ ಹಾಗೂ ವಿಕ್ರಂ ಆರ್ಯ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುಗುಣ ಜಯಪಾಲ್ ಚಿತ್ರದ ಸಹ ನಿರ್ಮಾಪಕರು. ಈ ಸಿನಿಮಾದಲ್ಲಿ ಕಾರ್ತಿಕ್ ಮಹೇಶ್ ಪಾತ್ರ ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.