
ಭಾರತ ಚಿತ್ರರಂಗದ (Indian Film) ಅತ್ಯಂತ ದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ದ (Ramayana) ಟೀಸರ್ ಇಂದು (ಏಪ್ರಿಲ್ 02) ಬಿಡುಗಡೆ ಆಗಿದೆ. ಹನುಮಜಯಂತಿಯಂದು ‘ರಾಮಾಯಣ’ ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರೆಗೆ ಹಲವಾರು ಭಾರಿ, ಹಲವಾರು ಭಾಷೆಗಳಲ್ಲಿ ರಾಮಾಯಣ ಕತೆ ಸಿನಿಮಾ ಆಗಿ ಮೂಡಿ ಬಂದಿದೆ. ಪ್ರತಿಬಾರಿಯೂ ಭಿನ್ನ ರೀತಿಯಲ್ಲಿ ಪುರಾಣ ಪುಣ್ಯ ಕತೆಯನ್ನು ಪ್ರಸ್ತುತ ಪಡಿಸಲಾಗಿದೆ. ಇದೀಗ ಬರಲಿರುವ ‘ರಾಮಾಯಣ’ ಈ ವರೆಗೆ ಭಾರತೀಯ ಚಿತ್ರರಂಗ ಮಾಡಿದ ಸಾಹಸಗಳಲ್ಲಿಯೇ ಅದ್ಧೂರಿಯಾದ ಸಾಹಸ ಇದಾಗಿದೆ. ಟೀಸರ್ನಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಆಧುನಿಕ ತಂತ್ರಜ್ಞಾನದ ಸ್ಪರ್ಷದಲ್ಲಿ ರಾಮಾಯಣವನ್ನು ಅದ್ಧೂರಿಯಾಗಿ ತೆರೆಗೆ ತರುವ ಪ್ರಯತ್ನ ಚಿತ್ರತಂಡ ಮಾಡಿದೆ. ಇದೀಗ ಬಿಡುಗಡೆ ಆಗಿರುವ 2:38 ನಿಮಿಷದ ಟೀಸರ್ನ ಪ್ರತಿ ದೃಶ್ಯದಲ್ಲಿಯೂ ಆ ಅದ್ಧೂರಿತನ ಎದ್ದು ಕಾಣುತ್ತಿದೆ. ಅದ್ಧೂರಿತನದ ಜೊತೆಗೆ ನಿರ್ದೇಶಕರು ವಾಲ್ಮಿಕಿ ರಾಮಾಯಣದ ಕತೆಗೆ ನಿಷ್ಠವಾಗಿರುವುದು ಸಹ ಗೋಚರಿಸುತ್ತಿದೆ.
ಈಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ರಾಮನ ಪಾತ್ರವನ್ನಷ್ಟೆ ಪ್ರಮುಖವಾಗಿ ತೋರಿಸಲಾಗಿದೆ. ಶ್ರೀರಾಮನ ಬಾಲಕಾಂಡ, ಅರಣ್ಯಕಾಂಡದ ಕತೆಯ ಭಾಗಗಳನ್ನು ಮಾತ್ರವೇ ಟೀಸರ್ನಲ್ಲಿ ಸೇರಿಸಿರುವುದು ತಿಳಿದು ಬರುತ್ತಿದೆ. ರಾಮನ ಪಟ್ಟಾಭಿಷೇಕದ ಮುಂಚಿನ ಕತೆ, ವನವಾಸ, ಅರಣ್ಯದಲ್ಲಿ ಸಾಹಸಗಳು ಇನ್ನಿತರೆ ದೃಶ್ಯಗಳು ಟೀಸರ್ನಲ್ಲಿವೆ. ವಿಶೇಷವಾಗಿ ರಾಮನ ವಿಚಿತ್ರ ಜೀವಿಗಳೊಟ್ಟಿಗೆ ಸೆಣೆಸಾಡುತ್ತಿರುವ ಕೆಲವು ದೃಶ್ಯಗಳು ಸಹ ಟೀಸರ್ನಲ್ಲಿವೆ.
ರಣ್ಬೀರ್ ಕಪೂರ್, ಶ್ರೀರಾಮನ ಪಾತ್ರದಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. ಅವರ ಮುಖ, ಮೈಕಟ್ಟು ರಾಮನ ಪಾತ್ರಕ್ಕೆ ಚೆನ್ನಾಗಿ ಹೊಂದಿರುವಂತೆ ತೋರುತ್ತಿದೆ. ಆದರೆ ಟೀಸರ್ನಲ್ಲಿ ಅವರ ಪಾತ್ರದ ಹೊರತಾಗಿ ಇನ್ಯಾರ ಪಾತ್ರವನ್ನೂ ಸಹ ತೋರಿಸಿಲ್ಲ. ಸೀತೆ, ಲಕ್ಷ್ಮಣನ ಪಾತ್ರವನ್ನೂ ಸಹ ಈಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ತೋರಿಸಿಲ್ಲ. ಯಶ್ ಅವರ ರಾವಣನ ಪಾತ್ರ ಟೀಸರ್ನ ಅಂತ್ಯದಲ್ಲಿ ಬರುತ್ತದೆಯಾದರೂ ಯಶ್ ಪಾತ್ರವನ್ನೂ ಸಹ ಹಿಂದಿನಿಂದ ಮಾತ್ರವೇ ತೋರಿಸಲಾಗಿದೆ. ಜೊತೆಗೆ ರಾವಣನ ಪುಷ್ಪಕವಿಮಾನವನ್ನು ಸಹ ತೋರಿಸಲಾಗಿದೆ.
ಒಟ್ಟಾರೆಯಾಗಿ ಈಗ ಬಿಡುಗಡೆ ಆಗಿರುವ ಟೀಸರ್, ‘ರಾಮಾಯಣ’ ಕತೆ ಭಾರತೀಯ ಈ ಹಿಂದೆ ನೋಡಿದ ಇನ್ಯಾವುದೇ ರಾಮಾಯಣ ಸಿನಿಮಾ ಅಥವಾ ಧಾರಾವಾಹಿಗಳಿಗಿಂತಲೂ ಬಲು ಅದ್ಧೂರಿಯಾಗಿ ಇರಲಿದೆ ಎಂಬುದಂತೂ ಖಾತ್ರಿ. ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡಿ ನಿತೀಶ್ ತಿವಾರಿ ನಿರ್ದೇಶನ ಮಾಡಿರುವ ಈ ಸಿನಿಮಾ ಇದೇ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ