‘ರಾಮಾಯಣ’ (Ramayana) ಸಿನಿಮಾದ ಟ್ರೈಲರ್ ಇಂದು (ಜುಲೈ 30) ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದುಕೊಂಡಿದೆ. ಟ್ರೈಲರ್ ನೋಡಿದವರೆಲ್ಲ, ಭಾರತದ ಈ ವರೆಗಿನ ಅತ್ಯಂತ ಉತ್ಕೃಷ್ಟ ಗುಣಮಟ್ಟದ ಸಿನಿಮಾ ಇದೆಂದು ಕೊಂಡಾಡುತ್ತಿದ್ದಾರೆ. ವಿಎಫ್ಎಕ್ಸ್, ಗ್ರಾಫಿಕ್ಸ್ ಅಂತೂ ಅದ್ಭುತವಾಗಿವೆ. ರಣ್ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅವರು ಟ್ರೈಲರ್ನ ಕೇಂದ್ರವಾಗಿದ್ದರು ಮೂವರೂ ಸಹ ಸಖತ್ ಗಮನ ಸೆಳೆದಿದ್ದಾರೆ. ಅದರಲ್ಲೂ ಯಶ್ ಅಂತೂ ಟ್ರೈಲರ್ ನಲ್ಲಿ ಅಬ್ಬರಿಸಿಬಿಟ್ಟಿದ್ದಾರೆ. ಇಷ್ಟೆಲ್ಲ ಆಗಿದ್ದರೂ ಸಹ ಪ್ರಭಾಸ್ ಟ್ರೆಂಡಿಂಗ್ನಲ್ಲಿದ್ದಾರೆ.
‘ರಾಮಾಯಣ’ ಸಿನಿಮಾ ಟ್ರೈಲರ್ ಬಿಡುಗಡೆ ಆದ ಬಳಿಕ ಅಚಾನಕ್ಕಾಗಿ ಪ್ರಭಾಸ್ ಟ್ರೆಂಡಿಂಗ್ಗೆ ಬಂದಿದ್ದಾರೆ. ಇದಕ್ಕೆ ಕಾರಣ ‘ಆದಿಪುರಷ್’ ಸಿನಿಮಾ. ಪ್ರಭಾಸ್ ನಟಿಸಿದ್ದ ‘ಆದಿಪುರುಷ್’ ಸಿನಿಮಾ ಸಹ ರಾಮಾಯಣ ಕತೆಯನ್ನೇ ಆಧರಿಸಿತ್ತು. ಆ ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದರು. ಸಿನಿಮಾ 2023 ರಲ್ಲಿ ರಿಲೀಸ್ ಆಗಿತ್ತು. ಆದರೆ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿತು. ಮಾತ್ರವಲ್ಲದೆ ತೀವ್ರ ಟೀಕೆ, ವಿಮರ್ಶೆಗೆ ಮತ್ತು ವಿವಾದಕ್ಕೆ ಸಹ ಗುರಿ ಆಗಿತ್ತು. ಈಗ ‘ರಾಮಾಯಣ’ ಟ್ರೈಲರ್ ಬಿಡುಗಡೆ ಆದಾಗಿನಿಂದಲೂ ‘ಆದಿಪುರುಷ್’ ಸಹ ಟ್ರೆಂಡಿಂಗ್ಗೆ ಬಂದಿದೆ. ಆದರೆ ನೆಗಟಿವ್ ಕಾರಣಕ್ಕೆ.
‘ಆದಿಪುರುಷ್’ ಸಿನಿಮಾದ ಟ್ರೈಲರ್ ರಿಲೀಸ್ ಆದಾಗ ಕಳಪೆ ಗುಣಮಟ್ಟದ ವಿಎಫ್ಎಕ್ಸ್, ಗ್ರಾಫಿಕ್ಸ್ನಿಂದ ತೀವ್ರ ಟೀಕೆಗೆ ಗುರಿ ಆಗಿತ್ತು. ರಾವಣ ಬಾವುಲಿಯ ಮೇಲೆ ಬರುವ ದೃಶ್ಯವೊಂದನ್ನು ಟ್ರೈಲರ್ನಲ್ಲಿ ಸೇರಿಸಲಾಗಿತ್ತು. ಅದಂತೂ ಭಾರಿ ಟಿಕೆಗೆ ಗುರಿ ಆಗಿತ್ತು. ಜೊತೆಗೆ ರಾವಣನ ಹತ್ತು ತಲೆಯ ಗ್ರಾಫಿಕ್ಸ್ ಸಹ ಬಹಳ ಕೆಟ್ಟದಾಗಿತ್ತು. ಪ್ರಭಾಸ ಲುಕ್ ಬಗ್ಗೆಯೂ ಟೀಕೆ ವ್ಯಕ್ತವಾಗಿತ್ತು. ಈಗ ‘ರಾಮಾಯಣ’ ಸಿನಿಮಾದ ಟ್ರೈಲರ್ನ ಗುಣಮಟ್ಟದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ‘ಆದಿಪುರುಷ್’ ಅನ್ನು ಟೀಕೆ ಮಾಡುತ್ತಿದ್ದಾರೆ. ಕೆಲವರಂತೂ ‘ಆದಿಪುರುಷ್’ ಸಿನಿಮಾ ಅಷ್ಟು ಕೆಟ್ಟ ವಿಎಫ್ಎಕ್ಸ್ ಹೊಂದಿ, ಬಿಡುಗಡೆ ಆಗಿದ್ದಾದರೂ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್ನಲ್ಲಿ ಪ್ರಮುಖ ಪಾತ್ರವೇ ಮಿಸ್; ಅಭಿಮಾನಿಗಳ ಬೇಸರ
ಇನ್ನು ಕೆಲವರು ‘ರಾಮಾಯಣ’ ಟ್ರೈಲರ್ ಅನ್ನು ನೋಡಿ, ‘ಆದಿಪುರುಷ್’ ಸಿನಿಮಾದ ಟ್ರೈಲರ್ಗಿಂತಲೂ 1000 ಪಟ್ಟು ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಓಂ ರಾವತ್, ಇದನ್ನು ನೋಡಿ ಕಲಿಯಬೇಕು ಎಂದಿದ್ದಾರೆ. ಹಲವಾರು ಮಂದಿ ‘ರಾಮಾಯಣ’ ಟ್ರೈಲರ್ ಅನ್ನು ಮೆಚ್ಚಿಕೊಂಡು, ‘ಆದಿಪುರುಷ್’ ಅನ್ನು ಟ್ರೋಲ್ ಮಾಡಿದ್ದಾರೆ.
‘ರಾಮಾಯಣ’ ಸಿನಿಮಾನಲ್ಲಿ ರಣ್ಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತಾದೇವಿಯಾಗಿ ನಟಿಸಿದ್ದಾರೆ. ಸಿನಿಮಾ ಅನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದು, ಇವರು ಹಾಲಿವುಡ್ನ ಪ್ರಖ್ಯಾತ ವಿಎಫ್ಎಕ್ಸ್ ಸಂಸ್ಥೆ ಡಿಎನ್ಜಿಯ ಮಾಲೀಕರು ಸಹ. ಹಾಗಾಗಿ ಸಿನಿಮಾಕ್ಕೆ ವಿಶ್ವದರ್ಜೆಯ ಗುಣಮಟ್ಟದ ವಿಎಫ್ಎಕ್ಸ್ ಅಳವಡಿಸಲಾಗಿದೆ. ಸಿನಿಮಾ ಇದೇ ನವೆಂಬರ್ನಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ