ಜಕಾರ್ತಾ, ಜುಲೈ 7: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi in indonesia) ಇಂಡೋನೇಷ್ಯಾ ಪ್ರವಾಸದ ಎರಡನೇ ದಿನವಾದ ಇಂದು ಜಕಾರ್ತಾದಲ್ಲಿ ಅಲ್ಲಿನ ಸಂಸತ್ತನ್ನು ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿಯವರಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ ‘ಬಿಂತಾಂಗ್ ಆದಿಪೂರ್ಣ’ ಪ್ರಶಸ್ತಿಯನ್ನು ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ನೀಡಿ ಗೌರವಿಸಿದರು. ಈ ವೇಳೆ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಇಂಡೋನೇಷ್ಯಾ ನಡುವಿನ ಬಾಂಧವ್ಯವು ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ತಳಹದಿಯ ಮೇಲೆಯೂ ನಿರ್ಮಾಣವಾಗಿದೆ ಎಂದು ಬಣ್ಣಿಸಿದರು.
“ಭಾರತ ಮತ್ತು ಇಂಡೋನೇಷ್ಯಾ ಕೇವಲ ಸಮುದ್ರವನ್ನು ಮಾತ್ರ ಹಂಚಿಕೊಂಡಿಲ್ಲ; ನಾವು ಜಂಟಿ ಇತಿಹಾಸವನ್ನೂ ಹಂಚಿಕೊಂಡಿದ್ದೇವೆ. ನಮ್ಮ ಬಾಂಧವ್ಯವು ರಾಮಾಯಣ, ಮಹಾಭಾರತದ ಪರಂಪರೆಯಲ್ಲಿ ಮತ್ತು ನಳಂದಾದ ಪ್ರಾಚೀನ ಜ್ಞಾನದಲ್ಲಿ ಬೇರೂರಿದೆ. ನಾವು ವಯಾಂಗ್ (ತೊಗಲು ಬೊಂಬೆಯಾಟ), ನೃತ್ಯ ಮತ್ತು ಸಂಗೀತದ ಮೂಲಕ ಹಾಗೂ ಬೊರೊಬುದುರ್ ಮತ್ತು ಪ್ರಂಬನನ್ನಂತಹ ಭವ್ಯವಾದ ಸ್ಮಾರಕಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದೇವೆ. ಇಂಡೋನೇಷ್ಯಾದ ರಾಷ್ಟ್ರೀಯ ಲಾಂಛನವಾದ ‘ಗರುಡ’ ಮತ್ತು ಒಡಿಶಾದ ‘ಬಾಲಿ ಯಾತ್ರೆ’ಯ ಹಬ್ಬದ ಉತ್ಸಾಹದ ಮೂಲಕ ನಾವು ಒಂದಾಗಿದ್ದೇವೆ” ಎಂದು ಮೋದಿ ಹೇಳಿದರು.
“ನಮ್ಮ ರಾಜಧಾನಿಗಳ ನಡುವೆ ಸಾವಿರಾರು ಕಿಲೋಮೀಟರ್ ದೂರವಿರಬಹುದು. ಆದರೆ, ನಮ್ಮ ನಡುವಿನ ಸಮುದ್ರದ ವಿಸ್ತಾರ ಕೇವಲ 150 ಕಿಲೋಮೀಟರ್ ಮಾತ್ರ. ವಿಶ್ವದ ಅನೇಕ ಭಾಗಗಳಲ್ಲಿ ಸಮುದ್ರಗಳು ವಿಭಜನೆಯನ್ನು ಸೃಷ್ಟಿಸಿದ್ದರೆ, ನಮ್ಮ ನಡುವಿನ ಸಾಗರವು ಯಾವಾಗಲೂ ಭಾರತ ಮತ್ತು ಇಂಡೋನೇಷ್ಯಾವನ್ನು ಒಂದುಗೂಡಿಸಿದೆ” ಎಂದಿದ್ದಾರೆ.
(Video Source: PTI)
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ