Headlines

‘ರಾಮಾಯಣ’ ಸಿನಿಮಾಕ್ಕೆ ಎರಡು ವರ್ಷ ತಯಾರಿ, ರಣ್​​ಬೀರ್ ಕಪೂರ್ ಮಾಹಿತಿ – Kannada News | Ranbir Kapoor talks about his preparation for Ramayana movie

ಭಾರತ ಚಿತ್ರರಂಗದ (Indian Cinema) ಈ ವರೆಗಿನ ಅತಿ ದೊಡ್ಡ ಬಜೆಟ್​ನ ಸಿನಿಮಾ ಎನಿಸಿಕೊಂಡಿದೆ ‘ರಾಮಾಯಣ’ (Ramayana). ಈ ಸಿನಿಮಾದ ಎರಡೂ ಭಾಗಗಳಿಗೆ ಸೇರಿ ಸುಮಾರು 4000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಇದೀಗ ಸಿನಿಮಾದ ಮೊದಲ ಭಾಗ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾ ನವೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದ್ದು, ಸಿನಿಮಾದ ಪ್ರಚಾರವನ್ನು ಚಿತ್ರತಂಡ ಈಗಾಗಲೇ ಆರಂಭಿಸಿದೆ. ಸಿನಿಮಾವನ್ನು ವಿದೇಶಗಳಲ್ಲಿ ಅದರಲ್ಲೂ ಹಾಲಿವುಡ್​ ಸಿನಿಮಾಗಳ ಮಾರುಕಟ್ಟೆ ಇರುವಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಇದೀಗ ಸ್ಯಾನ್​ ಡಿಯಾಗೊ ಕಾಮಿಕಾನ್​​ನಲ್ಲಿ ‘ರಾಮಾಯಣ’ ಚಿತ್ರತಂಡ ಪ್ರಚಾರ ಮಾಡುತ್ತಿದೆ. ಈ ವೇಳೆ ನಟ ರಣ್​​ಬೀರ್ ಕಪೂರ್ ಅವರು ಈ ಸಿನಿಮಾನಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಲು ತಾವು ಮಾಡಿದ ಎರಡು ವರ್ಷಗಳ ತಯಾರಿಯ ಬಗ್ಗೆ ಮಾತನಾಡಿದ್ದಾರೆ.

ಸ್ಯಾನ್ ಡಿಯಾಗೊ ಕಾಮಿಕಾನ್​​ನಲ್ಲಿ ಹಾಲಿವುಡ್​ ಮಾಧ್ಯಮಗಳಿಗೆ ನೀಡಿದ ಸಂದರ್ಶನ ಒಂದರಲ್ಲಿ ಮಾತನಾಡಿರುವ ನಟ ರಣ್​​ಬೀರ್ ಕಪೂರ್, ‘ನಾನು ಈ ಸಿನಿಮಾಕ್ಕಾಗಿ ಸುಮಾರು ಎರಡು ವರ್ಷಗಳ ಕಾಲ ತಯಾರಿ ನಡೆಸಿದೆ. ಶ್ರೀರಾಮನ ಪಾತ್ರ ನಿರ್ವಹಿಸಲು ನಾನು ಸಾಕಷ್ಟು ಓದಿಕೊಂಡೆ. ಸಾಕಷ್ಟು ಅನುಭವಿಗಳನ್ನು, ಪುರಾಣ ನಿಷ್ಣಾತರನ್ನು ಭೇಟಿಯಾಗಿ ಅವರೊಟ್ಟಿಗೆ ಚರ್ಚೆ ಮಾಡಿದೆ. ಯೋಗಾಭ್ಯಾಸವನ್ನು ಸತತ ಎರಡು ವರ್ಷಗಳ ಕಾಲ ನಾನು ಮಾಡಿದೆ. ಸುವೀರ್ ಎಂಬ ಗುರುಗಳೊಂದಿಗೆ ನಾನು ಸಾಕಷ್ಟು ಸಮಯ ಕಳೆದೆ. ಅವರಿಂದ ನಾನು ಶ್ರೀರಾಮನ ವಿಚಾರಗಳನ್ನು ಕಲಿತೆ. ಅವರೊಟ್ಟಿಗೆ ಧ್ಯಾನಗಳನ್ನು ಮಾಡಿದೆ’ ಎಂದಿದ್ದಾರೆ ರಣ್​​ಬೀರ್ ಕಪೂರ್.

ಇದನ್ನೂ ಓದಿ:‘ರಾಮಾಯಣ’ದ ಸೀತೆ ಪಾತ್ರ ಸಾಯಿ ಪಲ್ಲವಿ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವುದೇಕೆ?

ಪಾತ್ರಕ್ಕಾಗಿ ದೈಹಿಕ ಬದಲಾವಣೆಗಳು ಸಹ ಬೇಕಿದ್ದವು ಅವನ್ನೂ ಸಹ ಮಾಡಿಕೊಂಡೆ. ಇದೆಲ್ಲದಕ್ಕಿಂತಲೂ ಮುಖ್ಯವಾಗಿ ನಾನು ಶ್ರೀರಾಮನ ಆದರ್ಶಗಳನ್ನು ಕಲಿಯಬೇಕಿತ್ತು, ಅಳವಡಿಸಿಕೊಳ್ಳಬೇಕಿತ್ತು. ನಾನು ಈಗ ಇರುವ ವಯಸ್ಸಿನಲ್ಲಿ ನನಗೆ ಅದು ಕಷ್ಟವಾಗಲಿಲ್ಲ. ರಾಮಾಯಣವನ್ನು ಭಾರತದ ಪ್ರತಿ ಹಳ್ಳಿಯಲ್ಲೂ ಬೇರೆ ಬೇರೆ ಪ್ರಕಾರಗಳಲ್ಲಿ ಪ್ರದರ್ಶಿಸಲಾಗಿದೆ. ಟಿವಿ, ರೇಡಿಯೋ, ನಾಟಕ, ಬೀದಿ ನಾಟಕ, ಸಂಗೀತ ಹೀಗೆ ಹಲವು ಮಾದರಿಗಳಲ್ಲಿ ರಾಮಾಯಣದ ಕತೆ ಹೇಳಲಾಗಿದೆ. ಈಗ ನಾನು ಬಹಳ ದೊಡ್ಡ ಮಟ್ಟದಲ್ಲಿ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕತೆ ಹೇಳುತ್ತಿದ್ದೇವೆ’ ಎಂದಿದ್ದಾರೆ ರಣ್​​ಬೀರ್ ಕಪೂರ್.

‘ರಾಮಾಯಣ’ ಎನ್ನುವುದು ಭಾರತದ ಇತಿಹಾಸ, ಭಾರತದ ಸಂಸ್ಕೃತಿ. ಇದನ್ನು ನಾವು ವಿಶ್ವ ಸಿನಿಮಾ ವೇದಿಕೆಯಲ್ಲಿ ಪ್ರಸ್ತುತ ಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ಕತೆ ನಮ್ಮ ಜೊತೆಗೆ ಸಾವಿರಾರು ವರ್ಷಗಳಿಂದಲೂ ಇದೆ. ನಮಗೆ ಮುಂಚೆ ಲಕ್ಷಾಂತರ ಮಂದಿ ಈ ಕತೆಯನ್ನು ಹೇಳಿದ್ದಾರೆ. ಈಗ ನಾವು ಸಹ ಆ ಪ್ರಯಣದಲ್ಲಿ ಒಬ್ಬರಾಗುತ್ತಿದ್ದೇವೆ. ನಾವು ಬಹಳ ಪ್ರೀತಿ, ಗೌರವ, ಭಕ್ತಿಗಳಿಂದ ಈ ಸಿನಿಮಾ ಮಾಡಿದ್ದೇವೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಿರೀಕ್ಷೆ ನಮಗೆ ಇದೆ’ ಎಂದಿದ್ದಾರೆ ರಣ್​​ಬೀರ್ ಕಪೂರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *