Headlines

‘ರಾಮಾಯಣ’ ಸಿನಿಮಾ ಬಿಡುಗಡೆಗೂ ಮುನ್ನ ಬರಲಿದೆ ರಾಮಾಯಣ್ ಧಾರಾವಾಹಿ ಕುರಿತು ಸಾಕ್ಷ್ಯಚಿತ್ರ – Kannada News | Documentary on Making of Ramanand Sagar Ramayan without VFX and Green Screen

ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್-ಕಟ್ ಹೇಳಿರುವ ‘ರಾಮಾಯಣ’ (Ramayana) ಸಿನಿಮಾ ಪ್ರಸ್ತುತ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ರಣಬೀರ್ ಕಪೂರ್ ಅವರು ಶ್ರೀರಾಮನಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಈ ಬಿಗ್ ಬಜೆಟ್ ಸಿನಿಮಾದ ಬೃಹತ್ ಸೆಟ್‌ಗಳು ಹಾಗೂ 8 ಬಾರಿ ಆಸ್ಕರ್ ಪ್ರಶಸ್ತಿ ಗೆದ್ದ ‘DNEG’ ಸಂಸ್ಥೆ ನೀಡುತ್ತಿರುವ ಗ್ರಾಫಿಕ್ಸ್ ಬಗ್ಗೆ ಈಗಾಗಲೇ ಭಾರಿ ಚರ್ಚೆ ನಡೆಯುತ್ತಿದೆ. ಆದರೆ, ಸುಮಾರು 40 ವರ್ಷಗಳ ಹಿಂದೆ ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದೆ ರಾಮಾಯಣ ಮಹಾಕಾವ್ಯವನ್ನು ಪ್ರೇಕ್ಷಕರ ಮುಂದೆ ತಂದು ಇತಿಹಾಸ ನಿರ್ಮಿಸಿದ ರಾಮಾನಂದ್ ಸಾಗರ್ (Ramanand Sagar) ಅವರ ಸಾಹಸಗಾಥೆಯನ್ನು ನೆನಪಿಸುವ ಹೊಸ ಸಾಕ್ಷ್ಯಚಿತ್ರವೊಂದು ಸಿದ್ಧವಾಗುತ್ತಿದೆ.

1987-88ರಲ್ಲಿ ‘ದೂರದರ್ಶನ’ ವಾಹಿನಿಯಲ್ಲಿ ಪ್ರಸಾರವಾದ ರಾಮಾನಂದ್ ಸಾಗರ್ ಅವರ ‘ರಾಮಾಯಣ್’ ಧಾರಾವಾಹಿ ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಶೋ ಆಗಿದೆ. 2020ರ ಲಾಕ್‌ಡೌನ್ ಸಮಯದಲ್ಲಿ ಮರುಪ್ರಸಾರವಾದಾಗಲೂ ಇದು ಟಿಆರ್‌ಪಿಯಲ್ಲಿ ಹೊಸ ದಾಖಲೆ ಬರೆದಿತ್ತು. ಇದೀಗ ರಾಮಾನಂದ್ ಸಾಗರ್ ಅವರ ಮೊಮ್ಮಗ ಶಿವ್ ಸಾಗರ್ ಅವರು, ಈ ಐತಿಹಾಸಿಕ ಧಾರಾವಾಹಿಯ ತೆರೆಹಿಂದಿನ ಕಥೆಯನ್ನು ಒಳಗೊಂಡ ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಿರುವುದಾಗಿ ತಿಳಿಸಿದ್ದಾರೆ.

ವಿಎಫ್‌ಎಕ್ಸ್ ಇಲ್ಲದೆ ಮೂಡಿಬಂದಿತ್ತು ಧಾರಾವಾಹಿ:

ಈ ಕುರಿತು ಮಾತನಾಡಿದ ಶಿವ್ ಸಾಗರ್, ‘36 ವರ್ಷಗಳ ನಂತರವೂ ನನ್ನ ಅಜ್ಜನ ರಾಮಾಯಣದ ಬಗ್ಗೆ ಜನರಲ್ಲಿ ಅಪಾರ ಕುತೂಹಲವಿದೆ. ಆ ಕಾಲದಲ್ಲಿ ಯಾವುದೇ ಕಂಪ್ಯೂಟರ್ ವಿಎಫ್‌ಎಕ್ಸ್, ಬ್ಲೂ ಅಥವಾ ಗ್ರೀನ್ ಸ್ಕ್ರೀನ್ ತಂತ್ರಜ್ಞಾನ ಇರಲಿಲ್ಲ. ಕ್ರೋಮಾ ತಂತ್ರಜ್ಞಾನ ತೀರಾ ಹೊಸದಾಗಿತ್ತು. ಲೀನಿಯರ್ ಎಡಿಟಿಂಗ್ ಮೆಷಿನ್‌ಗಳು ಹಾಗೂ ಹಳೆಯ ಯು-ಮ್ಯಾಟಿಕ್ ವೀಡಿಯೊ ಕ್ಯಾಮೆರಾಗಳನ್ನು ಬಳಸಿ ಇಡೀ ಧಾರಾವಾಹಿಯನ್ನು ಚಿತ್ರೀಕರಿಸಲಾಗಿತ್ತು. ಈ ಸಾಹಸವನ್ನು ಇಂದಿನ ಪೀಳಿಗೆಗೆ ತಿಳಿಸುವುದೇ ನಮ್ಮ ಉದ್ದೇಶ’ ಎಂದಿದ್ದಾರೆ.

ತೆರೆಮರೆಯ ಕಲಾವಿದರು ಮತ್ತು ತಂತ್ರಜ್ಞರ ಕಥೆ:

ಅರುಣ್ ಗೋವಿಲ್ (ಶ್ರೀರಾಮ), ದೀಪಿಕಾ ಚಿಖ್ಲಿಯಾ (ಸೀತೆ), ಸುನಿಲ್ ಲಾಹ್ರಿ (ಲಕ್ಷ್ಮಣ), ಅರವಿಂದ್ ತ್ರಿವೇದಿ (ರಾವಣ) ಹಾಗೂ ದಾರಾಸಿಂಗ್ (ಹನುಮಂತ) ಅಭಿನಯಿಸಿದ್ದ ‘ರಾಮಾಯಣ್’ ಧಾರಾವಾಹಿ ಪ್ರಸಾರವಾಗುವ ಸಮಯದಲ್ಲಿ ಇಡೀ ದೇಶದ ರಸ್ತೆಗಳು ಖಾಲಿಯಾಗುತ್ತಿದ್ದವು. ಅಷ್ಟರಮಟ್ಟಿಗೆ ಮೋಡಿ ಮಾಡಿದ್ದ ಆ ಧಾರಾವಾಹಿಯ ಹಿಂದಿರುವ ರೋಚಕ ವಿಷಯಗಳು ಈ ಸಾಕ್ಷ್ಯಚಿತ್ರದಲ್ಲಿ ಇರಲಿದೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್: ನಟಿ ಲಾರಾ ದತ್ತಾ ಸ್ಟೈಲಿಶ್ ಲುಕ್‌ ನೋಡಿ ಟ್ರೋಲ್ ಮಾಡಿದ ಜನ

ಈ ಸಾಕ್ಷ್ಯಚಿತ್ರದಲ್ಲಿ ಧಾರಾವಾಹಿಯ ಪ್ರಮುಖ ನಟರು, ತಂತ್ರಜ್ಞರು ಹಾಗೂ ಅವರ ಕುಟುಂಬದ ಸದಸ್ಯರ ಸಂದರ್ಶನಗಳು ಇರಲಿವೆ. ‘ಅನೇಕ ಹಿರಿಯ ನಟರು ಇಂದು ನಮ್ಮೊಂದಿಗಿಲ್ಲ. ರಾವಣನ ಪಾತ್ರ ಮಾಡಿದ್ದ ಅರವಿಂದ್ ತ್ರಿವೇದಿ ಅವರ ಮಗಳು ಹಾಗೂ ದಾರಾಸಿಂಗ್ ಅವರ ಪುತ್ರ ವಿಂದು ದಾರಾಸಿಂಗ್ ಈ ಸಾಕ್ಷ್ಯಚಿತ್ರಕ್ಕಾಗಿ ಮಾತನಾಡಿದ್ದಾರೆ. ಈ ಅಪರೂಪದ ನೆನಪುಗಳನ್ನು ಭವಿಷ್ಯದ ಪೀಳಿಗೆಗಾಗಿ ಕಾಯ್ದಿರಿಸಲು ನಾವು ಶ್ರಮಿಸುತ್ತಿದ್ದೇವೆ’ ಎಂದು ಶಿವ್ ಸಾಗರ್ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *