Headlines

‘ರಾಹುಲ್ ಗಾಂಧಿಯ ಅಹಂಕಾರದಿಂದ ಇಡೀ ಅಧಿವೇಶನ ಹಾದಿ ತಪ್ಪಿತು’; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ – Kannada News | Parliament session derailed due to Rahul Gandhi’s arrogance Union Minister Pralhad Joshi slams LoP

ನವದೆಹಲಿ, ಆಗಸ್ಟ್ 13: ಸಂಸತ್ತಿನ ಮುಂಗಾರು ಅಧಿವೇಶನದ ಕಲಾಪಗಳಿಗೆ ಅಡಚಣೆಯಾಗಲು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಅಹಂಕಾರ ಮತ್ತು ಬೇಜವಾಬ್ದಾರಿತನದ ನಡವಳಿಕೆಯೇ ಕಾರಣ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಗಂಭೀರ ಆರೋಪ ಮಾಡಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಮುಂಗಾರು ಅಧಿವೇಶನದ ಕಲಾಪಗಳು ವ್ಯರ್ಥವಾದ ಕುರಿತು ರಾಹುಲ್ ಗಾಂಧಿ ಅವರ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಒಬ್ಬ ವ್ಯಕ್ತಿಯ ಅಹಂಕಾರದಿಂದ ಅಧಿವೇಶನ ವ್ಯರ್ಥ:

“ಮುಂಗಾರು ಅಧಿವೇಶನದಲ್ಲಿ ರಾಹುಲ್ ಗಾಂಧಿಯ ಅತ್ಯಂತ ಬೇಜವಾಬ್ದಾರಿತನದ ನಡವಳಿಕೆಯಿಂದಾಗಿ, ಅಂತಿಮವಾಗಿ ಅಂಗೀಕಾರಗೊಂಡ ವಿಧೇಯಕಗಳನ್ನು ಹೊರತುಪಡಿಸಿ, ನಡೆಯಬೇಕಿದ್ದ ಅರ್ಥಪೂರ್ಣ ಚರ್ಚೆಗಳು ಮತ್ತು ರಚನಾತ್ಮಕ ಕೆಲಸಗಳು ನಡೆಯಲಿಲ್ಲ. ಕೇವಲ ಒಬ್ಬ ವ್ಯಕ್ತಿಯ ಅಹಂಕಾರದಿಂದಾಗಿ ಇಡೀ ಅಧಿವೇಶನವೇ ಹಾದಿ ತಪ್ಪಿತು. ಇದಕ್ಕೆ ಅವರ ಅಹಂಕಾರದ ಹೊರತಾಗಿ ಬೇರೆ ಯಾವುದೇ ಕಾರಣವಿರಲಿಲ್ಲ” ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.


ಇದನ್ನೂ ಓದಿ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಗೀಕಾರ, ಪ್ರಲ್ಹಾದ್ ಜೋಶಿಗೆ ಕೇಂದ್ರ ಶಿಕ್ಷಣ ಖಾತೆ ಹೆಚ್ಚುವರಿ ಹೊಣೆ

ಬೇಡಿಕೆಗೆ ಒಪ್ಪಿದರೂ ಚರ್ಚೆಯಿಂದ ಓಡಿದ ವಿಪಕ್ಷ:

“ವಿರೋಧ ಪಕ್ಷದವರು ಬೇಡಿಕೆಗಳನ್ನು ಇಡುತ್ತಾರೆ. ಆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಾಗ ಅವರು ಚರ್ಚೆಯಿಂದ ಓಡಿಹೋಗುತ್ತಾರೆ. ಸಂಸತ್ತಿನಲ್ಲಿ ಗೃಹ ಸಚಿವರು ಉತ್ತರ ನೀಡಲಿದ್ದಾರೆ ಎಂದು ಒಂದು ವಾರದ ಹಿಂದೆಯೇ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದರು. ಆದರೂ ವಿಪಕ್ಷಗಳು ಅದನ್ನು ಒಪ್ಪಲಿಲ್ಲ. ನಿನ್ನೆ ಸ್ವತಃ ಗೃಹ ಸಚಿವರೇ ಮಾತನಾಡಿದಾಗ, ತಮ್ಮ ನಿಲುವನ್ನೇ ಬದಲಿಸಿ ಅವರ ರಾಜೀನಾಮೆಗೆ ಆಗ್ರಹಿಸಿದರು” ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.

ಸಾಂವಿಧಾನಿಕ ಚೌಕಟ್ಟಿನ ಉಲ್ಲಂಘನೆ:

“ಪ್ರತಿಭಟನೆ ನಡೆಯುತ್ತಿರುವ ಜಾರ್ಖಂಡ್‌ಗೆ ರಾಹುಲ್ ಗಾಂಧಿ ಏಕೆ ಹೋಗುತ್ತಿಲ್ಲ? ಅವರದೇ ಸಚಿವರಿಗೆ ಅವರು ಏಕೆ ಎಚ್ಚರಿಕೆ ನೀಡುತ್ತಿಲ್ಲ? ರಾಹುಲ್ ಗಾಂಧಿ ಅತ್ಯಂತ ಅಹಂಕಾರ ಹೊಂದಿರುವ ವ್ಯಕ್ತಿ. ಸರ್ಕಾರದ ಸಾಂವಿಧಾನಿಕ ಚೌಕಟ್ಟನ್ನು ನಿರ್ಲಕ್ಷಿಸಿ, ಸಂಸತ್ತು ಸಂಪೂರ್ಣವಾಗಿ ತಮ್ಮ ಇಷ್ಟದಂತೆಯೇ ನಡೆಯಬೇಕೆಂದು ಅವರು ಬಯಸುತ್ತಾರೆ” ಎಂದು ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ‘ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ’; ತಮ್ಮದೇ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಟೀಕೆ

“ಜನರಿಂದ 95 ಬಾರಿ ತಿರಸ್ಕರಿಸಲ್ಪಟ್ಟಿದ್ದರೂ, ಕಾಂಗ್ರೆಸ್ ನಾಯಕರು ತಮ್ಮ ಸರಣಿ ವೈಫಲ್ಯಗಳಿಂದ ಪಾಠ ಕಲಿಯಲು ಸಿದ್ಧರಿಲ್ಲದಂತೆ ಕಾಣುತ್ತಿದೆ” ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ನಡವಳಿಕೆಯನ್ನು ಖಂಡನೀಯ ಮತ್ತು ಸಂಸದೀಯ ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ ಎಂದು ಅವರು ಟೀಕಿಸಿದ್ದಾರೆ.

ನೀಟ್-ಯುಜಿ 2026 (NEET-UG 2026) ಪರೀಕ್ಷೆಯ ಅಕ್ರಮಗಳು ಹಾಗೂ ಅದನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ದೇಶವ್ಯಾಪಿ ವಿದ್ಯಾರ್ಥಿ ಪ್ರತಿಭಟನೆಗಳ ನಂತರ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು. ಇದಾದ ನಂತರ ಜುಲೈ 26ರಂದು ಪ್ರಲ್ಹಾದ್ ಜೋಶಿ ಅವರನ್ನು ಕೇಂದ್ರ ಶಿಕ್ಷಣ ಸಚಿವರನ್ನಾಗಿ ನೇಮಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:20 pm, Thu, 13 August 26

Source link

Leave a Reply

Your email address will not be published. Required fields are marked *