Headlines

ರಾಹುಲ್ ದ್ರಾವಿಡ್ ಔಟ್, ಇಂಗ್ಲೆಂಡ್​ ತಂಡಕ್ಕೆ ಹೊಸ ಕೋಚ್ ಬಹುತೇಕ ಫಿಕ್ಸ್​! – Kannada News | Rahul Dravid Out of England Test Coach Race; Stephen Fleming Frontrunner

ಜಾಗತಿಕ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಹಾಗೂ ಚಾಣಾಕ್ಷ ತಂತ್ರಜ್ಞರಲ್ಲಿ ಒಬ್ಬರಾದ ನ್ಯೂಝಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್, ಇಂಗ್ಲೆಂಡ್ ಪುರುಷರ ಟೆಸ್ಟ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ. ಬ್ರಿಟನ್‌ನ ಪ್ರತಿಷ್ಠಿತ ಮಾಧ್ಯಮ ದಿ ಟೆಲಿಗ್ರಾಫ್ ಪ್ರಕಟಿಸಿರುವ ವರದಿಯ ಪ್ರಕಾರ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ನಡೆಸಿದ ಸುದೀರ್ಘ ಸಂದರ್ಶನ ಪ್ರಕ್ರಿಯೆಯಲ್ಲಿ ಫ್ಲೆಮಿಂಗ್ ಮುಂಚೂಣಿಗೆ ಬಂದಿದ್ದಾರೆ.

ಇತ್ತೀಚೆಗಷ್ಟೇ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ಬ್ರೆಂಡನ್ ಮೆಕಲಮ್ ಅವರನ್ನು ವಜಾಗೊಳಿಸಲಾಗಿದ್ದು, ಆ ತೆರವಾದ ಸ್ಥಾನಕ್ಕೆ ಫ್ಲೆಮಿಂಗ್ ಅವರನ್ನು ತರಲು ಇಸಿಬಿ ಮ್ಯಾನೇಜಿಂಗ್ ಡೈರೆಕ್ಟರ್ ರಾಬ್ ಕೀ ಭರದ ಸಿದ್ಧತೆ ನಡೆಸಿದ್ದಾರೆ. ಈ ಸಿದ್ಧತೆಯೊಂದಿಗೆ ಸ್ಟೀಫನ್ ಫ್ಲೆಮಿಂಗ್ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಕಾಣಿಸಿಕೊಳ್ಳುವುದು ಬಹುತೇಕ ಕನ್ಫರ್ಮ್​ ಆದಂತಾಗಿದೆ.

ರಾಹುಲ್ ದ್ರಾವಿಡ್ ಔಟ್:

ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ರೇಸ್‌ನಿಂದ ಭಾರತದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಹಿಂದೆ ಸರಿದಿದ್ದಾರೆ. ಈ ಹಿಂದೆ ಇಂಗ್ಲೆಂಡ್ ತಂಡಕ್ಕೆ ದ್ರಾವಿಡ್ ಕೋಚ್ ಆಗುವುದು ಬಹುತೇಕ ಖಚಿತ ಎನ್ನಲಾಗಿತ್ತು.

ಆದರೆ ರಾಹುಲ್ ದ್ರಾವಿಡ್ ಸದ್ಯಕ್ಕೆ ಯಾವುದೇ ಅಂತರರಾಷ್ಟ್ರೀಯ ತಂಡಕ್ಕೆ ಪೂರ್ಣ ಸಮಯದ ಮುಖ್ಯ ಕೋಚ್ ಆಗಲು ಬಯಸುತ್ತಿಲ್ಲ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನೀಡಿದ ಆಫರ್​ ಅನ್ನು ದ್ರಾವಿಡ್​ ನಿರಾಕರಿಸಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನ ಸರಣಿ ಪ್ರವಾಸಗಳಿಂದ ಬಿಡುವು ಬಯಸಿರುವ ದ್ರಾವಿಡ್ ಪ್ರಸ್ತುತ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ನ ‘ಡಬ್ಲಿನ್ ಗಾರ್ಡಿಯನ್ಸ್’ ತಂಡದ ಸಹ-ಮಾಲೀಕರಾಗಿದ್ದಾರೆ. ಹೀಗಾಗಿ ಈ ಲೀಗ್​ನತ್ತ ಹೆಚ್ಚು ಗಮನಹರಿಸಲು ಇಸಿಬಿ ನೀಡಿದ ಕೋಚ್ ಆಫರ್ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ರಾಹುಲ್ ದ್ರಾವಿಡ್ ಕೋಚ್ ರೇಸ್​ನಿಂದ ಹೊರಗುಳಿಯುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೆಸರು ಮುಂಚೂಣಿಗೆ ಬಂದಿದೆ.

17 ವರ್ಷಗಳ ಬಾಂಧವ್ಯಕ್ಕೆ ಬ್ರೇಕ್!

ಸ್ಟೀಫನ್ ಫ್ಲೆಮಿಂಗ್ ಇತ್ತೀಚೆಗಷ್ಟೇ ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿ ಆದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಕಳೆದ 17 ವರ್ಷಗಳಿಂದ ಸಿಎಸ್‌ಕೆ ಸಾಮ್ರಾಜ್ಯವನ್ನು ಮುನ್ನಡೆಸಿದ್ದ ಫ್ಲೆಮಿಂಗ್, ತಂಡಕ್ಕೆ 5 ಐಪಿಎಲ್ ಟ್ರೋಫಿ ಹಾಗೂ 2 ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಸಿಎಸ್‌ಕೆ ತೊರೆದ ಬೆನ್ನಲ್ಲೇ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕೋಚ್ ಆಗಿ ಕಂಬ್ಯಾಕ್ ಮಾಡುತ್ತಿರುವುದು ವಿಶೇಷ.

ಮೆಕಲಮ್-ಫ್ಲೆಮಿಂಗ್ ಜುಗಲ್‌ಬಂದಿ:

ಬ್ರೆಂಡನ್ ಮೆಕಲಮ್ ಅವರನ್ನು ಟೆಸ್ಟ್ ಕೋಚ್ ಸ್ಥಾನದಿಂದ ಕಿತ್ತೆಸೆಯಲಾಗಿದ್ದರೂ, ಅವರು ಇಂಗ್ಲೆಂಡ್‌ನ ಏಕದಿನ ಮತ್ತು ಟಿ20 ತಂಡಗಳ ಕೋಚ್ ಆಗಿ ಮುಂದುವರಿಯಲಿದ್ದಾರೆ. ವಿಶೇಷವೆಂದರೆ, ಮೆಕಲಮ್ ಅವರು ನ್ಯೂಝಿಲೆಂಡ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದೇ ಫ್ಲೆಮಿಂಗ್ ಅವರ ನಾಯಕತ್ವದ ಅಡಿಯಲ್ಲಿ.

“ಸ್ಟೀಫನ್ ಫ್ಲೆಮಿಂಗ್ ಮೈದಾನದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದ ತಂತ್ರಗಳು ನನ್ನ ಮೇಲೆ ಆಳವಾದ ಪ್ರಭಾವ ಬೀರಿದ್ದವು,” ಎಂದು ಮೆಕಲಮ್ ಈ ಹಿಂದೆ ಹೇಳಿಕೊಂಡಿದ್ದರು. ಹೀಗಾಗಿ, ಈ ಇಬ್ಬರು ಕಿವೀಸ್ ದಿಗ್ಗಜರ ಕಾಂಬಿನೇಷನ್ ಇಂಗ್ಲೆಂಡ್ ಕ್ರಿಕೆಟ್‌ನ ಒಟ್ಟಾರೆ ಪ್ರಗತಿಗೆ ನೆರವಾಗಲಿದೆ ಎಂಬುದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ನ ಹೊಸ ಲೆಕ್ಕಾಚಾರವಾಗಿದೆ.

ಪಾಕಿಸ್ತಾನ್ ಸರಣಿಗೆ ರೂಟ್ ನಾಯಕ:

ಮುಂದಿನ ತಿಂಗಳು ಇಂಗ್ಲೆಂಡ್ ತಂಡವು ಪಾಕಿಸ್ತಾನ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಆದರೆ ಫ್ಲೆಮಿಂಗ್ ಅವರ ಅಧಿಕೃತ ಅವಧಿ ಡಿಸೆಂಬರ್‌ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ಪ್ರವಾಸದಿಂದ ಆರಂಭವಾಗುವ ಸಾಧ್ಯತೆಯಿದೆ. ಹಾಗಾಗಿ, ಇತ್ತೀಚೆಗಷ್ಟೇ ನಾಯಕತ್ವಕ್ಕೆ ದಿಢೀರ್ ವಿದಾಯ ಹೇಳಿದ ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ, ಹಿರಿಯ ಆಟಗಾರ ಜೋ ರೂಟ್ ಪಾಕಿಸ್ತಾನ್ ಸರಣಿಗೆ ಹಂಗಾಮಿ ನಾಯಕರಾಗಿ ಮತ್ತು ಮಾಜಿ ಆರಂಭಿಕ ಆಟಗಾರ ಮಾರ್ಕಸ್ ಟ್ರೆಸ್ಕೋಥಿಕ್ ಹಂಗಾಮಿ ಕೋಚ್ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಇದನ್ನೂ ಓದಿ: ಅರ್ಜೆಂಟೀನಾ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಫಿಫಾ!

ಇನ್ನು ಡಿಸೆಂಬರ್​ ವೇಳೆ ಸ್ಟೀಫನ್ ಫ್ಲೆಮಿಂಗ್ ಇಂಗ್ಲೆಂಡ್ ಟೆಸ್ಟ್ ತಂಡದ ಜವಾಬ್ದಾರಿ ವಹಿಸಿಕೊಂಡರೆ, ಮುಂಬರುವ 2027ರ ಪ್ರತಿಷ್ಠಿತ ಆ್ಯಶಸ್ ಸರಣಿಗೂ ಮುನ್ನ ಇಂಗ್ಲೆಂಡ್ ತಂಡವನ್ನು ಹೊಸದಾಗಿ ಕಟ್ಟುವುದು ಅವರ ಮುಂದಿರುವ ಮೊದಲ ದೊಡ್ಡ ಸವಾಲಾಗಿರಲಿದೆ.

Source link

Leave a Reply

Your email address will not be published. Required fields are marked *