ವಿಜಯಪುರ, ಆಗಸ್ಟ್ 07: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನ ಐತಿಹಾಸಿಕ ಐತಿಹ್ಯ ಹೊಂದಿರುವ ದೇವಸ್ಥಾನ. ಇದೇ ದೇವಸ್ಥಾನದಲ್ಲಿನ ಇತ್ತೀಚೆಗೆ ಬೆಳ್ಳಿ ಮೂರ್ತಿಯ ಕಳ್ಳತನವಾಗಿತ್ತು (temple theft). ಘಟನೆ ನಡೆದು ಒಂದು ತಿಂಗಳ ಬಳಿಕ ಕೃತ್ಯವೆಸಗಿದ್ದ ಗುಜರಾತ್ ಮೂಲದ ಖದೀಮರನ್ನು ಜಿಲ್ಲಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರೀಲ್ಸ್ ನೋಡಿ ಕಳ್ಳತನ ಮಾಡಿದವರು ಇದೀಗ ಕಂಬಿ ಎಣಿಸುವಂತಾಗಿದೆ.
ನಡೆದಿದ್ದೇನು?
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಐತಿಹಾಸಿಕ ಹಾಗೂ ಪವಾಡ ದೇವಸ್ಥಾನವೆಂದೇ ಖ್ಯಾತಿ ಪಡೆದ ಪವಾಡ ಬಸವೇಶ್ವರ ದೇವಸ್ಥಾನದ ಬಸವಣ್ಣನವರ ಬೆಳ್ಳಿ ಮೂರ್ತಿಯನ್ನು ಕಳ್ಳತನವಾಗಿತ್ತು. ಕಳೆದ ಜುಲೈ 6ರಂದು ಘಟನೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ದೇಗುಲದಲ್ಲಿದ್ದ ಅರ್ಧ ಕೋಟಿ ರೂ ಮೌಲ್ಯದ, 32 ಕೆಜಿ ತೂಕದ ಬೆಳ್ಳಿ ಮೂರ್ತಿಯನ್ನು ಎಗರಿಸಿಕೊಂಡು ಹೋಗಿದ್ದರು. ಘಟನೆ ನಡೆದಾಗ ಸ್ಥಳೀಯ ಕಳ್ಳರೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ, ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ತನಿಖೆ ನಡೆಸಿದಾಗ ಖದೀಮರು ಸಿಕ್ಕಿಬಿದ್ದಿದ್ದಾರೆ.
ರೀಲ್ಸ್ ನೋಡಿ ಸ್ಕೆಚ್ ಹಾಕಿದ್ದ ಖದೀಮರು
ಕಳ್ಳತನ ಮಾಡುವ ಉದ್ದೇಶದಿಂದಲೇ ಖದೀಮರು ಗೂಗಲ್ನಲ್ಲಿ ದೇಗುಲಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಹೀಗೆ ಖದೀಮರು ಸರ್ಚ್ ಮಾಡುತ್ತಿದ್ದಾಗ, ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದ ಬಗ್ಗೆ ಮಾಹಿತಿ ಸಿಕ್ಕಿದೆ. ಆಗ ದೇಗುಲದ ಬೆಳ್ಳಿ ಮೂರ್ತಿ ಕಣ್ಣಿಗೆ ಬಿದ್ದಿದೆ. ಕೂಡಲೇ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ಗಳಲ್ಲಿ ಮೂರ್ತಿ ಬಗ್ಗೆ ಮಾಹಿತಿ ಸಂಗ್ರಹಿಸಿ, ಗುಜರಾತ್ನಿಂದ ಕಾರಿನಲ್ಲಿ ಬಂದು ಕಳ್ಳತನ ನಡೆಸಿ ಪರಾರಿಯಾಗಿದ್ದರು. ಸತತ ಒಂದು ತಿಂಗಳ ಕಾಲ ತನಿಖೆ ನಡೆಸಿದ ಪೊಲೀಸರು, ಗುಜರಾತ್ ಮೂಲದ ಸುರೇಶಕುಮಾರ್ ಸೋನಿ (51), ಬ್ರಹ್ಮಾರ್ ನೇಟ್ (35) ಮತ್ತು ಇಂದ್ರಜೀತ್ ನೇಟ್ (33) ಬಂಧಿತರು.
ಪವಾಡ ಬಸವೇಶ್ವರರ ದೇವಸ್ಥಾನ ಕಳ್ಳತನದಲ್ಲಿ ಸ್ಥಳಿಯ ಕಳ್ಳರ ಕೈವಾಡ ಇರಬಹುದು ಎಂದು ಮೊದಲು ಪೊಲೀಸರು ಶಂಕಿಸಿದ್ದರು. ನಂತರ ಸುತ್ತಮುತ್ತಲ ಭಾಗದ ಸಿಸಿ ಕ್ಯಾಮೆರಾದಲ್ಲಿ ವಿಡಿಯೋ ಪರಿಶೀಲನೆ ಮಾಡಿದಾಗ ಗುಜರಾತ್ ಮೂಲದ GJ-01-KS 4317 ಸಂಖ್ಯೆಯ ನೋಂದಣಿ ವಾಹನ ಸಂಚಾರ ಮಾಡಿದ್ದು, ಕಂಡುಬಂದಿತ್ತು. ಈ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರ ಬಲೆಗೆ ಆರೋಪಿಗಳು ಬಿದ್ದಿದ್ದಾರೆ.
52.70 ಲಕ್ಷ ರೂ ಮೌಲ್ಯದ ಸ್ವತ್ತು ವಶಕ್ಕೆ
ಬಂಧಿತ ಆರೋಪಿಗಳು ಕದ್ದ ಮೂರ್ತಿಯನ್ನು ಕರಗಿಸಿ ಗಟ್ಟಿಗಳನ್ನಾಗಿ ಪರಿವರ್ತಿಸಿದ್ದರು. ಸದ್ಯ ಖದೀಮರಿಂದ 23 ಕೆಜಿ ಗಟ್ಟಿ ಬೆಳ್ಳಿ, 4 ಕೆಜಿ ಮೂರ್ತಿ ಕತ್ತರಿಸಿದ ತುಂಡುಗಳು, 67 ಸಾವಿರ ರೂ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಸೇರಿದಂತೆ ಒಟ್ಟು 52.70 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಯುವತಿ ಕುಟುಂಬಸ್ಥರಿಂದ ಹಲ್ಲೆ ಆರೋಪ: ದೂರು-ಪ್ರತಿದೂರು ದಾಖಲು
ದೂರದ ಗುಜರಾತಿನಿಂದ ಬಂದು ರಾಜ್ಯದ ಗಡಿ ದಾಟಿ ಬಂದು ಕಳ್ಳತನ ಮಾಡಿದ್ದ ಅಂತಾರಾಜ್ಯ ಖದೀಮರನ್ನು ಕೊನೆಗೂ ವಿಜಯಪುರ ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ. ಪೊಲೀಸರ ಈ ಚಾಣಾಕ್ಷ ತನಿಖೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.