ವೈದ್ಯರ ಬದಲು ಅವರ ಪತ್ನಿಯಿಂದ ರೋಗಿಗಳಿಗೆ ಚಿಕಿತ್ಸೆ!Image Credit source: Tv9 Kannada
ಬೆಂಗಳೂರು, ಜೂನ್ 24: ಖಾಸಗಿ ಕ್ಲಿನಿಕ್ಗಳಿಗೆ ಹೋಗೋಣ ಎಂದರೆ ನಕಲಿ ಡಾಕ್ಟರ್ಗಳ ಹಾವಳಿ ಕಾರಣ ಮೊದಲೇ ಕಂಗಾಲಾಗಿರುವ ಜನರು ಸರ್ಕಾರಿ ಆಸ್ಪತ್ರೆಗಳ ವೈದ್ಯರ ಮೇಲೆ ಅಲ್ಪಸ್ವಲ್ಪ ನಂಬಿಕೆ ಉಳಿಸಿಕೊಂಡಿದ್ದರು. ಆದರೆ ಬಾಗಲಕೋಟೆಯಲ್ಲಿ ನಡೆದಿರುವ ಘಟನೆ ಇನ್ನು ಯಾರನ್ನು ನಂಬಬೇಕು ಎಂಬ ಪ್ರಶ್ನೆಯನ್ನು ಸಾರ್ವಜನಿಕರಲ್ಲಿ ಹುಟ್ಟುಹಾಕಿದೆ. ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಬದಲು ಅವರ ಪತ್ನಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆರೋಪ ಕೇಳಿಬಂದಿದೆ.
ಸ್ಥಳೀಯರ ಆಕ್ರೋಶ
ಹೌದು, ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿರೋದು ಹೆಚ್. ವಿ. ಲೇಬಗಿರಿ. ಆದರೆ ಆಸ್ಪತ್ರೆಗೆ ಸಂಬಂಧಪಟ್ಟ ಯಾವುದೇ ಹುದ್ದೆಯಲ್ಲಿ ಇಲ್ಲದ ಅವರ ಪತ್ನಿ ರೋಗಿಗಳಿಗೆ ಚಿಕಿತ್ಸೆ ಮತ್ತು ಔಷಧ ವಿತರಣೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಪತಿ ಜೊತೆಗೆ ಆಸ್ಪತ್ರೆಗೆ ಬಂದು ವೈದ್ಯರ ರೀತಿ ಚೇರ್ನಲ್ಲಿ ಕೂರುವ ಆಕೆ ಬರುವ ರೋಗಿಗಳ ತಪಾಸಣೆ ಮಾಡುತ್ತಾರಂತೆ. ಸಾಮಾನ್ಯ ರೋಗಿಗಳಿಗೆ ಮಾತ್ರವಲ್ಲದೆ ಗರ್ಭಿಣಿಯರಿಗೂ ವೈದ್ಯರ ಪತ್ನಿ ಚಿಕಿತ್ಸೆ ನೀಡುತ್ತಾರೆ. ಇದರಿಂದ ರೋಗಿಗಳ ಆರೋಗ್ಯದ ಮೇಲೆ ಏನಾದರೂ ವ್ಯಕ್ತಿರಿಕ್ತ ಪರಿಣಾಮವಾದರೆ ಯಾರು ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ತಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ್ದ ಸರ್ಕಾರಿ ಕಟ್ಟಡವೀಗ ಅನೈತಿಕ ಚಟುವಟಿಕೆಗಳ ತಾಣ; ಹೇಳೋರು ಇಲ್ಲ ಕೇಳೋರು ಇಲ್ಲ!
ಇನ್ನು ಇದೇ ವಿಚಾರವಾಗಿ ಆಸ್ಪತ್ರೆಯ ವೈದ್ಯಾಧಿಕಾರಿ ಹೆಚ್. ವಿ. ಲೇಬಗಿರಿ ಅವರನ್ನು ಸ್ಥಳೀಯರು ತರಾಟೆಗೆ ಪಡೆದ ಘಟನೆಯೂ ನಡೆದಿದೆ. ಈ ವೇಳೆ ಪ್ರಿಸ್ಕ್ರಿಪ್ಶನ್ನಲ್ಲಿ ಇರೋದು ತನ್ನ ಪತ್ನಿಯ ಬರಹ ಅಲ್ಲವೇ ಅಲ್ಲ ಎಂದು ವಾದಿಸಿರುವ ಲೇಬಗಿರಿ ಅವರು ವಾದಿಸಿದರೆ, ಮೊಬೈಲ್ನಲ್ಲಿ ಮಾತನಾಡುವ ನೆಪದಲ್ಲಿ ವೈದ್ಯಾಧಿಕಾರಿಯ ಪತ್ನಿ ಆಸ್ಪತ್ರೆಯಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ. ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.