ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ Image Credit source: India Today
ನವದೆಹಲಿ, ಜೂನ್ 06: ಲಂಡನ್ನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಕೆಲವರು ಗದ್ದಲ ಸೃಷ್ಟಿಸಿ, ಅಡ್ಡಿಪಡಿಸಿರುವ ಘಟನೆ ನಡೆದಿದೆ. ಈ ವರ್ತನೆಯನ್ನು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ (ರಾಯಭಾರ ಕಚೇರಿ) ತೀವ್ರವಾಗಿ ಖಂಡಿಸಿದೆ. ಇದು ಸಭ್ಯತೆಯಿಂದ ಕೂಡಿದ ನಡವಳಿಕೆಯಲ್ಲ. ಗೌರವಾನ್ವಿತ ಕಾರ್ಯಕ್ರಮಗಳಲ್ಲಿ ಇಂತಹ ವರ್ತನೆಗಳನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಶಾಂತಿಯುತ ಮತ್ತು ಗೌರವಾನ್ವಿತ ರೀತಿಯಲ್ಲಿ ವ್ಯಕ್ತಪಡಿಸಬೇಕು ಎಂದು ಹೈಕಮಿಷನ್ ತನ್ನ X ಖಾತೆಯಲ್ಲಿ ತಿಳಿಸಿದೆ.
ಮುಖ್ಯಾಂಶಗಳು
- ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕಾರ್ಯಕ್ರಮಕ್ಕೆ ಅಡ್ಡಿ.
- ಭಾರತದಲ್ಲಿ ಭಿನ್ನಾಭಿಪ್ರಾಯ ಹತ್ತಿಕ್ಕುವಿಕೆ ಮತ್ತು ‘ಕಾಕ್ರೋಚ್’ ಹೇಳಿಕೆ ಕುರಿತು ಪ್ರಶ್ನಿಸಿದ ಮಹಿಳೆ.
- ಗದ್ದಲದ ವರ್ತನೆಯನ್ನು ತೀವ್ರವಾಗಿ ಖಂಡಿಸಿದ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್.
ಅಸಲಿಗೆ ಲಂಡನ್ನಲ್ಲಿ ಆಗಿದ್ದೇನು?
ಜೂನ್ 4 ರಂದು ಲಂಡನ್ನ ಬರ್ಕ್ಬೆಕ್ ಕಾಲೇಜಿನಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ‘ಕೃತಕ ಬುದ್ಧಿಮತ್ತೆ (AI) ಮತ್ತು ಅಂತರರಾಷ್ಟ್ರೀಯ ಕಾನೂನು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು. ಈ ವೇಳೆ ಪ್ರಶ್ನೋತ್ತರ ಅವಧಿಯಲ್ಲಿ ಸಾರ್ವಜನಿಕರಲ್ಲಿದ್ದ ಕೆಲವರು, ಭಾರತದಲ್ಲಿ ವಿರೋಧದ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿ ಪ್ರಶ್ನೆ ಕೇಳಲು ಆರಂಭಿಸಿದರು. ಅಲ್ಲದೆ, ನ್ಯಾಯಮೂರ್ತಿಗಳು ಇತ್ತೀಚೆಗೆ ನೀಡಿದ್ದ ಕಾಕ್ರೋಚ್ ಹೇಳಿಕೆಯ ಕುರಿತೂ ಪ್ರಶ್ನಿಸಲು ಯತ್ನಿಸಿದರು.
ಆಗ ಕಾರ್ಯಕ್ರಮದ ಸಂಘಟಕರು ಮತ್ತು ನಿರೂಪಕರು ಮಧ್ಯಪ್ರವೇಶಿಸಿ, ಈ ಪ್ರಶ್ನೆಗಳು ಇಂದಿನ ವಿಷಯಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿ ಆ ಪ್ರಶ್ನೆಗಳನ್ನು ಅಲ್ಲಗಳಿದರು. ಈ ಘಟನೆಯ ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
ವೈರಲ್ ವಿಡಿಯೋದಲ್ಲೇನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು, ಭಾರತದಲ್ಲಿ ಸರ್ಕಾರದ ನಿಲುವುಗಳನ್ನು ವಿರೋಧಿಸುವವರನ್ನು ಹತ್ತಿಕ್ಕಲಾಗುತ್ತಿದೆ ಎಂದು ದೇಶದ ಮತ್ತು ಜಾಗತಿಕ ಕಾನೂನು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಶ್ನೆ ಕೇಳುತ್ತಿರುವುದು ಕಂಡುಬಂದಿದೆ. ಈ ಒಂದು ಅಸಹಿಷ್ಣುತೆ ನ್ಯಾಯಾಧೀಶರ ಭಾಷಣದಲ್ಲೂ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದಿದ್ದಾರೆ. ಆದರೆ ತಕ್ಷಣವೇ ನಿರೂಪಕರು, ಕ್ಷಮಿಸಿ, ಇಂದಿನ ವಿಷಯ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಈ ಪ್ರಶ್ನೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಮೈಕ್ ಕಟ್ ಮಾಡಿದ್ದಾರೆ.
ಕೃತಕ ಬುದ್ಧಿಮತ್ತೆ (AI) ಬಗ್ಗೆ ಸಿಜೆಐ ಹೇಳಿದ್ದೇನು?
ಇದಕ್ಕೂ ಮುನ್ನ ಭಾಷಣ ಮಾಡಿದ್ದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ಕೃತಕ ಬುದ್ಧಿಮತ್ತೆಯು ಆಡಳಿತ, ನ್ಯಾಯಾಂಗ ಮತ್ತು ಸಂವಹನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ಅದು ಸಂವಿಧಾನದ ಮೌಲ್ಯಗಳು, ಪ್ರಜಾಪ್ರಭುತ್ವ ಮತ್ತು ಮಾನವನ ಘನತೆಗೆ ಬದ್ಧವಾಗಿರಬೇಕು ಎಂದು ಒತ್ತಿ ಹೇಳಿದ್ದರು. ತಂತ್ರಜ್ಞಾನ ಮತ್ತು ಮಾನವ ಸ್ವಾತಂತ್ರ್ಯದ ನಡುವಿನ ಸಂಬಂಧವನ್ನು ಮುಂಬರುವ ದಿನಗಳು ನಿರ್ಧರಿಸಲಿವೆ ಎಂದು ಅವರು ತಿಳಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.