ಮಂಗಳೂರು, ಜುಲೈ 21: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ಜೋಡಿಯೊಂದು ಮದುವೆಯಾದ ಪ್ರಕರಣವೊಂದು, ಇದೀಗ ಗಂಡ ಪರಸ್ತ್ರೀಯೊಂದಿಗೆ ಪರಾರಿಯಾಗುವುದರೊಂದಿಗೆ ಕಲಹಕ್ಕೆ ಕಾರಣವಾಗಿದೆ. ಈ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕಾವೂರು ನಿವಾಸಿ ಲೋಲಾಕ್ಷಿ ಅವರ ಪತಿ ಪ್ರಜ್ವಲ್, 10 ತಿಂಗಳ ಮಗು ಇರುವಾಗಲೇ ಬೇರೊಬ್ಬ ಮಹಿಳೆಯೊಂದಿಗೆ ಪರಾರಿಯಾಗಿದ್ದಾರೆ. ಕೋವಿಡ್ ಅವಧಿಯಲ್ಲಿ ಅಪಘಾತಕ್ಕೀಡಾಗಿದ್ದ ಪ್ರಜ್ವಲ್ಗೆ ಲೋಲಾಕ್ಷಿ ಐದು ವರ್ಷಗಳ ಕಾಲ ಚಿಕಿತ್ಸೆ ಕೊಡಿಸಿ, ತಮ್ಮ ಮನೆಯಲ್ಲೇ ಸಾಕಿ ನಂತರ 2025ರಲ್ಲಿ ಮದುವೆಯಾಗಿದ್ದರು.
ಆದರೆ, ಮದುವೆಯಾಗಿ ಸುಮಾರು ಒಂದೂವರೆ ವರ್ಷದಲ್ಲಿ, 10 ತಿಂಗಳ ಮಗು ಇರುವಾಗಲೇ ಪ್ರಜ್ವಲ್ ಬೇರೊಬ್ಬ ಮಹಿಳೆ ಶರ್ಮಿಳಾ ಜೊತೆ ಜೂನ್ 30ರಂದು ಪರಾರಿಯಾಗಿದ್ದಾರೆ. ಶರ್ಮಿಳಾ, ಪ್ರಜ್ವಲ್ಗೆ 2 ಲಕ್ಷ ರೂಪಾಯಿ ಹಣ ನೀಡಿದ್ದ ಬಗ್ಗೆಯೂ ಮಾಹಿತಿ ಇದೆ. ಲೋಲಾಕ್ಷಿ ಅವರು ತಮ್ಮ ಪತಿ ಪ್ರಜ್ವಲ್ನನ್ನು ಶರ್ಮಿಳಾ ಕರೆದುಕೊಂಡು ಹೋಗಿದ್ದಾರೆ ಎಂದು ಬಜಪೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೋಲಿಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಲೋಲಾಕ್ಷಿ ಆರೋಪಿಸಿದ್ದಾರೆ. ತಮಗೆ ಮತ್ತು ತಮ್ಮ ಮಗುವಿಗೆ ನ್ಯಾಯ ಒದಗಿಸಬೇಕು ಎಂದು ಲೋಲಾಕ್ಷಿ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ