ದೆಹಲಿ,ಆ.17: ಕರ್ನಾಟಕದ ಸಚಿವ ಬಿ. ನಾಗೇಂದ್ರ ಅವರ ಹೆಸರು ಕೇಳಿಬಂದಿರುವ ಬಹುಕೋಟಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದರಲ್ಲಿ, ಆರೋಪಿ ಕಾಕಿ ಶ್ರೀನಿವಾಸ್ ರಾವ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಬೋಗಸ್ ದಾಖಲೆಗಳು ಹಾಗೂ ನಕಲಿ ಬ್ಯಾಂಕ್ ಖಾತೆಗಳ ಮೂಲಕ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 89 ಕೋಟಿಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡ ಪ್ರಕರಣ ಇದಾಗಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠವು, ನ್ಯಾಯವಾದಿ ಅನಿಲ್ ಚಂದ್ರಶೇಖರ್ ನಿಶಾನಿ ಅವರು ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯನ್ನು (SLP) ಪುರಸ್ಕರಿಸಿ ಜಾಮೀನು ಆದೇಶ ಹೊರಡಿಸಿದೆ. ಹಿರಿಯ ವಕೀಲರಾದ ಮಾಧವಿ ದಿವಾನ ಅರ್ಜಿದಾರರ ಪರ ವಾದ ಮಂಡಿಸಿದರು. ಡಿಸೆಂಬರ್ 19, 2024 ರಂದು ಬೆಂಗಳೂರಿನ ಕರ್ನಾಟಕ ಹೈಕೋರ್ಟ್ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ನೀಡಿದ್ದ ಅಂತಿಮ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಚಾರ್ಜ್‌ಶೀಟ್ ಪ್ರಕಾರ, ಷೇರು ವಹಿವಾಟು ಸಂಸ್ಥೆ ನಡೆಸುತ್ತಿದ್ದ ಆರೋಪಿ ಕಾಕಿ ಶ್ರೀನಿವಾಸ್ ರಾವ್ ಮೇಲೆ ಯಾವುದೇ ಮುಖ್ಯ ಪಾತ್ರದ ಆರೋಪವಿಲ್ಲ. ನಗದು ರೂಪದ ಹಣವನ್ನು ಚಿನ್ನವಾಗಿ ಪರಿವರ್ತಿಸಲು ನೆರವಾಗಿದ್ದು ಹಾಗೂ 18 ನಕಲಿ ಖಾತೆಗಳ ಸೃಷ್ಟಿಯಲ್ಲಿ ಸಹಕರಿಸಿದ ಆರೋಪ ಮಾತ್ರ ಇತ್ತು. ಆರೋಪಿಯು 32 ವರ್ಷದ ಯುವಕನಾಗಿದ್ದು, ಬೆನ್ನುಮೂಳೆಯ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಳೆದ 22 ತಿಂಗಳುಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆ ಶೀಘ್ರ ಮುಕ್ತಾಯವಾಗುವ ಸಾಧ್ಯತೆಯಿಲ್ಲದ ಕಾರಣ ಹಾಗೂ ಆರೋಗ್ಯ ಪರಿಸ್ಥಿತಿಯನ್ನು ಪರಿಗಣಿಸಿ ಜಾಮೀನು ನೀಡಲಾಗಿದೆ.
ಇದನ್ನೂ ಓದಿ; ನಾಗೇಂದ್ರರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದಕ್ಕೆ ಆಕ್ರೋಶ
ಮೇ 2024ರಂದು ನಕಲಿ ದಾಖಲೆಗಳನ್ನು ಬಳಸಿ ಹಣ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ವಿರುದ್ಧ ವಾಲ್ಮೀಕಿ ನಿಗಮದಿಂದ ದೂರು ನೀಡಲಾಯಿತು. ಜೂನ್ 2024ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಸಾರ್ವಜನಿಕ ಹಣದ ವಂಚನೆ ಕುರಿತು ಸಿಬಿಐಗೆ ದೂರು ನೀಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಐಡಿ ಎಸ್‌ಐಟಿ (SIT) ರಚಿಸಿದ್ದರೆ, ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐ ಕೂಡ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಿವೆ. ಜುಲೈ 15, 2024ರಂದು ತನಿಖೆಯ ಭಾಗವಾಗಿ ಆರೋಪಿ ಕಾಕಿ ಶ್ರೀನಿವಾಸ್ ರಾವ್ ಅವರನ್ನು ಬಂಧಿಸಲಾಗಿತ್ತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ