ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ (Pakistan vs West Indies) ತಂಡಗಳು ಪ್ರಸ್ತುತ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿವೆ. ಸರಣಿಯ ಮೊದಲ ಪಂದ್ಯವನ್ನು ಆತಿಥೇಯ ವಿಂಡೀಸ್ 90 ರನ್ಗಳಿಂದ ಗೆದ್ದುಕೊಂಡಿತು. ಬಾಬರ್ ಆಝಂ ನಾಯಕತ್ವದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಪಾಕ್, ಎರಡನೇ ಇನ್ನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಮಾಡಿತು. ಹೀಗಾಗಿ ಪಾಕ್ ತಂಡಕ್ಕೆ ಮೊದಲ ಟೆಸ್ಟ್ನಲ್ಲಿ ಹೀನಾಯ ಸೋಲು ಎದುರಾಯಿತು. ಈ ಸೋಲಿನ ನೋವಿನಿಂದ ಹೊರಬರುವ ಮೊದಲೇ ಪಾಕಿಸ್ತಾನ ತಂಡಕ್ಕೆ ಐಸಿಸಿ (ICC) ಮತ್ತೊಂದು ಶಾಕ್ ನೀಡಿದೆ. ತಂಡದ ಇಬ್ಬರು ಆಟಗಾರರಿಗೆ ಐಸಿಸಿ ದಂಡ ವಿಧಿಸಿದೆ.
ಇಬ್ಬರು ಪಾಕ್ ಆಟಗಾರರ ವಿರುದ್ಧ ಐಸಿಸಿ ಕ್ರಮ
ಪಾಕಿಸ್ತಾನದ ವೇಗದ ಬೌಲರ್ಗಳಾದ ಮೊಹಮ್ಮದ್ ಅಬ್ಬಾಸ್ ಮತ್ತು ಖುರ್ರಮ್ ಶಹಜಾದ್ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ ತಪ್ಪಿತಸ್ಥರೆಂದು ಕಂಡುಬಂದಿದೆ. ಪಂದ್ಯದ ಸಮಯದಲ್ಲಿ ಇಬ್ಬರೂ ಆಟಗಾರರು ಅವಾಚ್ಯ ಶಬ್ದಗಳನ್ನು ಬಳಸಿದ್ದು, ಲೆವೆಲ್ 1 ರ ಉಲ್ಲಂಘನೆಯಾಗಿದೆ. ಹೀಗಾಗಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಸಿ ಮೊಹಮ್ಮದ್ ಅಬ್ಬಾಸ್ಗೆ ವಾಗ್ದಂಡನೆ ನೀಡಿದರೆ, ಖುರ್ರಮ್ ಶಹಜಾದ್ ಅವರ ಪಂದ್ಯ ಶುಲ್ಕದ 15% ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಇದರ ಜೊತೆಗೆ ಅವರಿಗೆ ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.
ವಿಂಡೀಸ್ ಆಟಗಾರ ಶೈ ಹೋಪ್ ಅವರನ್ನು ಔಟ್ ಮಾಡಿದ ನಂತರ ಖುರ್ರಮ್ ಆಕ್ರಮಣಕಾರಿಯಾಗಿ ಆಚರಿಸಿದ್ದರು. ಮತ್ತೊಂದೆಡೆ, ಮೊಹಮ್ಮದ್ ಅಬ್ಬಾಸ್ ಜೋಮೆಲ್ ವಾರಿಕನ್ ಅವರನ್ನು ಔಟ್ ಮಾಡಿದ ನಂತರವೂ ಅದೇ ರೀತಿ ಮಾಡಿದ್ದರು. ಹೀಗಾಗಿ ಇವರಿಬ್ಬರ ಆಚರಣೆಗಳು ಆಕ್ರಮಣಕಾರಿ ಎಂದು ಪರಿಗಣಿಸಿರುವ ಐಸಿಸಿ ಇಬ್ಬರ ವಿರುದ್ಧ ಕ್ರಮ ಕೈಗೊಂಡಿದೆ.
IND U19 vs SL U19: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ ಯುವ ಪಡೆ
ಫೈನಲ್ ರೇಸ್ನಿಂದ ಪಾಕ್ ಔಟ್
ಪಾಕಿಸ್ತಾನದ ಪರವಾಗಿ ಮೊಹಮ್ಮದ್ ಅಬ್ಬಾಸ್ ಅದ್ಭುತ ಬೌಲಿಂಗ್ ಮಾಡಿದರು. ಅವರು ಮೊದಲ ಇನ್ನಿಂಗ್ಸ್ನಲ್ಲಿ ಮೂರು ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳನ್ನು ಕಬಳಿಸಿದರು. ಇದರ ಪರಿಣಾಮವಾಗಿ ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 181 ರನ್ಗಳಿಗೆ ಆಲೌಟ್ ಆಗಿ ಪಾಕಿಸ್ತಾನಕ್ಕೆ ಕೇವಲ 211 ರನ್ಗಳ ಗುರಿ ನೀಡಿತು. ಆದರೆ ಪಾಕಿಸ್ತಾನದ ಬ್ಯಾಟಿಂಗ್ ವಿಭಾಗ ಸಂಪೂರ್ಣ ವಿಫಲವಾಗಿ ವಿಂಡೀಸ್ ವಿರುದ್ಧ ಸೋಲೊಪ್ಪಿಕೊಂಡಿತು. ನಾಯಕ ಬಾಬರ್ ಆಝಂ ಎರಡನೇ ಇನ್ನಿಂಗ್ಸ್ನಲ್ಲಿ ಅಜೇಯ 58 ರನ್ ಗಳಿಸಿದರು. ಇತ್ತ ವಿಂಡೀಸ್ ಪರ ಜೇಡನ್ ಸೀಲ್ಸ್ 20 ರನ್ಗಳಿಗೆ 5 ವಿಕೆಟ್ಗಳನ್ನು ಕಬಳಿಸಿದರು. ಈ ಸೋಲಿನೊಂದಿಗೆ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರೇಸ್ನಿಂದ ಹೊರಬಿದ್ದಿದೆ.