Headlines

ವಿಂಬಲ್ಡನ್ ಕೋರ್ಟ್‌ನಲ್ಲಿ ರಾರಾಜಿಸುವ ‘ಮೇಡ್ ಇನ್ ಇಂಡಿಯಾ’!

ವಿಂಬಲ್ಡನ್ ಕೋರ್ಟ್‌ನಲ್ಲಿ ರಾರಾಜಿಸುವ ‘ಮೇಡ್ ಇನ್ ಇಂಡಿಯಾ’!

ಟೆನಿಸ್ ಲೋಕದ ಅತ್ಯಂತ ಪ್ರತಿಷ್ಠಿತ ಮತ್ತು ಹಳೆಯ ಟೂರ್ನಿ ವಿಂಬಲ್ಡನ್, ತನ್ನದೇ ಆದ ಕೆಲವು ಕಟ್ಟುನಿಟ್ಟಿನ ರಾಜಮನೆತನದ ಸಂಪ್ರದಾಯಗಳಿಗೆ ಹೆಸರುವಾಸಿ. ಆಟಗಾರರು ಕಡ್ಡಾಯವಾಗಿ ಬಿಳಿ ಬಣ್ಣದ ಉಡುಪನ್ನೇ ಧರಿಸಬೇಕು ಎಂಬ ನಿಯಮದಿಂದ ಹಿಡಿದು, ಗ್ಯಾಲರಿಯಲ್ಲಿ ರಾಜಮನೆತನದ ಗಣ್ಯರ ಉಪಸ್ಥಿತಿಯವರೆಗೆ ಇಲ್ಲಿನ ಪ್ರತಿಯೊಂದು ಸಂಗತಿಯೂ ಇತಿಹಾಸದ ಪುಟಗಳಂತೆ ಭಾಸವಾಗುತ್ತದೆ. ಆದರೆ, ಈ ಐತಿಹಾಸಿಕ ಕ್ರೀಡಾಕೂಟದಲ್ಲಿ ಭಾರತದ ಹೆಜ್ಜೆಯ ಗುರುತೂ ಇದೆ ಎಂಬುದು ಎಷ್ಟು ಜನರಿಗೆ ಗೊತ್ತು?

ಹೌದು, ನೋವಾಕ್ ಜೊಕೊವಿಚ್, ಯಾನಿಕ್ ಸಿನ್ನರ್, ಕಾರ್ಲೋಸ್ ಅಲ್ಕರಾಝ್ ಅವರಂತಹ ಆಟಗಾರರು ಪಂದ್ಯದ ಮಧ್ಯೆ ಬೆವರು ಒರೆಸಿಕೊಳ್ಳಲು ಬಳಸುವ ಆ ಐಕಾನಿಕ್ ಹಸಿರು ಮತ್ತು ನೇರಳೆ ಬಣ್ಣದ ವಿಂಬಲ್ಡನ್ ಟವೆಲ್‌ಗಳು ಸಂಪೂರ್ಣವಾಗಿ ತಯಾರಾಗುವುದು ಭಾರತದ ಗುಜರಾತ್‌ನ ವಾಪಿ ಎಂಬ ನಗರದಲ್ಲಿ!

ಮ್ಯಾಂಚೆಸ್ಟರ್‌ನಿಂದ ಗುಜರಾತ್‌ಗೆ ಬೆಳೆದ ಇತಿಹಾಸ!

ಬ್ರಿಟನ್‌ನ ಐಷಾರಾಮಿ ಟೆಕ್ಸ್‌ಟೈಲ್ ಬ್ರಾಂಡ್ ಆದ ‘ಕ್ರಿಸ್ಟಿ’ 1987 ರಿಂದ ವಿಂಬಲ್ಡನ್ ಟೂರ್ನಿಗೆ ಅಧಿಕೃತ ಟವೆಲ್ ಪೂರೈಕೆದಾರರು. ಆದರೆ, 2006 ರಲ್ಲಿ ಭಾರತದ ಜವಳಿ ದೈತ್ಯ ‘ವೆಲ್ಸ್‌ಪನ್ ಲಿವಿಂಗ್ ಲಿಮಿಟೆಡ್’ ಸಂಸ್ಥೆಯು ಈ ಕ್ರಿಸ್ಟಿ ಬ್ರಾಂಡ್ ಅನ್ನು ಖರೀದಿಸಿತು.

ತದನಂತರ, 2010 ರಲ್ಲಿ ಟವೆಲ್ ಉತ್ಪಾದನಾ ಘಟಕವನ್ನು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಿಂದ ಗುಜರಾತ್‌ನ ವಾಪಿ ಮತ್ತು ಅಂಜಾರ್‌ಗೆ ಸಂಪೂರ್ಣವಾಗಿ ಸ್ಥಳಾಂತರಿಸಲಾಯಿತು. ಅಂದಿನಿಂದ ಇಂದಿನವರೆಗೆ, ವಿಂಬಲ್ಡನ್‌ನ ಪ್ರತಿಯೊಂದು ಅಧಿಕೃತ ಟವೆಲ್ ಕೂಡ ಭಾರತದಲ್ಲೇ ನೇಯಲಾಗುತ್ತಿದೆ.

ವಿನ್ಯಾಸ ಬ್ರಿಟನ್‌ನದ್ದು, ತಯಾರಿಕೆ ಭಾರತದ್ದು!

ಈ ಟವೆಲ್‌ಗಳ ವಿನ್ಯಾಸದ ಪ್ರಕ್ರಿಯೆಯು ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿರುವ ಕ್ರಿಸ್ಟಿ ಸ್ಟುಡಿಯೋದಲ್ಲಿ ನಡೆಯುತ್ತದೆ. ಆದರೆ ಅಲ್ಲಿಂದ ಮುಂದೆ ಹತ್ತಿ ಸಂಗ್ರಹಣೆ, ನೂಲು ತಯಾರಿಕೆ, ಅತ್ಯಾಧುನಿಕ ತಂತ್ರಜ್ಞಾನದ ನೇಯ್ಗೆ ಮತ್ತು ಅಂತಿಮ ಪ್ಯಾಕಿಂಗ್‌ವರೆಗೆ ಎಲ್ಲವೂ ಗುಜರಾತ್‌ನಲ್ಲೇ ನಡೆಯುತ್ತದೆ.

ಈ ಟವೆಲ್‌ಗಳನ್ನು ತಯಾರಿಸಲು ‘ಹೈಗ್ರೋ ಕಾಟನ್’ ಎಂಬ ವಿಶೇಷ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದು ಟವೆಲ್‌ಗೆ ಗರಿಷ್ಠ ಮೃದುತ್ವ ಮತ್ತು ನೀರನ್ನು ಹೀರಿಕೊಳ್ಳುವ ಅದ್ಭುತ ಸಾಮರ್ಥ್ಯವನ್ನು ನೀಡುತ್ತದೆ. ಟೂರ್ನಿ ಆರಂಭವಾಗುವ 18 ತಿಂಗಳು ಮುಂಚಿತವಾಗಿಯೇ ಇದರ ಯೋಜನೆ ಮತ್ತು ಸಿದ್ಧತೆಗಳು ಭಾರತದಲ್ಲಿ ಆರಂಭವಾಗುತ್ತವೆ.

ಆಟಗಾರರ ನೆನಪಿನ ಕಾಣಿಕೆ:

ವಿಂಬಲ್ಡನ್ ಟವೆಲ್‌ಗಳು ಕೇವಲ ಬಳಸುವ ವಸ್ತುವಲ್ಲ, ಅವು ಜಾಗತಿಕ ಮಟ್ಟದ ‘ವಿಶೇಷ ಸಂಗ್ರಹ’ ವಸ್ತುವಾಗಿ ಮಾರ್ಪಟ್ಟಿದೆ. ಪಂದ್ಯ ಮುಗಿದ ನಂತರ ಆಟಗಾರರು ಈ ಟವೆಲ್‌ಗಳನ್ನು ತಮ್ಮ ಕಿಟ್ ಬ್ಯಾಗ್‌ನಲ್ಲಿ ಇಟ್ಟುಕೊಂಡು ಮನೆಗೆ ಕೊಂಡೊಯ್ಯುವುದು ಒಂದು ಸಂಪ್ರದಾಯವಾಗಿ ಬೆಳೆದಿದೆ. ಇದೇ ಕಾರಣಕ್ಕೆ ಟೂರ್ನಿಯ ಅವಧಿಯಲ್ಲಿ ಪ್ರತಿದಿನ ಸುಮಾರು ಟವೆಲ್‌ಗಳು ಕೋರ್ಟ್‌ನಿಂದ ಮಾಯವಾಗುತ್ತವೆ.

“ನಾನು ವಿಂಬಲ್ಡನ್‌ನಿಂದ ಈ ಟವೆಲ್‌ಗಳನ್ನು ಮನೆಗೆ ಕೊಂಡೊಯ್ಯಲೆಂದೇ ನನ್ನ ಬ್ಯಾಗ್‌ನಲ್ಲಿ ಹೆಚ್ಚುವರಿ ಜಾಗವನ್ನು ಇಟ್ಟುಕೊಂಡು ಬರುತ್ತೇನೆ. ನನ್ನ ಸ್ನೇಹಿತರು ಮತ್ತು ಕುಟುಂಬದವರಿಗೆ ಇದು ಅತ್ಯುತ್ತಮ ಉಡುಗೊರೆ” ಎಂದು ಈ ಹಿಂದೊಮ್ಮೆ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಚ್ ಹೇಳಿದ್ದರು. ಈ ಹೇಳಿಕೆಯಲ್ಲೇ ಭಾರತದಲ್ಲಿ ತಯಾರಾರುವ ಈ ಟವೆಲ್​ನ ಗುಣಮಟ್ಟ ಮತ್ತು ಮಹತ್ವ ಏನೆಂಬುದು ತಿಳಿಯಬಹುದು.

ಒಟ್ಟಾರೆಯಾಗಿ, ವಿಂಬಲ್ಡನ್‌ನ ಹಸಿರು ಹುಲ್ಲಿನ ಕೋರ್ಟ್‌ನಲ್ಲಿ ಜಗತ್ತಿನ ಶ್ರೇಷ್ಠ ಟೆನಿಸ್ ತಾರೆಯರು ಜಿದ್ದಾಜಿದ್ದಿನ ಪಂದ್ಯ ಆಡುವಾಗ, ಅವರ ಬೆವರಿನ ಹನಿಗಳನ್ನು ಒರೆಸುವ ಈ ಟವೆಲ್‌ಗಳು ಕೇವಲ ಒಂದು ಜವಳಿ ಉತ್ಪನ್ನವಲ್ಲ. ಅದು ಭಾರತದ ನುರಿತ ನೇಕಾರರ ಶ್ರಮ, ಗುಜರಾತ್‌ನ ಕೈಗಾರಿಕಾ ಕೌಶಲ್ಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಉದ್ಯಮ ಸಾಧಿಸಿದ ಅಪ್ರತಿಮ ಯಶಸ್ಸಿನ ಸಂಕೇತ.

ಇದನ್ನೂ ಓದಿ: ಒಂದೇ ಒಂದು ಗೋಲು… ಎಲ್ಲಾ ತಂಡಗಳಿಗೆ ಪೇನ್ ನೀಡಿದ ಸ್ಪೇನ್!

ಲಂಡನ್‌ನ ಪ್ರತಿಷ್ಠಿತ ಕ್ರೀಡಾಂಗಣದಲ್ಲಿ ಪ್ರತಿಬಾರಿಯೂ ಆಟಗಾರರು ಈ ಟವೆಲ್ ಬಳಸುವಾಗ, ವಾಪಿ ನಗರದ ಮಣ್ಣಿನ ಹೆಗ್ಗುರುತು ಅಲ್ಲಿ ರಾರಾಜಿಸುತ್ತಿರುತ್ತದೆ. ಇದು ಕೇವಲ ಬ್ರಾಂಡ್ ಒಂದರ ಬೆಳವಣಿಗೆಯಲ್ಲ, ಬದಲಿಗೆ ಜಾಗತಿಕ ಗುಣಮಟ್ಟಕ್ಕೆ ಭಾರತವೇ ಮುಂಚೂಣಿ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ!

Source link

Leave a Reply

Your email address will not be published. Required fields are marked *