Headlines

ವಿಕ್ಟೋರಿಯಾ ಆಸ್ಪತ್ರೆ ಮೇಲೆ ಲೋಕಾ ದಿಢೀರ್ ದಾಳಿ! ಐಸಿಯು ಅವ್ಯವಸ್ಥೆ ಬಯಲು

ವಿಕ್ಟೋರಿಯಾ ಆಸ್ಪತ್ರೆ ಮೇಲೆ ಲೋಕಾ ದಿಢೀರ್ ದಾಳಿ! ಐಸಿಯು ಅವ್ಯವಸ್ಥೆ ಬಯಲು

ಬೆಂಗಳೂರು, ಮಾರ್ಚ್​ 28: ಕರ್ನಾಟಕ ಲೋಕಾಯುಕ್ತ ತಂಡದ ಏಕಾಏಕಿ ಭೇಟಿ ವೇಳೆ ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆಯ (ವಿಕ್ಟೋರಿಯಾ ಆಸ್ಪತ್ರೆ) ಟ್ರಾಮಾ ಕೇರ್ ಸೆಂಟರ್‌ನಲ್ಲಿ ಗಂಭೀರ ಅವ್ಯವಸ್ಥೆಗಳು ಬೆಳಕಿಗೆ ಬಂದಿವೆ. ಐಸಿಯುನಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿದ್ದು, ಖಾಲಿ ಹಾಸಿಗೆಗಳಿದ್ದರೂ ತುರ್ತು ರೋಗಿಗೆ ದಾಖಲಾತಿ ನಿರಾಕರಿಸಿರುವುದು ಗಮನಕ್ಕೆ ಬಂದಿದೆ.

ಹಾಸಿಗೆಗಳಿದ್ದರೂ ರೋಗಿಗಳಿಗೆ ದಾಖಲಾತಿ ಇಲ್ಲ!

ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ , ವೆಂಟಿಲೇಟರ್ ದೋಷದಿಂದ ಹಾಸಿಗೆಗಳು ಬಳಸಿಲ್ಲ ಎಂದು ಹೇಳಿರುವುದು ಆಸ್ಪತ್ರೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದಿದ್ದಾರೆ. ಪ್ರಕರಣದ ವರದಿಯನ್ನು ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಕಳುಹಿಸಲು ಸೂಚಿಸಲಾಗಿದ್ದು, ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಲಾಗಿದೆ.

ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲು ಒತ್ತಾಯ

ಆಸ್ಪತ್ರೆ ಆವರಣದಲ್ಲಿ ಖಾಸಗಿ ಆಂಬ್ಯುಲೆನ್ಸ್ ಚಾಲಕರು ಮತ್ತು ಮಧ್ಯವರ್ತಿಗಳು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಅವರು ವೈದ್ಯರನ್ನು ಸಂಪರ್ಕಿಸಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲು ಒತ್ತಾಯಿಸುತ್ತಿದ್ದರೆಂಬ ಆರೋಪವೂ ಕೇಳಿಬಂದಿದೆ. ಕೆಲವು ಸಿಬ್ಬಂದಿ ಖಾಸಗಿ ಆಂಬ್ಯುಲೆನ್ಸ್ ಬಳಸುವಂತೆ ರೋಗಿಗಳ ಬಂಧುಗಳ ಮೇಲೆ ಒತ್ತಡ ಹೇರಿರುವುದು ತಿಳಿದುಬಂದಿದೆ.

ಈ ಹಿನ್ನೆಲೆ, ಖಾಸಗಿ ಆಂಬ್ಯುಲೆನ್ಸ್ ಸೇವೆಯನ್ನು ನಿಯಂತ್ರಿಸಲು ಪ್ರೀಪೇಯ್ಡ್ ವ್ಯವಸ್ಥೆ ಜಾರಿಗೆ ತರಬೇಕೆಂದು ಲೋಕಾಯುಕ್ತ ಸೂಚಿಸಿದೆ. ಈ ಬಗ್ಗೆ ಕ್ರಮ ಕೈಗೊಂಡಿರುವ ವಿವರಗಳನ್ನು ನೀಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

ಅಕ್ರಮ ಚಟುವಟಿಕೆಗಳಿಗೆ ಬ್ರೇಕ್

ಲೋಕಾಯುಕ್ತ ಮುಂದೆ ಟ್ರಾಮಾ ಕೇರ್ ಸೆಂಟರ್‌ನ ಸಮಸ್ಯೆಗಳ ಕುರಿತು ಡಾ. ಅಸೀಮಾ ಅವರು ಮಾಹಿತಿ ನೀಡಿದ್ದು, ಹಾಸಿಗೆಗಳ ಕೊರತೆಯಿಂದ ಖಾಸಗಿ ಆಂಬ್ಯುಲೆನ್ಸ್ ಚಾಲಕರು ಹಾಗೂ ಮಧ್ಯವರ್ತಿಗಳು ರೋಗಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರು. ಅವರಿಂದ ಉಂಟಾಗುವ ಅಡಚಣೆಗಳನ್ನು ನಿಯಂತ್ರಣಕ್ಕೆ ಬಾರದ ಮಟ್ಟಕ್ಕೆ ತಲುಪಿದ್ದು, ಕೆಲವೊಮ್ಮೆ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ಮೇಲೆ ದಾಳಿ ನಡೆದ ಘಟನೆಗಳೂ ನಡೆದಿವೆ ಎಂದು ತಿಳಿಸಿದರು.

ಇದನ್ನೂ ಓದಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹುಟ್ಟಿದ್ದೇ ಒಂದು ಭೀಕರ ಅಗ್ನಿದುರಂತದಿಂದ! ಇದರ ಹಿಂದಿರುವ ಅರಮನೆಯ ಆ ರಹಸ್ಯ ನಿಮಗೆ ಗೊತ್ತೇ?

ಆದರೆ ಈ ಬಗ್ಗೆ ಯಾವುದೇ ನಿರ್ದಿಷ್ಟ ದೂರು ದಾಖಲಾಗಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ದಕ್ಷಿಣ ವಿಭಾಗದ ಡಿಸಿಪಿ ಲೋಕಾಯುಕ್ತರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆ ಆಸ್ಪತ್ರೆ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಬಲಪಡಿಸಿ, ಅಕ್ರಮ ಚಟುವಟಿಕೆ ನಡೆಸುವವರನ್ನು ಗುರುತಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *