ಹನೂರು, ಆ.19: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಕುಮಾರ್ ಅವರ ಪುತ್ರಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ತಮಿಳುನಾಡಿನ ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ಹಾಗೂ ಪ್ರಸಿದ್ಧ ನಟ ವಿಜಯ್ ಅವರನ್ನು ಉದ್ದೇಶಿಸಿ ಬಾಲಕಿ ತಮಿಳಿನಲ್ಲಿ ಭಾವನಾತ್ಮಕವಾಗಿ ವಿನಂತಿ ಮಾಡಿಕೊಂಡಿದ್ದಾಳೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತೋಮಿಯಾರ್ ಪಾಳ್ಯ ಗ್ರಾಮದ ಮೃತ ಕುಮಾರ್ ಅವರ ಪುತ್ರಿ ವಿಡಿಯೋ ಮಾಡಿದ್ದು, “ವಿಜಯ್ ಮಾಮ, ನಮ್ಮ ಮನೆಗೆ ಬನ್ನಿ” ಎಂದು ತಮಿಳಿನಲ್ಲಿ ಮನವಿ ಮಾಡಿದ್ದಾಳೆ. “ತಂದೆಯನ್ನು ಕಳೆದುಕೊಂಡು ನಮ್ಮ ಕುಟುಂಬ ತೀವ್ರ ಸಂಕಷ್ಟದಲ್ಲಿದೆ. ಒಮ್ಮೆ ನಮ್ಮ ಮನೆಗೆ ಭೇಟಿ ನೀಡಿ, ನಮಗೆ ನೆರವು ನೀಡಿ” ಎಂದು ಕಣ್ಣೀರಿಡುತ್ತಾ ಬಾಲಕಿ ಕೇಳಿಕೊಂಡಿದ್ದಾಳೆ. ಬಾಲಕಿಯ ಈ ಕಣ್ಣೀರಿನ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ