ದಳಪತಿ ವಿಜಯ್, ಎನ್ಟಿಆರ್Image Credit source: AI/Mediaforge/TV9
ಚೆನ್ನೈ, ಮೇ 4: ದಕ್ಷಿಣ ಭಾರತದ ರಾಜಕಾರಣದಲ್ಲಿ ಸಿನಿಮಾ ಮತ್ತು ರಾಜಕೀಯಕ್ಕೆ ಅವಿನಾಭಾವ ಸಂಬಂಧವಿದೆ. ಎಂಜಿಆರ್, ಕರುಣಾನಿಧಿ, ಎನ್ಟಿಆರ್, ಚಿರಂಜೀವಿ, ಪವನ್ ಕಲ್ಯಾಣ್, ವಿಜಯಕಾಂತ್, ಹೀಗೆ ಪಟ್ಟಿ ಉದ್ದವಿದೆ. ಈಗ ದಳಪತಿ ವಿಜಯ್ ಹೊಸ ರಾಜಕೀಯ ಸ್ಟಾರ್ ಆಗಿ ಮೇಳೈಸಿದ್ದಾರೆ. ಎನ್.ಟಿ. ರಾಮರಾವ್ ಅವರು 1980ರ ದಶಕದಲ್ಲಿ ಆಂಧ್ರಪ್ರದೇಶದಲ್ಲಿ ಸೃಷ್ಟಿಸಿದ ಕ್ರಾಂತಿ ಇಂದಿಗೂ ಒಂದು ಮಾದರಿ. ಈಗ ತಮಿಳುನಾಡಿನಲ್ಲಿ (Tamil Nadu Assembly Elections) ದಳಪತಿ ವಿಜಯ್ ಅವರು ಅದೇ ರೀತಿಯ ಪರ್ವವನ್ನು ಆರಂಭಿಸಲು ಹೊರಟಿದ್ದಾರೆ. ಆದರೆ ಇವರಿಬ್ಬರ ಹಾದಿ ಮತ್ತು ಅಪ್ರೋಚ್ಗಳಲ್ಲಿ ಕೆಲವು ಕುತೂಹಲಕಾರಿ ಸಾಮ್ಯತೆ ಹಾಗೂ ವ್ಯತ್ಯಾಸಗಳಿವೆ.
ಪ್ರಾದೇಶಿಕ ಅಸ್ಮಿತೆ ಮತ್ತು ‘ಆತ್ಮಗೌರವ’
1982ರಲ್ಲಿ ಎನ್ಟಿಆರ್ ಅವರು ತೆಲುಗು ದೇಶಂ ಪಾರ್ಟಿ (TDP) ಸ್ಥಾಪಿಸಿದಾಗ, ಅವರು ಪ್ರಮುಖವಾಗಿ ಮುನ್ನೆಲೆಗೆ ತಂದಿದ್ದು ‘ತೆಲುಗು ಆತ್ಮಗೌರವ’ (Telugu Vari Atma Gauravam). ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ನಾಯಕರು ಆಂಧ್ರದ ಮುಖ್ಯಮಂತ್ರಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಎನ್ಟಿಆರ್ ವಿರೋಧಿಸಿದ್ದರು.
ವಿಜಯ್ ಅವರು ತಮ್ಮ ‘ತಮಿಳಗ ವೆಟ್ರಿ ಕಳಗಂ’ (TVK) ಮೂಲಕ ‘ತಮಿಳು ಅಸ್ಮಿತೆ’ ಮತ್ತು ಭಾಷಾ ಪ್ರೇಮವನ್ನು ಎತ್ತಿ ಹಿಡಿಯುತ್ತಿದ್ದಾರೆ. ದ್ರಾವಿಡ ಸಿದ್ಧಾಂತ ಮತ್ತು ತಮಿಳು ರಾಷ್ಟ್ರೀಯತೆಯನ್ನು ಸಮನ್ವಯಗೊಳಿಸುವ ಪ್ರಯತ್ನ ಅವರಲ್ಲಿ ಕಾಣುತ್ತಿದೆ.
ಇದನ್ನೂ ಓದಿ: ದಳಪತಿ ಕಿಂಗ್ ಮೇಕರ್ ಅಲ್ಲ, ಕಿಂಗ್; ತಮಿಳುನಾಡಿಗೆ ವಿಜಯ್ ಮುಂದಿನ ಸಿಎಂ?
ಔಟ್ಸೈಡರ್ ವರ್ಸಸ್ ಎಸ್ಟಾಬ್ಲಿಷ್ಮೆಂಟ್
ಎನ್ಟಿಆರ್ ಮತ್ತು ವಿಜಯ್ ಇಬ್ಬರೂ ರಾಜಕೀಯಕ್ಕೆ ಬರುವಾಗ ಆಯಾ ರಾಜ್ಯಗಳಲ್ಲಿ ಪ್ರಬಲವಾದ ರಾಜಕೀಯ ಶಕ್ತಿಗಳಿದ್ದವು. ಆಂಧ್ರದಲ್ಲಿ ಕಾಂಗ್ರೆಸ್ ಸುಭದ್ರವಾಗಿತ್ತು, ಈಗ ತಮಿಳುನಾಡಿನಲ್ಲಿ ಡಿಎಂಕೆಯಂತಹ ಬಲಿಷ್ಠ ಕುಟುಂಬ ರಾಜಕಾರಣವಿದೆ. ಇಬ್ಬರೂ ಕೂಡ “ವ್ಯವಸ್ಥೆಯ ಹೊರಗಿನವರು” (Outsiders) ಎಂಬ ಹಣೆಪಟ್ಟಿಯೊಂದಿಗೆ ಬದಲಾವಣೆಯ ಭರವಸೆ ನೀಡಿದವರು.
ಸಂಘಟನಾ ಶಕ್ತಿ: ಅಭಿಮಾನಿ ಬಳಗವೇ ಸೈನ್ಯ
ಸಿನಿಮಾ ಮೂಲಕ ಗಳಿಸಿದ್ದ ‘ದೈವತ್ವ’ದ ಮತ್ತು ಆಧ್ಯಾತ್ಮದ ಇಮೇಜ್ ಎನ್ಟಿಆರ್ಗೆ ದೊಡ್ಡ ಬಲವಾಗಿತ್ತು. ಅವರ ಅಭಿಮಾನಿ ಸಂಘಗಳು ರಾತ್ರೋರಾತ್ರಿ ರಾಜಕೀಯ ಕಾರ್ಯಕರ್ತರಾಗಿ ಬದಲಾದವು.
ವಿಜಯ್ ಅವರಿಗೆ ತಮಿಳುನಾಡಿನ ಪ್ರತಿ ಹಳ್ಳಿಯಲ್ಲೂ ಇರುವ ‘ವಿಜಯ್ ಮಕ್ಕಳ್ ಇಯಕ್ಕಂ’ (VMI) ಎಂಬ ಸಂಘಟನೆಯೇ ದೊಡ್ಡ ಶಕ್ತಿ. ಇದು ಕೇವಲ ಅಭಿಮಾನಿ ಸಂಘವಾಗಿರದೆ, ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ರಾಜಕೀಯಕ್ಕೆ ಅಡಿಪಾಯ ಸಿದ್ಧಪಡಿಸಿದೆ.
ಎರಡು ಭಿನ್ನ ಕಾರ್ಯತಂತ್ರಗಳು
ಎನ್ಟಿಆರ್ ಪಕ್ಷ ಸ್ಥಾಪಿಸಿದ ಕೇವಲ 9 ತಿಂಗಳಲ್ಲಿ ಅಧಿಕಾರ ಹಿಡಿದರು. ಅದು ಚಂಡಮಾರುತದಂತಿದ್ದ ವೇಗ. ಅವರು ಇಡೀ ರಾಜ್ಯವನ್ನು ‘ಚೈತನ್ಯ ರಥ’ದ ಮೂಲಕ ಸುತ್ತಿದ್ದರು.
ಇದಕ್ಕೆ ತದ್ವಿರುದ್ಧವಾಗಿ ವಿಜಯ್ ಅವರು ಬಹಳ ನಿಧಾನವಾಗಿ ಮತ್ತು ಯೋಜಿತವಾಗಿ ಹೆಜ್ಜೆ ಇಟ್ಟಿದ್ದಾರೆ. ಸುಮಾರು 5-6 ವರ್ಷಗಳಿಂದ ಸಿನಿಮಾ ಮೂಲಕ ರಾಜಕೀಯ ಸಂದೇಶಗಳನ್ನು ನೀಡುತ್ತಾ, ಈಗ ಪೂರ್ಣಪ್ರಮಾಣದಲ್ಲಿ ಧುಮುಕಿದ್ದಾರೆ. ಇದು ದೀರ್ಘಾವಧಿಯ ಗೇಮ್ ಪ್ಲಾನ್ ಎಂಬುದು ಹಲವರ ವಿಶ್ಲೇಷಣೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರ ಸ್ಥಾಪನೆಯತ್ತ ಬಿಜೆಪಿ; ನಿಚ್ಚಳ ಬಹುಮತ ಬಹುತೇಕ ನಿಶ್ಚಿತ
ವಿಜಯ್ ಎದುರಿರುವ ಸವಾಲುಗಳು
ಎನ್ಟಿಆರ್ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಿರಲಿಲ್ಲ, ಕೇವಲ ಭಾವನಾತ್ಮಕ ಅಲೆ ಕೆಲಸ ಮಾಡುತ್ತಿತ್ತು. ಈಟಿವಿ ಮಾಧ್ಯಮದ ಬೆಂಬಲ ಮಾತ್ರವೇ ಎನ್ಟಿಆರ್ಗೆ ಇದ್ದದ್ದು. ಎನ್ಟಿಆರ್ ಅವರ ರಾಜಕೀಯ ಹೋರಾಟವೆಲ್ಲವೂ ಅವಿರತವಾಗಿ ಈ ಮಾಧ್ಯಮದಲ್ಲಿ ಪ್ರಚಾರ ಪಡೆಯುತ್ತಿತ್ತು. ಆದರೆ, ವಿಜಯ್ ಅವರಿಗೆ ಮೈನ್ಸ್ಟ್ರೀಮ್ ಮಾಧ್ಯಮದ ನಿರಂತರ ಬೆಂಬಲವೇನೂ ಇಲ್ಲ. ಅವರ ಕೈಹಿಡಿದಿದ್ದು ಸಾಮಾಜಿಕ ಜಾಲತಾಣಗಳು.
ಒಟ್ಟಾರೆಯಾಗಿ ಹೇಳುವುದಾದರೆ, ಎನ್ಟಿಆರ್ ಅವರದ್ದು ‘ಅಸ್ಮಿತೆ’ ಮತ್ತು ‘ವೇಗ’ದ ರಾಜಕಾರಣವಾಗಿದ್ದರೆ, ವಿಜಯ್ ಅವರದ್ದು ‘ಸಂಘಟನೆ’ ಮತ್ತು ‘ಯುವಶಕ್ತಿ’ಯನ್ನು ನಂಬಿದ ರಾಜಕಾರಣ. ಆಂಧ್ರದಲ್ಲಿ ಜನರು ಎನ್ಟಿಆರ್ ಅವರನ್ನು ಭರ್ಜರಿಯಾಗಿ ಅಪ್ಪಿಕೊಂಡಂತೆ, ತಮಿಳುನಾಡಿನ ಮತದಾರರು ವಿಜಯ್ ಅವರನ್ನು ಭಾರೀ ಬಹುಮತದಿಂದ ಗೆಲ್ಲಿಸಿಲ್ಲ. ಆದರೆ, ಅಧಿಕಾರದ ಗದ್ದುಗೆ ಏರುವಷ್ಟು ಬೆಂಬಲ ಕೊಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ