Headlines

ವಿಟಮಿನ್ ಡಿ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ – Kannada News | How to Take Vitamin D Supplements

ಇತ್ತೀಚಿನ ದಿನಗಳಲ್ಲಿ, ವಿಟಮಿನ್ ಡಿ (Vitamin D) ಸಪ್ಲಿಮೆಂಟ್ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಬದಲಾಗುತ್ತಿರುವ ಜೀವನಶೈಲಿ, ಬಿಸಿಲಿಗೆ ಹೋಗದಿರುವುದು ಮತ್ತು ಮನೆ ಅಥವಾ ಕಚೇರಿಯಲ್ಲಿ ದೀರ್ಘಕಾಲ ಇರುವುದೇ ಈ ವಿಟಮಿನ್ ಕೊರತೆಗೆ ಪ್ರಮುಖ ಕಾರಣಗಳಾಗಿವೆ. ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ, ಇದು ಮೂಳೆ ಮತ್ತು ಹಲ್ಲುಗಳನ್ನು ಬಲವಾಗಿಡುತ್ತದೆ. ಅಷ್ಟೇಅಲ್ಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಇದರ ಕೊರತೆಯು ಮೂಳೆ ನೋವು, ಆಯಾಸ, ದೌರ್ಬಲ್ಯ, ಆಗಾಗ ಅನಾರೋಗ್ಯ ಮತ್ತು ಮನಸ್ಥಿತಿ ಬದಲಾವಣೆಗಳಂತಹ ಲಕ್ಷಣಗಳಿಗೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ, ವಿಟಮಿನ್ ಡಿ ಪೂರಕಗಳನ್ನು ಅಂದರೆ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಾರೆ. ಆದರೆ ಅದರ ಮೊದಲು ಈ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕಾಗುತ್ತದೆ. ಆಗ ಮಾತ್ರ ದೇಹದ ಅಗತ್ಯಗಳಿಗೆ ಅನುಗುಣವಾಗಿ ಸರಿಯಾದ ರೀತಿಯಲ್ಲಿ ಸೇವಿಸಬಹುದು. ಇಲ್ಲವಾದಲ್ಲಿ ಇದರಿಂದ ಪೂರ್ಣ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾದರೆ ಇದನ್ನು ಯಾವ ರೀತಿ ಮತ್ತು ಹೇಗೆ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ವಿಟಮಿನ್ ಡಿ ಸಪ್ಲಿಮೆಂಟ್ ತೆಗೆದುಕೊಳ್ಳಲು ಹಾಲು ಅಥವಾ ನೀರು ಯಾವುದು ಉತ್ತಮ?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥರಾದ ಡಾ. ಎಲ್.ಎಚ್. ​​ಘೋಟೇಕರ್ ಹೇಳುವ ಪ್ರಕಾರ, ಹಾಲಿನಲ್ಲಿ ಕೊಬ್ಬು ಮತ್ತು ಕ್ಯಾಲ್ಸಿಯಂ ಎರಡನ್ನೂ ಹೊಂದಿರುವುದರಿಂದ, ಅನೇಕರು ಇದನ್ನು ಹಾಲಿನೊಂದಿಗೆ ತೆಗೆದುಕೊಳ್ಳಲು ಬಯಸುತ್ತಾರೆ. ಆದರೆ ಕೆಲವರು ಹಾಲು ಕುಡಿಯಲು ಇಷ್ಟಪಡುವುದಿಲ್ಲ ಅಥವಾ ಅವರಿಗೆ ಲ್ಯಾಕ್ಟೋಸ್ ಅಲರ್ಜಿ ಇದ್ದಲ್ಲಿ ಅವರು ನೀರಿನೊಂದಿಗೆ ತೆಗೆದುಕೊಳ್ಳಬಹುದು, ಆದರೆ ಊಟದಲ್ಲಿ ಸ್ವಲ್ಪ ಪ್ರಮಾಣದ ಕೊಬ್ಬಿನಾಂಶ ಹೆಚ್ಚಿರುವ ಆಹಾರ ಸೇವನೆ ಮಾಡುವುದನ್ನು ಮರೆಯಬಾರದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಪೂರಕವನ್ನು ನಿಯಮಿತವಾಗಿ ಮತ್ತು ವೈದ್ಯರ ಸಲಹೆಯ ಪ್ರಕಾರ ಮಾತ್ರ ತೆಗೆದುಕೊಳ್ಳಬೇಕು, ಇದರಿಂದ ಮಾತ್ರ ದೇಹಕ್ಕೆ ಸಂಪೂರ್ಣ ಪ್ರಯೋಜನ ಸಿಗುತ್ತದೆ.

ಇದನ್ನೂ ಓದಿ: 30ರಲ್ಲಿ ಮೂಳೆಗಳು 50 ವರ್ಷದವರಂತಾಗಬಹುದು; ವಿಟಮಿನ್ ಡಿ, ಕ್ಯಾಲ್ಸಿಯಂ ಒಟ್ಟಿಗೆ ಸಿಗದಿದ್ದರೆ ಏನಾಗುತ್ತೆ ನೋಡಿ

ವಿಟಮಿನ್ ಡಿ ಸಪ್ಲಿಮೆಂಟ್ ತೆಗೆದುಕೊಳ್ಳಲು ಸರಿಯಾದ ಸಮಯ?

ಸಾಮಾನ್ಯವಾಗಿ ಬೆಳಿಗ್ಗೆ ಅಥವಾ ಊಟದ ಸಮಯದಲ್ಲಿ ವಿಟಮಿನ್ ಡಿ ಸಪ್ಲಿಮೆಂಟ್ ತೆಗೆದುಕೊಳ್ಳುವುದು ಉತ್ತಮ. ಏಕೆಂದರೆ ಆ ಸಮಯದಲ್ಲಿ ಜೀರ್ಣಕ್ರಿಯೆ ಸಕ್ರಿಯವಾಗಿರುತ್ತದೆ ಜೊತೆಗೆ ಹೀರಿಕೊಳ್ಳುವಿಕೆ ಸರಿಯಾಗಿ ಆಗುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಇದನ್ನು ತೆಗೆದುಕೊಳ್ಳುವುದರಿಂದ ಕೆಲವರಿಗೆ ಅಸ್ವಸ್ಥತೆ ಉಂಟಾಗಬಹುದು. ಹಾಗಾಗಿ ಸ್ವಲ್ಪ ಜಾಗೃತೆ ವಹಿಸಿ. ಇದರ ಜೊತೆಗೆ 15- 20 ನಿಮಿಷಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಕೂಡ ಬಹಳ ಮುಖ್ಯ. ಆದರೆ ಯಾವುದೇ ರೀತಿಯ ಪರೀಕ್ಷೆ ಮಾಡದೆ ದೀರ್ಘಕಾಲದ ವರೆಗೆ ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳಬೇಡಿ. ಅವುಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಮಟ್ಟ ಹೆಚ್ಚಾಗಬಹುದು, ಇದು ಮೂತ್ರಪಿಂಡ ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *