ಗೃಹ ಸಚಿವ ಪ್ರಿಯಾಂಕ್ ಖರ್ಗೆImage Credit source: tv9 kannada
ಬೆಂಗಳೂರು, ಜೂನ್ 20: ಇತ್ತೀಚೆಗೆ ಟ್ರಾಫಿಕ್ಜಾಮ್ನಿಂದಾಗಿ ಜಸ್ಟ್ ಹತ್ತೇ ನಿಮಿಷ ಲೇಟ್ ಆಗಿದ್ದಕ್ಕೆ ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರಿಗೆ ನಿರಾಕರಿಸಲಾಗಿತ್ತು. ದೂರದ ಊರಿನಿಂದ ಬಂದಿದ್ದ ಅವರು ಕಣ್ಣೀರು ಹಾಕಿದ್ದರು. ಇನ್ನು ನಾಳೆ ರಾಜ್ಯದಲ್ಲಿ ನೀಟ್ ಮರು ಪರೀಕ್ಷೆ (NEET Re Exam) ನಡೆಯುತ್ತಿದ್ದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆ ಮೂಲಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸುಗಮ ಸಂಚಾರದ ಸಹಾಯಕ್ಕಾಗಿ ವಿದ್ಯಾರ್ಥಿಗಳು ಟ್ರಾಫಿಕ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 22943131, 22943030 ನಂಬರ್ ಸಂಪರ್ಕಿಸಬಹುದಾಗಿದೆ.
ಮುಖ್ಯಾಂಶಗಳು
- ರಾಜ್ಯದಲ್ಲಿ ನಾಳೆ ನೀಟ್ ಮರು ಪರೀಕ್ಷೆ
- ಪರೀಕ್ಷಾ ಕೇಂದ್ರಗಳಿಗೆ ತೆರಳಲಿರುವ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುವು
- ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಚೇರಿಯಿಂದ ಮಹತ್ವದ ನಿರ್ಧಾರ
ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುವು
ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ರದ್ದಾಗಿದ್ದ ನೀಟ್ ಪರೀಕ್ಷೆ, ನಾಳೆ ನಡೆಯಲಿದೆ. ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ದೇಶಾದ್ಯಂತ ಐನೂರಕ್ಕೂ ಹೆಚ್ಚು ನಗರಗಳಲ್ಲಿ ಮರು ಪರೀಕ್ಷೆ ನಡೆಯಲಿದ್ದು, ಈ ಬಾರಿ ಹಿಂದೆಂದೂ ಕಾಣದ ರೀತಿಯಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಇನ್ನು ವಿದ್ಯಾರ್ಥಿಗಳು ಸಂಚಾರದ ವಿಷಯದಲ್ಲಿ ಯಾವುದೇ ತೊಂದರೆ ಎದುರಾದಲ್ಲಿ ಟ್ರಾಫಿಕ್ ಕಂಟ್ರೋಲ್ ರೂಮ್ ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದಾಗಿದೆ.
ಪ್ರಿಯಾಂಕ್ ಖರ್ಗೆ ಟ್ವೀಟ್
ನಾಳೆ, ದಿನಾಂಕ 21.06.2026 ನೀಟ್ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದನ್ನು ಆದ್ಯತೆಯಾಗಿ ಪರಿಗಣಿಸಲಾಗಿದೆ.
ಸುಗಮ ಸಂಚಾರದ ಸಹಾಯಕ್ಕಾಗಿ ಟ್ರಾಫಿಕ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 22943131, 22943030 ಸಂಪರ್ಕಿಸಬಹುದಾಗಿದೆ.ಇದೇ ದಿನ ಬೆಂಗಳೂರು ನಗರದ ವಿವಿಧ… pic.twitter.com/Ma21UnxMJH
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 20, 2026
ಈ ಕುರಿತಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ. ಬೆಂಗಳೂರು ನಗರದಲ್ಲಿ ನಾಳೆ (ಜೂನ್ 21) ನೀಟ್ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ, ಪರೀಕ್ಷಾರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದನ್ನು ಸಂಚಾರಿ ಪೊಲೀಸರು ಪ್ರಮುಖ ಆದ್ಯತೆಯಾಗಿ ಪರಿಗಣಿಸಿದ್ದಾರೆ. ಇದೇ ದಿನ ನಗರದ ವಿವಿಧ ಭಾಗಗಳಲ್ಲಿ ವಿಶ್ವ ಯೋಗ ದಿನಾಚರಣೆ, ಮ್ಯಾರಥಾನ್ ಹಾಗೂ ರಾಜಕೀಯ ಪಕ್ಷವೊಂದರ ಬೃಹತ್ ಕಾರ್ಯಕ್ರಮಗಳು ಆಯೋಜನೆಗೊಂಡಿರುವುದರಿಂದ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನ ಸಂಚಾರದಲ್ಲಿ ಪ್ರಮುಖ ಮಾರ್ಪಾಡುಗಳನ್ನು ಮಾಡಲಾಗಿದೆ.
ಇದನ್ನೂ ಓದಿ: ಜಸ್ಟ್ ಹತ್ತೇ ನಿಮಿಷ ಲೇಟ್ ಆಗಿದ್ದಕ್ಕೆ ನೀಟ್ ಎಕ್ಸಾಂ ಬರೆಯಲು ನಿರಾಕರಣೆ: ಕಣ್ಣೀರಿಟ್ಟ ವಿದ್ಯಾರ್ಥಿನಿಯರು
ಹೀಗಾಗಿ, ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಂಚಾರ ವಿಭಾಗ ಪ್ರಕಟಿಸಿರುವ ಮಾರ್ಗಸೂಚಿ ಹಾಗೂ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಗೊಂದಲವಿಲ್ಲದೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪುವಂತೆ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕಿದೆ. ಒಂದು ವೇಳೆ ಪ್ರಯಾಣದ ಅವಧಿಯಲ್ಲಿ ಸಂಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಎದುರಾದಲ್ಲಿ, ತಕ್ಷಣವೇ ಸಹಾಯ ಪಡೆಯಲು ಟ್ರಾಫಿಕ್ ಕಂಟ್ರೋಲ್ ರೂಮ್ನ ದೂರವಾಣಿ ಸಂಖ್ಯೆಗಳಾದ 22943131 ಹಾಗೂ 22943030 ಅನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.