ಬೆಂಗಳೂರು, ಜೂನ್ 19: ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರಿ ಅಡ್ಡಮತದಾನದ ಪರಿಣಾಮ ಕೂದಲೆಳೆ ಅಂತರದಲ್ಲಿ ಮುಖಭಂಗ ತಪ್ಪಿಸಿಕೊಂಡಿರುವ ಕರ್ನಾಟಕ ಬಿಜೆಪಿ ಕ್ರಾಸ್ ವೋಟಿಂಗ್ ವಿಚಾರವಾಗಿ ಸತ್ಯಶೋಧನಾ ಸಮಿತಿ ರಚನೆ ಮಾಡಿದೆ. ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಎನ್.ಮಹೇಶ್, ಶಾಸಕ ಮಹೇಶ್ ಟೆಂಗಿನಕಾಯಿ ಒಳಗೊಂಡ ತ್ರಿಸದಸ್ಯ ಸಮಿತಿಗೆ ಜೂನ್ 25ರೊಳಗೆ ವರದಿ ನೀಡುವಂತೆ ಬಿ.ವೈ.ವಿಜಯೇಂದ್ರ ಸೂಚನೆ ನೀಡಿದ್ದಾರೆ.
ಭಗವಂತ್ ಖೂಬಾ ಪತ್ರ
ಬಿಜೆಪಿ ಶಾಸಕರಿಂದ ಅಡ್ಡಮತದಾನ ಹಿನ್ನೆಲೆ ರಾಜ್ಯ ಬಿಜೆಪಿ ಅದ್ಯಕ್ಷ ಬಿ.ವೈ.ವಿಜಯೇಂದ್ರಗೆ ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ ಪತ್ರ ಬರೆದಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ರಾಜಾರೋಷವಾಗಿ ಕೆಲಸ ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದರಿಂದಾಗಿಯೇ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ನಡೆದಿದೆ. ಎಷ್ಟೋ ಕಡೆ ಶಾಸಕರು ತಮ್ಮ ಬೆಂಬಲಿಗರಿಗೆ ಮುನ್ಸೂಚನೆ ನೀಡುತ್ತಿದ್ದಾರೆ ಕಾರ್ಯಕರ್ತರು ಸಂಘಟನೆಯಲ್ಲಿ ಕೆಲಸ ಮಾಡದೇ ದೂರ ಉಳಿಯುತ್ತಿದ್ದಾರೆ. ಹಣ ಕೊಟ್ಟು ಜನರನ್ನು ಕರೆತಂದು ಕಾರ್ಯಕರ್ತರು ಎಂದು ಬಿಂಬಿಸುವ ಕೆಲಸ ಆಗುತ್ತಿದ್ದರೂ ಇದ್ಯಾವುದನ್ನೂ ಪ್ರಶ್ನಿಸುತ್ತಿಲ್ಲ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. 2028ರಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಶಿಸ್ತು ಕ್ರಮ ಆಗಲೇಬೇಕು ಎಂದು ಗೌಪ್ಯ ಪತ್ರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಒತ್ತಾಯಿಸಿರುವ ಖೂಬಾ, ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರಿಗೂ ಈ ಸಂಬಂಧ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ಗೆ ಸೋಲು; ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
‘ಅಡ್ಡ ಮತದಾನದಿಂದ ಬೇಸರವಾಗಿದೆ’
ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಅಡ್ಡಮತದಾನದಿಂದ ನಮಗೂ ಬೇಸರ ಹಾಗೂ ನೋವಾಗಿದೆ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಅಡ್ಡಮತದಾನ ಆಗಬಾರದಿತ್ತು, ಆದರೆ ದುರಾದೃಷ್ಟವಶಾತ್ ಆಗಿದೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಈ ಬೆಳವಣಿಗೆಯಿಂದ ವಿಚಲಿತ ಆಗಿ ಓಡಿಹೋಗುವವನು ನಾನಲ್ಲ. ಇದನ್ನು ಅರಗಿಸಿಕೊಳ್ಳುವ ಶಕ್ತಿ ನನಗಿದೆ. ನಾನು ರಾಜ್ಯ ಬಿಜೆಪಿ ಅಧ್ಯಕ್ಷ, ಬಿ.ಎಸ್.ಯಡಿಯೂರಪ್ಪನವರ ಮಗ. ಅಡ್ಡಮತದಾನ ಬಗ್ಗೆ ಯಾರಿಗೆ ಹೇಳಬೇಕೋ ಹೇಳುತ್ತೇನೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 2:05 pm, Fri, 19 June 26