ಬಿಡುಗಡೆಗೂ ಮುನ್ನ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾ ಸಖತ್ ವಿವಾದ ಸೃಷ್ಟಿ ಮಾಡಿತ್ತು. ಈ ಸಿನಿಮಾದ ವಿವಾದವು ಹೈಕೋರ್ಟ್ ಮೆಟ್ಟಿಲೇರಿತ್ತು. ಆ ಕಾರಣದಿಂದ ಚಿತ್ರದ ಬಿಡುಗಡೆ ಸ್ವಲ್ಪ ತಡವಾಯಿತು. ಶುಕ್ರವಾರ (ಫೆಬ್ರವರಿ 27) ಸಂಜೆ ಕೆಲವೇ ಕೆಲವು ಕಡೆಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಾಯಿತು. ಶನಿವಾರ (ಫೆ.28) ಎಂದಿನಂತೆ ಎಲ್ಲ ಕಡೆಗಳಲ್ಲಿ ರಿಲೀಸ್ ಆಯಿತು. ಈ ಎರಡೂ ದಿನಗಳು ಸೇರಿ ‘ದಿ ಕೇರಳ ಸ್ಟೋರಿ 2’ ಸಿನಿಮಾದ ಒಟ್ಟು ಕಲೆಕ್ಷನ್ (Box Office Collection) ಅಂದಾಜು 5.40 ಕೋಟಿ ರೂಪಾಯಿ ಆಗಿದೆ.
ಚಿತ್ರದ ಬಿಡುಗಡೆಗೆ ಕೋರ್ಟ್ ಅನುಮತಿ ತಡವಾಗಿ ಸಿಕ್ಕಿದ್ದರಿಂದ ಫೆ.27ರಂದು ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಮಾತ್ರ ರಿಲೀಸ್ ಆಯಿತು. Sacnilk ವರದಿ ಪ್ರಕಾರ ಅಂದು ಈ ಸಿನಿಮಾ ಗಳಿಸಿದ್ದು 75 ಲಕ್ಷ ರೂಪಾಯಿ ಮಾತ್ರ. ಎರಡನೇ ದಿನವಾದ ಶನಿವಾರ (ಫೆ.28) 4.65 ಕೋಟಿ ರೂಪಾಯಿ ಗಳಿಸಿದೆ. ಭಾನುವಾರ (ಮಾರ್ಚ್ 1) ಎಷ್ಟು ಕಲೆಕ್ಷನ್ ಆಗಲಿದೆ ಎಂಬ ಕೌತುಕ ಇದೆ.
2023ರಲ್ಲಿ ರಿಲೀಸ್ ಆಗಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾ ಮೊದಲ ದಿನವೇ 8.05 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ಚಿತ್ರದ ಒಟ್ಟು ಕಲೆಕ್ಷನ್ 242 ಕೋಟಿ ರೂಪಾಯಿ ಆಗಿತ್ತು. ಆ ಯಶಸ್ಸಿನ ಬಳಿಕ ‘ದಿ ಕೇರಳ ಸ್ಟೋರಿ 2’ ಸಿನಿಮಾ ಮಾಡಲಾಯಿತು. ಆದರೆ ಸೀಕ್ವೆಲ್ಗೆ ನಿರೀಕ್ಷಿತ ಪ್ರಮಾಣದಲ್ಲಿ ಓಪನಿಂಗ್ ಸಿಕ್ಕಿಲ್ಲ. ವಿವಾದಿಂದ ಸಾಕಷ್ಟು ಸುದ್ದಿ ಆಗಿದ್ದರೂ ಕೂಡ ಜನರು ಈ ಚಿತ್ರಕ್ಕೆ ಆಸಕ್ತಿ ತೋರಿಸಿಲ್ಲ.
‘ದಿ ಕೇರಳ ಸ್ಟೋರಿ 2’ ಸಿನಿಮಾದಲ್ಲಿ ಕೇರಳವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ಆರೋಪ ಇದೆ. ಹಾಗಾಗಿ ಈ ಚಿತ್ರವನ್ನು ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದ್ದರಿಂದ ಅನೇಕ ಕಡೆಗಳಲ್ಲಿ ಈ ಸಿನಿಮಾದ ಪ್ರದರ್ಶನವನ್ನು ಕ್ಯಾನ್ಸಲ್ ಮಾಡಲಾಗಿದೆ. ಇದರಿಂದಾಗಿ ಕೇರಳದಲ್ಲಿ ಈ ಚಿತ್ರಕ್ಕೆ ಹೀನಾಯ ಕಲೆಕ್ಷನ್ ಆಗಿದೆ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ ಸಿಎಂ ಪಿಣರಾಯಿ ವಿಜಯನ್
ಕಾಮಾಕ್ಯ ನಾರಾಯಣ್ ಸಿಂಗ್ ಅವರು ‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಉಲ್ಕಾ ಗುಪ್ತಾ, ಐಶ್ವರ್ಯಾ ಊಜಾ, ಅದಿತಿ ಭಾಟಿಯಾ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಪುಲ್ ಅಮೃತ್ಲಾಲ್ ಶಾ ಅವರು ಬಂಡವಾಳ ಹೂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.