ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ನಟನೆಯ ಬಹುನಿರೀಕ್ಷಿತ ‘ಈಠಾ’ ಚಿತ್ರದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಮಾ ವಿವಾದದ ಸುಳಿಗೆ ಸಿಲುಕಿದೆ. ಮಹಾರಾಷ್ಟ್ರದ ಹೆಸರಾಂತ ಲಾವಣಿ ನೃತ್ಯಗಾರ್ತಿ ಮತ್ತು ತಮಾಷಾ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಈ ಚಿತ್ರದ ಶೀರ್ಷಿಕೆಗೆ ಈಗ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಟೀಸರ್ ಮೂಲಕ ಭಾರಿ ಕೌತುಕ ಮೂಡಿಸಿರುವ ‘ಈಠಾ’ (Eetha) ಸಿನಿಮಾದ ಟೈಟಲ್ ಬದಲಾಯಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
‘ಟಿವಿ9 ಮರಾಠಿ’ ವರದಿಯ ಪ್ರಕಾರ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಸಿನಿಮಾ ಮತ್ತು ಸಾಂಸ್ಕೃತಿಕ ವಿಭಾಗವು ‘ಈಠಾ’ ಹೆಸರಿನ ವಿರುದ್ಧ ಆಕ್ರೋಶ ಹೊರಹಾಕಿದೆ. ಈ ಶೀರ್ಷಿಕೆಯು ವಿಠಾಬಾಯಿ ಅವರ ಪರಂಪರೆಗೆ ಮತ್ತು ಸಾಧನೆಗೆ ಮಾಡುವ ಅವಮಾನ ಎಂದು ಎನ್‌ಸಿಪಿ ವಾದಿಸಿದೆ. ಚಿತ್ರಕ್ಕೆ ‘ವಿಠಾ’ ಅಥವಾ ‘ವಿಠಾಬಾಯಿ’ ಎಂದು ಹೆಸರಿಡಬೇಕಿತ್ತು ಎಂದು ಆಗ್ರಹಿಸಿದೆ.
ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಕುಟುಂಬಸ್ಥರು ಕೂಡ ಎನ್‌ಸಿಪಿಯ ಈ ಬೇಡಿಕೆಯನ್ನು ಬೆಂಬಲಿಸಿದ್ದಾರೆ. ವಿಠಾಬಾಯಿ ಅವರ ಪುತ್ರರಾದ ಕೈಲಾಶ್ ನಾರಾಯಣಗಾಂವ್ಕರ್, ರಾಜೇಶ್ ನಾರಾಯಣಗಾಂವ್ಕರ್ ಮತ್ತು ಮೊಮ್ಮಗ ಮೋಹಿತ್ ನಾರಾಯಣಗಾಂವ್ಕರ್ ಅವರು ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.
ಎನ್‌ಸಿಪಿಯ ಸಾಂಸ್ಕೃತಿಕ ವಿಭಾಗದ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ಬಾಬಾಸಾಹೇಬ್ ಪಾಟೀಲ್ ಮಾತನಾಡಿ, ‘ವಿಠಾಬಾಯಿ ಅವರ ಜೀವನವನ್ನು ಅತ್ಯಂತ ಗೌರವಯುತವಾಗಿ ತೆರೆಯ ಮೇಲೆ ತರುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದಿದ್ದಾರೆ. ಆದರೆ ಈ ವಿವಾದದ ಕುರಿತು ಚಿತ್ರದ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಆಗಲಿ ಅಥವಾ ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯಾಗಲಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ‘ಈಠಾ’ ಟೀಸರ್ ರಿಲೀಸ್: ಲಾವಣಿ ಕಲಾವಿದೆಯಾಗಿ ಶ್ರದ್ಧಾ ಕಪೂರ್ ನಟನೆಗೆ ಫ್ಯಾನ್ಸ್ ಫಿದಾ
ದಿನೇಶ್ ವಿಜನ್ ನಿರ್ಮಿಸಿ, ಲಕ್ಷ್ಮಣ್ ಉಟೇಕರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ಜೊತೆಗೆ ರಣದೀಪ್ ಹೂಡಾ ಮತ್ತು ಮೊಹಮ್ಮದ್ ಜೀಶನ್ ಅಯೂಬ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಸ್ತ್ರೀ’ ಸರಣಿಯ ಯಶಸ್ಸಿನ ಬಳಿಕ ಶ್ರದ್ಧಾ ಮತ್ತು ದಿನೇಶ್ ವಿಜನ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಆಗಸ್ಟ್ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.