Headlines

ವಿವಾಹಿತೆ ಜೊತೆ ಓಡಿಹೋದ ಯುವಕನ ಮನೆ ಮೇಲೆ 30 ಜನರ ಗ್ಯಾಂಗ್ ದಾಳಿ: ಮಕ್ಕಳೂ ಸೇರಿ 10 ಜನ ಜಸ್ಟ್ ಮಿಸ್ – Kannada News | Belagavi Outrage: 30 Member Gang Attacks Youth’s House with Weapons After He Elopes with Married Woman in Bharamyanatti

ಬೆಳಗಾವಿ, ಜೂನ್ 30: ವಿವಾಹಿತ ಮಹಿಳೆಯೊಬ್ಬಳು ಪತಿಯ ಸ್ನೇಹಿತನ ಜೊತೆ ಓಡಿಹೋದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪತಿ ಹಾಗೂ ಆಕೆಯ ಪೋಷಕರ ಬೃಹತ್ ಗುಂಪೊಂದು ಯುವಕನ ಮನೆಗೆ ನುಗ್ಗಿ ಭಾರಿ ದಾಂಧಲೆ ನಡೆಸಿರುವ ಘಟನೆ ಬೆಳಗಾವಿ (Belagavi) ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ವರದಿಯಾಗಿದೆ. ಯಮಕನಮರಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ಸುಮಾರು 30ಕ್ಕೂ ಹೆಚ್ಚು ಜನರಿದ್ದ ಉದ್ರಿಕ್ತರ ಗುಂಪು ತಲ್ವಾರ್, ಜಂಬೆ, ಕುಡುಗೋಲು ಹಾಗೂ ಬಡಿಗೆಗಳ ಸಮೇತ ಯುವಕನ ಮನೆಗೆ ನುಗ್ಗಿ ಅಟ್ಟಹಾಸ ಮೆರೆದಿದೆ. ಈ ವೇಳೆ ಮನೆಯಲ್ಲಿದ್ದ ಯುವಕನ ಕುಟುಂಬ ಸದಸ್ಯರ ಹತ್ಯೆಗೆ ಯತ್ನ ನಡೆದಿದ್ದು, ಆರು ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 10 ಜನ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಕಂಪನಿಯಲ್ಲಿ ಕೆಲಸ ಮಾಡುವಾಗ ಶುರುವಾದ ಸಲುಗೆ

ಗ್ರಾಮದ ಬಸಪ್ಪ ನಾಯಕ್ ಹಾಗೂ ಯಲ್ಲಪ್ಪ ನಾಯಕ್ ಆತ್ಮೀಯ ಸ್ನೇಹಿತರಾಗಿದ್ದರು. ಕಳೆದ ವರ್ಷವಷ್ಟೇ ಬಸಪ್ಪ ನಾಯಕ್ ಹಾಗೂ ನಾಗವ್ವ ಎಂಬಾಕೆಯ ವಿವಾಹ ನಡೆದಿತ್ತು. ಬೆಳಗಾವಿಯ ಖಾಸಗಿ ಕಂಪನಿಯೊಂದರಲ್ಲಿ ಬಸಪ್ಪ ದಂಪತಿ ಹಾಗೂ ಯಲ್ಲಪ್ಪ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಪತಿಯ ಸ್ನೇಹಿತ ಯಲ್ಲಪ್ಪ ಹಾಗೂ ನಾಗವ್ವ ನಡುವೆ ಸಲುಗೆ ಬೆಳೆದು ಪ್ರೇಮಾಂಕುರವಾಗಿದೆ. ಇದರ ಪರಿಣಾಮವಾಗಿ ಎರಡು ದಿನಗಳ ಹಿಂದೆ ನಾಗವ್ವ ಮತ್ತು ಯಲ್ಲಪ್ಪ ಇಬ್ಬರೂ ಗ್ರಾಮ ಬಿಟ್ಟು ಓಡಿಹೋಗಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಬಸಪ್ಪ ನಾಯಕ್, ನಾಗವ್ವಳ ಪೋಷಕರು ಹಾಗೂ ಸಂಬಂಧಿಕರು ಒಟ್ಟಾಗಿ ಯಲ್ಲಪ್ಪನ ಮನೆಗೆ ನುಗ್ಗಿ ಕಲ್ಲು ತೂರಾಟ ನಡೆಸಿ, ಹೆಂಚುಗಳನ್ನು ಪುಡಿಪುಡಿ ಮಾಡಿದ್ದಾರೆ.

ಚಿನ್ನಾಭರಣ, ತಿಜೋರಿ ಧ್ವಂಸ: ಕುರಿ ಕದ್ದು ಪಾರ್ಟಿ ಮಾಡಿದ ದುಷ್ಕರ್ಮಿಗಳು!

ದುಷ್ಕರ್ಮಿಗಳ ಗುಂಪು ಯಲ್ಲಪ್ಪನ ಮನೆಗೆ ನುಗ್ಗಿ ಟಿವಿ, ಪೀಠೋಪಕರಣ ಹಾಗೂ ತಿಜೋರಿಯನ್ನು ಧ್ವಂಸಗೊಳಿಸಿದೆ. ಅಷ್ಟಕ್ಕೇ ನಿಲ್ಲದೆ ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಕೊಟ್ಟಿಗೆಯಲ್ಲಿದ್ದ 15 ಕುರಿಗಳನ್ನು ಅಪಹರಿಸಿಕೊಂಡು ಪರಾರಿಯಾಗಿದೆ. ವಿಕೃತಿಯ ಪರಾಕಾಷ್ಠೆ ಎಂಬಂತೆ, ಕದ್ದು ತಂದ ಕೃಷಿ ಕುರಿಗಳನ್ನು ಕಟ್ ಮಾಡಿ ದುಷ್ಕರ್ಮಿಗಳು ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ದುಷ್ಕರ್ಮಿಗಳ ಈ ಭೀಕರ ಅಟ್ಟಹಾಸದಿಂದ ಯಲ್ಲಪ್ಪನ ತಂದೆ, ತಾಯಿ, ಸಹೋದರಿಯರು ಹಾಗೂ ತಮ್ಮ ತೀವ್ರ ಭಯಭೀತರಾಗಿದ್ದಾರೆ.

ಪೊಲೀಸ್ ಕಮಿಷನರ್‌ಗೆ ರಕ್ಷಣೆಗಾಗಿ ಮನವಿ

ಘಟನೆಯ ಬಳಿಕ ತೀವ್ರ ಆತಂಕಕ್ಕೆ ಒಳಗಾಗಿರುವ ಯಲ್ಲಪ್ಪನ ಪೋಷಕರು ನಗರ ಪೊಲೀಸ್ ಕಮಿಷನರ್ ಭೂಷಣ್ ಜಿ. ಬೊರಸೆ ಅವರನ್ನು ಖುದ್ದಾಗಿ ಭೇಟಿಯಾಗಿ, ಕುಟುಂಬಕ್ಕೆ ಜೀವ ರಕ್ಷಣೆ ನೀಡಬೇಕು ಹಾಗೂ ದಾಳಿ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಸದ್ಯ ನಾಗರಾಜ್ ನಾಯಕ್, ರವಿ, ಈಶ್ವರ, ಶಿವಪ್ಪ ಸೇರಿದಂತೆ ಹಲವರ ವಿರುದ್ಧ ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *