ಬೆಂಗಳೂರು, ಜುಲೈ 27: ಬಾಲ್ಯ ವಿವಾಹಗಳನ್ನು (Child Marriage) ಪರಿಣಾಮಕಾರಿಯಾಗಿ ತಡೆಯಲು ವಿವಾಹ ನೋಂದಣಿ ಸಮಯದಲ್ಲಿ ವಯಸ್ಸಿನ ಸರಿಯಾದ ಪರಿಶೀಲನೆ ನಡೆಸಬೇಕು ಹಾಗೂ ಆಧಾರ್ ಕಾರ್ಡ್ ಒಂದನ್ನೇ ವಯಸ್ಸಿನ ಅಂತಿಮ ಪುರಾವೆಯಾಗಿ ಪರಿಗಣಿಸಬಾರದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ಸರ್ಕಾರಕ್ಕೆ ಮನವಿ ಮಾಡಿದೆ. ಬಾಲ್ಯ ವಿವಾಹ ನಿಷೇಧ ನಿಯಮಗಳು 2014 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿರುವ ಆಯೋಗ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರಿಗೆ ಈ ಕುರಿತು ಅಧಿಕೃತ ಪತ್ರ ಬರೆದಿದೆ.
ಶಾಲಾ ದಾಖಲೆ, ಜನನ ಪ್ರಮಾಣಪತ್ರ ಕಡ್ಡಾಯಗೊಳಿಸಲು ಮನವಿ
ವಿವಾಹ ನೋಂದಣಿ ವೇಳೆ ಕೇವಲ ಆಧಾರ್ ಕಾರ್ಡ್ ಅನ್ನು ಮಾತ್ರ ವಯಸ್ಸಿನ ಪುರಾವೆಯಾಗಿ ಸ್ವೀಕರಿಸುವುದರಿಂದ ಅಪ್ರಾಪ್ತರ ವಿವಾಹಗಳು ನೋಂದಣಿಯಾಗುವ ಅಪಾಯ ಹೆಚ್ಚಿರುತ್ತದೆ ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ. ಆದ್ದರಿಂದ ಆಧಾರ್ಗೆ ಬದಲಾಗಿ ಅಥವಾ ಅದರೊಂದಿಗೆ ಜನನ ಪ್ರಮಾಣಪತ್ರ, ಶಾಲಾ ದಾಖಲೆಗಳು / ಎಸ್ಎಸ್ಎಲ್ಸಿ ಅಂಕಪಟ್ಟಿಯ್ನೂ ಸಹ ಸ್ವೀಕರಿಸಬೇಕು. ಅಗತ್ಯಬಿದ್ದಲ್ಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ವಯಸ್ಸಿನ ದೃಢೀಕರಣಕ್ಕೆ ಮೂಲ ದಾಖಲೆಗಳಾಗಿ ಸ್ವೀಕರಿಸುವಂತೆ ನೋಂದಣಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ.
ಆಧಾರ್ ಗುರುತಿನ ಚೀಟಿ ಮಾತ್ರ, ವಯಸ್ಸಿನ ಅಂತಿಮ ದಾಖಲೆಯಲ್ಲ!
ಆಯೋಗದ ಪರವಾಗಿ ಮನವಿ ಸಲ್ಲಿಸಿದ ಮಾಜಿ ಸದಸ್ಯ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಆಧಾರ್ ಕಾರ್ಡ್ ಮೂಲತಃ ವ್ಯಕ್ತಿಯ ಗುರುತಿನ ದಾಖಲೆಯಾಗಿದೆಯೇ ಹೊರತು, ವಯಸ್ಸಿನ ಪರಿಪೂರ್ಣ ಪುರಾವೆಯಲ್ಲ. ಆಧಾರ್ನಲ್ಲಿರುವ ಜನನ ದಿನಾಂಕವು ಸ್ವಯಂ ಘೋಷಣೆ ಅಥವಾ ಸಾಮಾನ್ಯ ದಾಖಲೆಗಳ ಮೇಲೆ ಆಧಾರಿತವಾಗಿರಬಹುದು. ಹೀಗಾಗಿ ಮದುವೆ ನೋಂದಣಿ ಅಧಿಕಾರಿಗಳು ಆಧಾರ್ ಮೇಲೆ ಮಾತ್ರ ಅವಲಂಬಿತರಾಗಬಾರದು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ ಧಾರವಾಡ: ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 1600ಕ್ಕೂ ಅಧಿಕ ಬಾಲ ಗರ್ಭಿಣಿಯರ ಕೇಸ್ ಪತ್ತೆ!
ಬಾಲ್ಯವಿವಾಹ ತಡೆಯುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನೋಂದಣಿ ಸಿಬ್ಬಂದಿಗೆ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಆಯೋಗ ಆಗ್ರಹಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ