ನಮ್ಮ ಕೌಶಲ್ಯ, ಪದವಿ ನಮಗೆ ಉದ್ಯೋಗವನ್ನು ತಂದುಕೊಡುತ್ತದೆ, ಅದೇ ನಮ್ಮ ನಡವಳಿಕೆಗಳು ಮತ್ತು ಅಭ್ಯಾಸಗಳು ನಮ್ಮ ವೃತ್ತಿ ಜೀವನದ (career) ಯಶಸ್ಸನ್ನು ನಿರ್ಧರಿಸುತ್ತದೆ. ಕೆಲವೊಮ್ಮೆ ನಾವು ತಿಳಿದೋ ತಿಳಿಯದೆಯೋ ಮಾಡುವ ಸಣ್ಣ ತಪ್ಪಿನಿಂದ ನಮ್ಮ ಇಮೇಜ್ ಹಾಳಾಗುವ ಸಾಧ್ಯತೆ ಇರುತ್ತದೆ ಇದರಿಂದ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಸಹ ಕಷ್ಟ ಸಾಧ್ಯವಾಗಬಹುದು, ಕಠಿಣ ಪರಿಶ್ರಮವೆಲ್ಲಾ ಹಾಳಾಗಬಹುದು. ಹಾಗಿದ್ದರೆ ನಮ್ಮ ಯಾವ ಅಭ್ಯಾಸಗಳು ವೃತ್ತಿ ಜೀವನದ ಯಶಸ್ಸಿಗೆ ಮುಳುವಾಗುತ್ತದೆ, ವೃತ್ತಿ ಜೀವನದ ಯಶಸ್ಸಿಗಾಗಿ ಯಾವ ಅಭ್ಯಾಸಗಳನ್ನು ಬದಲಾಯಿಸಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.
ವೃತ್ತಿ ಜೀವನದ ಯಶಸ್ಸಿಗೆ ಮುಳುವಾಗುವ ಅಭ್ಯಾಸಗಳಿವು:
ಸಮಯಪಾಲನೆ ಮಾಡದಿರುವುದು: ಯಾವಾಗಲೂ ಕಚೇರಿಗೆ ತಡವಾಗಿ ಬರುವುದು, ಮೀಟಿಂಗ್ಗಳಿಗೆ ತಡವಾಗಿ ಹಾಜರಾಗುವುದು ಸಣ್ಣದೆಂದು ತೋರುವ ಈ ಅಭ್ಯಾಸಗಳು ನಿಮ್ಮ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ನೀವು ಸಮಯವನ್ನು ಗೌರವಿಸುವುದಿಲ್ಲ ಮತ್ತು ನಿಮ್ಮ ಕೆಲಸದ ಬಗ್ಗೆ ನೀವು ಗಂಭೀರವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಹೀಗಿದ್ದರೆ ಖಂಡಿತವಾಗಿ ಕೆಲಸದ ಸ್ಥಳದಲ್ಲಿ ನಿಮಗೆ ಗೌರವ ಸಿಗುವುದಿಲ್ಲ ಜೊತೆಗೆ ವೃತ್ತಿ ಜೀವನದಲ್ಲಿ ಯಶಸ್ಸು ಲಭಿಸುವುದಿಲ್ಲ. ಯಶಸ್ಸನ್ನು ಗಳಿಸಬೇಕಾದರೆ ಪ್ರತಿಯೊಂದು ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಿ, ಸಮಯವನ್ನು ಗೌರವಿಸಿ.
ಕಚೇರಿ ಗಾಸಿಪ್ನಲ್ಲಿ ತೊಡಗುವುದು: ಆಫೀಸ್ಗಳಲ್ಲಿ ಸಹದ್ಯೋಗಿಗಳ ನಡುವೆ ಗಾಸಿಪ್ಗಳು ನಡೆಯುವುದು ಸಾಮಾನ್ಯ. ಆದರೆ ಹೀಗೆ ಗಾಸಿಪ್ ಮಾಡುವುದು, ಇತರರ ಹಿಂದೆ ಮಾತನಾಡುವುದು, ರಾಜಕೀಯ ಮಾಡುವುದು ಇವೆಲ್ಲವು ವೃತ್ತಿಪರ ಲಕ್ಷಣವಲ್ಲ. ಈ ರೀತಿ ಅನಗತ್ಯ ವಿಚಾರದಲ್ಲಿ ತೊಡಗಿಕೊಂಡರೆ ನಿಮ್ಮ ಕೆಲಸ ಸಾಗುವುದಿಲ್ಲ, ಇದು ಯಶಸ್ಸಿಗೆ ಅಡ್ಡಿ ಉಂಟುಮಾಡುತ್ತದೆ. ವೃತ್ತಿಪರರು ಯಾವಾಗಲೂ ಜನರ ಬಗ್ಗೆ ಅಲ್ಲ, ಕೆಲಸದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅದೇ ರೀತಿ ನೀವು ಕೂಡ ಕೆಲಸದ ಬಗ್ಗೆ ಮಾತ್ರ ಹೆಚ್ಚು ಗಮನ ಹರಿಸಬೇಕು.
ಎಲ್ಲದಕ್ಕೂ ನೆಪ ಹೇಳುವ ಅಭ್ಯಾಸ: ತಪ್ಪುಗಳು ಸಾಮಾನ್ಯ, ಆದರೆ ಕೆಲಸದಲ್ಲಿ ನಡೆಯುವ ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಬದಲು ಸಂದರ್ಭಗಳನ್ನು ಅಥವಾ ಇತರರನ್ನು ದೂಷಿಸುವುದು ಕೆಟ್ಟ ಅಭ್ಯಾಸ, ಈ ಅಭ್ಯಾಸ ನಿಮ್ಮನ್ನು ಯಶಸ್ಸಿನತ್ತ ಸಾಗುವುದನ್ನು ತಡೆಯುತ್ತದೆ. ಜವಾಬ್ದಾರಿಯನ್ನು ತೆಗೆದುಕೊಂಡು, ಮಾಡಿದ ತಪ್ಪುಗಳನ್ನು ತಿದ್ದಿ ನಡೆಯುವವನು ಮಾತ್ರ ಯಶಸ್ಸಿನ ಹಾದಿಯನ್ನು ತಲುಪಲು ಸಾಧ್ಯ.
ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ತೋರದಿರುವುದು: ನೀವು ಹೊಸ ಕೌಶಲ್ಯಗಳನ್ನು, ಕೆಲಸಕ್ಕೆ ಸಂಬಂಧಿಸಿದ ಹೊಸ ಹೊಸ ವಿಷಯಗಳನ್ನು ಕಲಿಯಲು ಆಸಕ್ತಿಯನ್ನು ತೋರದಿದ್ದರೆ, ಕೆಲಸದ ಸ್ಥಳದಲ್ಲಿ ನಿಮ್ಮ ಉಪಯುಕ್ತತೆ ಕ್ರಮೇಣ ಕಡಿಮೆಯಾಗಬಹುದು. ಅದೇ ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡಷ್ಟು ನಿಮಗೆ ಬೇಡಿಕೆ ಹೆಚ್ಚಾಗುತ್ತದೆ, ನೀವು ಸುಲಭವಾಗಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ತಂದೆಯ ಈ ಅಭ್ಯಾಸಗಳು ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ
ಆತ್ಮವಿಶ್ವಾಸದ ಕೊರತೆ: ನನ್ನಿಂದ ಇದು ಸಾಧ್ಯವಿಲ್ಲ ಎಂಬ ಭಯ, ಹಿಂಜರಿಕೆ ಆತ್ಮವಿಶ್ವಾಸದ ಕೊರತೆಯು ನಿಮ್ಮನ್ನು ಯಶಸ್ಸಿನತ್ತ ಸಾಗದಂತೆ ತಡೆಯುತ್ತದೆ. ನೀವು ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ, ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ, ಅಪಾಯಗಳನ್ನು ತೆಗೆದುಕೊಳ್ಳಲು ಹೆದರಬೇಡಿ.
ಹೀಗೆ ವೃತ್ತಿ ಜೀವನದ ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ಅಲ್ಲ ಸರಿಯಾದ ಮನಸ್ಥಿತಿ, ನಡವಳಿಕೆ ಮತ್ತು ಅಭ್ಯಾಸಗಳು ಸಹ ಅಗತ್ಯವಾಗಿರುತ್ತದೆ. ಮೇಲೆ ಹೇಳಿರುವ ಈ ಅಭ್ಯಾಸಗಳನ್ನು ಬಿಟ್ಟು ಬಿಡುವುದರಿಂದ ನಿಮ್ಮ ಕಾರ್ಯಕ್ಷಮತೆ ಸುಧಾರಿಸುವುದಲ್ಲದೆ, ನಿಮ್ಮ ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ