ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ‘ಎ’ ಸರಣಿಯು ಈಗ ಕೇವಲ ಕ್ರಿಕೆಟ್ ಕಾರಣಗಳಿಗಾಗಿ ಮಾತ್ರವಲ್ಲದೆ ಮೈದಾನದ ವಿವಾದಗಳಿಂದಲೂ ಭಾರಿ ಸದ್ದು ಮಾಡುತ್ತಿದೆ. ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ ಪಂದ್ಯದ ನಂತರ ನಡೆದ ಹೈ-ಡ್ರಾಮಾ ಈಗ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತ ಎ ತಂಡದ 15 ವರ್ಷದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಆನ್-ಫೀಲ್ಡ್ ವರ್ತನೆಗೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ವಿವಾದಕ್ಕೆ ಕಾರಣವಾದ ಆ ಒಂದು ಘಟನೆ!
ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ಪಂದ್ಯವು ಅತ್ಯಂತ ರೋಚಕವಾಗಿ ‘ಸೂಪರ್ ಓವರ್’ ಹಂತಕ್ಕೆ ತಲುಪಿತ್ತು. ಸೂಪರ್ ಓವರ್‌ನ ಕೊನೆಯ ಎಸೆತದಲ್ಲಿ ಶ್ರೀಲಂಕಾ ಎ ತಂಡ ಜಯಭೇರಿ ಬಾರಿಸಿತು. ಪಂದ್ಯ ಮುಗಿದ ತಕ್ಷಣ, ತೀವ್ರ ಆಕ್ರೋಶಗೊಂಡಂತೆ ಕಂಡ ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ನೇರವಾಗಿ ಶ್ರೀಲಂಕಾದ ಆಟಗಾರ ವಿಶೇನ್ ಹಲಂಬಾಗೆ ಕಡೆಗೆ ಧಾವಿಸಿ ಅವರನ್ನು ದೈಹಿಕವಾಗಿ ತಳ್ಳಿದರು. ಈ ದೃಶ್ಯಗಳು ನೇರ ಪ್ರಸಾರದಲ್ಲಿ ಸೆರೆಯಾಗಿದ್ದು, ಕ್ರಿಕೆಟ್ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು.
ಪ್ರಚೋದನೆಗೆ ಕಾರಣವೇನು?
ವರದಿಗಳ ಪ್ರಕಾರ, ಪಂದ್ಯದ ಉದ್ದಕ್ಕೂ ವಿಶೇನ್ ಹಲಂಬಾಗೆ ವೈಭವ್ ಸೂರ್ಯವಂಶಿಯನ್ನು ನಿರಂತರವಾಗಿ ಸ್ಲೆಡ್ಜಿಂಗ್ ಮಾಡುತ್ತಿದ್ದರು. ಸೂಪರ್ ಓವರ್ ಗೆಲುವಿನ ಸಂಭ್ರಮದಲ್ಲಿದ್ದ ಹಲಂಬಾ, ವೈಭವ್ ಅವರನ್ನು ಕೆಣಕುವ ಉದ್ದೇಶದಿಂದ, “ಮನೆಗೆ ಹೋಗು, ಇದು ಐಪಿಎಲ್ ಅಲ್ಲ!” ಎಂದು ಲೇವಡಿ ಮಾಡಿದ್ದರು. ಈ ಪ್ರಚೋದನೆಯಿಂದ ನಿಯಂತ್ರಣ ಕಳೆದುಕೊಂಡ ವೈಭವ್ ಸೂರ್ಯವಂಶಿ ಮೈದಾನದಲ್ಲೇ ದೈಹಿಕ ಸಂಘರ್ಷಕ್ಕೆ ಇಳಿದಿದ್ದರು.
ಸಂಜಯ್ ಮಂಜ್ರೇಕರ್ ಆಕ್ರೋಶ:
ವೈಭವ್ ಸೂರ್ಯವಂಶಿಯ ಈ ವರ್ತನೆಯನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಖಂಡಿಸಿದ್ದಾರೆ. “ನಾನೇನಾದರೂ ಭಾರತ ಎ ತಂಡದ ಕೋಚ್ ಅಥವಾ ಮ್ಯಾನೇಜರ್ ಆಗಿರುತ್ತಿದ್ದರೆ, ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಿಂದ ವೈಭವ್ ಸೂರ್ಯವಂಶಿ ಅವರನ್ನು ಖಂಡಿತವಾಗಿಯೂ ಹೊರಗಿಡುತ್ತಿದ್ದೆ. ಮೈದಾನದಲ್ಲಿ ಎಂತಹದ್ದೇ ಪ್ರಚೋದನೆ ಸಿಕ್ಕರೂ ಸಹ, ದೈಹಿಕವಾಗಿ ಜಗಳವಾಡುವುದು ಸರಿಯಲ್ಲ ಎಂಬುದನ್ನು ಅವರಿಗೆ ಅರ್ಥ ಮಾಡಿಸಲು ಈ ಕಠಿಣ ನಿರ್ಧಾರ ಅಗತ್ಯವಾಗಿತ್ತು.” ಎಂದು ಮಂಜ್ರೇಕರ್ ಹೇಳಿದ್ದಾರೆ.
15 ವರ್ಷದ ವೈಭವ್ ಸೂರ್ಯವಂಶಿ ಶ್ರೀಘ್ರದಲ್ಲೇ ಭಾರತದ ಹಿರಿಯರ ತಂಡದ ಕಣಕ್ಕಿಳಿಯಲಿದ್ದಾರೆ. ಇಂತಹ ಯುವ ಆಟಗಾರನಿಗೆ ಮೈದಾನದ ಶಿಸ್ತು ಎಷ್ಟು ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಡಲು ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಿಂದ ಅವರನ್ನು ಹೊರಗಿಟ್ಟು ಒಂದು ಪಂದ್ಯದ ನಿಷೇಧದಂತಹ ಕಠಿಣ ಸಂದೇಶವನ್ನು ಮ್ಯಾನೇಜ್‌ಮೆಂಟ್ ನೀಡಬೇಕಿತ್ತು ಎಂಬುದು ಮಂಜ್ರೇಕರ್ ಅವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಕೊನೆಯ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಫೈನಲ್ಗೇರಿದ್ದು ಹೇಗೆ?
ಕ್ರಿಕೆಟ್ ನಿಯಮಗಳು ಮತ್ತು ಕ್ರೀಡಾ ನೀತಿಯ ಪ್ರಕಾರ ಸಂಜಯ್ ಮಂಜ್ರೇಕರ್ ಅವರ ನಿಲುವು ತತ್ವಬದ್ಧವಾಗಿದೆ. ಆದರೆ ಆಟಗಾರನ ವಯಸ್ಸು ಮತ್ತು ಎದುರಾಳಿಯ ತೀವ್ರ ಪ್ರಚೋದನೆಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ಅವರನ್ನು ನೇರವಾಗಿ ತಂಡದಿಂದ ಕೈಬಿಡುವ ಮಂಜ್ರೇಕರ್ ಅವರ ಸಲಹೆ ಸ್ವಲ್ಪ ಕಠಿಣ ಎಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿವೆ. ಇದಾಗ್ಯೂ ಮುಂಬರುವ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ತಮ್ಮ ಕೋಪ-ತಾಪಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ತಮ್ಮ ಕೆರಿಯರ್ಗೆ ಉತ್ತಮ.