ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಹಿಂದೊಮ್ಮೆ ನೀಡಿದ್ದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ‘ಶಾರುಖ್ ನನ್ನ ಕಾಲು ನೆಕ್ಕುತ್ತಿದ್ದಾನೆ. ನಾನು ಅವನಿಗೆ ಬಿಸ್ಕತ್ ಹಾಕುತ್ತಿದ್ದೇನೆ’ ಎಂದು ಆಮಿರ್ ಹೇಳಿದ್ದರು. ಇದನ್ನು ಕೇಳಿ ಶಾರುಖ್ ಖಾನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಅಸಲಿಗೆ ಆಮಿರ್ ಖಾನ್ ಮಾತನಾಡಿದ್ದು ನಟ ಶಾರುಖ್ ಬಗ್ಗೆ ಅಲ್ಲ. ಅದು ಅವರ ಮನೆಯಲ್ಲಿದ್ದ ನಾಯಿಯ ಹೆಸರಾಗಿತ್ತು.
2008ರಲ್ಲಿ ನಡೆದ ಘಟನೆ ಇದು
ಆಮಿರ್ ಖಾನ್ 2008ರಲ್ಲಿ ತಮ್ಮ ಬ್ಲಾಗ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ‘ನಾನು ಪಂಚಗನಿಯಲ್ಲಿ ಕುಟುಂಬದೊಂದಿಗೆ ಕೂತಿದ್ದೇನೆ. ಶಾರುಖ್ ನನ್ನ ಕಾಲು ನೆಕ್ಕುತ್ತಿದ್ದಾನೆ. ನಾನು ಅವನಿಗೆ ಬಿಸ್ಕತ್ ನೀಡುತ್ತಿದ್ದೇನೆ’ ಎಂದು ಬರೆದಿದ್ದರು. ತಕ್ಷಣವೇ ಆಮಿರ್ ಖಾನ್ ಸ್ಪಷ್ಟನೆ ಕೂಡ ನೀಡಿದ್ದರು. ‘ಶಾರುಖ್ ಎಂಬುದು ನಮ್ಮ ಮನೆಯ ನಾಯಿಯ ಹೆಸರು. ಅದಕ್ಕೆ ನಾನು ಹೆಸರಿಟ್ಟಿಲ್ಲ. ಆ ಮನೆಯನ್ನು ನಾನು ಖರೀದಿಸುವ ಮುನ್ನವೇ ಕೇರ್‌ಟೇಕರ್ಸ್ ಆ ನಾಯಿಗೆ ಆ ಹೆಸರು ಇಟ್ಟಿದ್ದರು’ ಎಂದು ವಿವರಿಸಿದ್ದರು.
ನಾಯಿಗೆ ‘ಶಾರುಖ್’ ಎಂದು ಹೆಸರಿಟ್ಟಿದ್ದು ಯಾಕೆ?
ಕೆಲವು ವರ್ಷಗಳ ಹಿಂದೆ ನಟ ಶಾರುಖ್ ಖಾನ್ ಅದೇ ಮನೆಯಲ್ಲಿ ಜಾಹೀರಾತು ಶೂಟಿಂಗ್ ಮಾಡಿದ್ದರು. ಅದೇ ದಿನ ಕೇರ್‌ಟೇಕರ್ಸ್ ಒಂದು ನಾಯಿ ಮರಿಯನ್ನು ತಂದಿದ್ದರು. ನೆಚ್ಚಿನ ನಟನ ನೆನಪಿಗಾಗಿ ಅದಕ್ಕೆ ಶಾರುಖ್ ಎಂದು ಹೆಸರಿಟ್ಟಿದ್ದರು.
ವಿವಾದಕ್ಕೆ ಆಮಿರ್ ಖಾನ್ ಕ್ಷಮೆ
ಈ ಬರಹದಿಂದ ಅಭಿಮಾನಿಗಳ ಭಾವನೆಗೆ ಧಕ್ಕೆಯಾಗಿತ್ತು. ಹೀಗಾಗಿ ಆಮಿರ್ ಖಾನ್ ಮಾಧ್ಯಮಗಳ ಮುಂದೆ ಕ್ಷಮೆ ಕೇಳಿದ್ದರು. ‘ನಾನು ಕೇವಲ ತಮಾಷೆಗಾಗಿ ಹಾಗೆ ಬರೆದಿದ್ದೆ. ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನಟ ಶಾರುಖ್ ಖಾನ್, ‘ನನ್ನ ಹೆಸರಿನ ಮೇಲೆ ನನಗೆ ಯಾವುದೇ ಕಾಪಿರೈಟ್ ಇಲ್ಲ. ಜನರು ಪ್ರೀತಿಯಿಂದ ಹೆಸರಿಡುತ್ತಾರೆ’ ಎಂದು ಸರಳವಾಗಿ ತೇಲಿಬಿಟ್ಟಿದ್ದರು.
ಇದನ್ನೂ ಓದಿ: ಕಬೀರ್ ಬೇಡಿಯಿಂದ ಆಮಿರ್ ಖಾನ್‌ವರೆಗೆ; ಮೂರು ಬಾರಿ ಮದುವೆಯಾದ ಬಾಲಿವುಡ್ ತಾರೆಯರಿವರು
ಈಗ ಇಬ್ಬರೂ ಆಪ್ತ ಸ್ನೇಹಿತರು
ಕಳೆದ ವರ್ಷ ಈ ಘಟನೆಯನ್ನು ಆಮಿರ್ ಖಾನ್ ನೆನಪಿಸಿಕೊಂಡಿದ್ದಾರೆ. ‘ಆ ಸಮಯದಲ್ಲಿ ನಮ್ಮಿಬ್ಬರ ನಡುವೆ ತಮಾಷೆಯ ಪೈಪೋಟಿ ಇತ್ತು. ಪ್ರಶಸ್ತಿ ಸಮಾರಂಭಗಳಲ್ಲಿ ಶಾರುಖ್ ಕೂಡ ನನ್ನ ಕಾಲೆಳೆಯುತ್ತಿದ್ದರು. ಆದರೆ ಈಗ ನಾವಿಬ್ಬರೂ ತುಂಬಾ ಆಪ್ತ ಸ್ನೇಹಿತರಾಗಿದ್ದೇವೆ’ ಎಂದು ಆಮಿರ್ ಖಾನ್ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 7:43 am, Tue, 14 July 26