ಕಲಬುರಗಿ, ಜುಲೈ 29: ಬಡ ಮಕ್ಕಳಿಗಾಗಿ ರಾಜ್ಯ ಸರ್ಕಾರ ಪ್ರತಿವರ್ಷ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತ ಶೂ ಹಾಗೂ ಸಾಕ್ಸ್ ನೀಡುತ್ತದೆ. ಆದರೆ ಪ್ರಸಕ್ತ ವರ್ಷ ಶಾಲೆ ಆರಂಭವಾಗಿ ಎರಡು ತಿಂಗಳು ಕಳೆದರೂ ಸಹ ಕಲಬುರಗಿ (kalaburagi) ಜಿಲ್ಲೆಯ ಶಾಲಾ ಮಕ್ಕಳಿಗೆ ಶೂ ಭಾಗ್ಯ (Shoe Bhagya) ಸಿಕಿಲ್ಲ. ಹೀಗಾಗಿ ಕೆಲ ವಿದ್ಯಾರ್ಥಿಗಳು ಚಪ್ಪಲಿ ಹಾಕಿಕೊಂಡು ಬಂದರೆ, ಇನ್ನು ಕೆಲ ವಿದ್ಯಾರ್ಥಿಗಳು ಬರಿಗಾಲಿನಲ್ಲಿ ಶಾಲೆಗೆ ಬರುತ್ತಿದ್ದಾರೆ. ಶೂ ಖರೀದಿಗೆ ಹಣವಿಲ್ಲ, ಇನ್ನಾದರೂ ನಮಗೆ ಶೂ ನೀಡಿ ಎಂದು ಮಕ್ಕಳು ಟಿವಿ9 ಎದುರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಬರಿಗಾಲಿನಲ್ಲಿ ಶಾಲೆಗೆ ಬರುವ ಪ್ರತಿಸ್ಥಿತಿ ನಿರ್ಮಾಣ
ರಾಜ್ಯದಲ್ಲಿ ಕಾಂಗ್ರೆಸ್ ನೈತೃತ್ವದ ಸರ್ಕಾರ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಶೂ ಭಾಗ್ಯ ಯೋಜನೆ ಜಾರಿಗೆ ತಂದಿದ್ದರು. ಆ ಮೂಲಕ 1 ರಿಂದ 10ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಸರ್ಕಾರ ಉಚಿತವಾಗಿ 2 ಜೊತೆ ಶೂ ಮತ್ತು ಸಾಕ್ಸ್ಗಳನ್ನು ನೀಡಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಶಾಲೆಗಳು ಆರಂಭವಾಗಿ ಇದೀಗ ಎರಡು ತಿಂಗಳು ಕಳೆದರೂ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯ ಒಂದೇ ಒಂದು ವಿದ್ಯಾರ್ಥಿಗೆ ಶೂ ಮತ್ತು ಸಾಕ್ಸ್ ವಿತರಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಬರಿಗಾಲಿನಲ್ಲಿ ಶಾಲೆಗೆ ಬರುವ ಪ್ರತಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ‘ಚಡ್ಡಿ’ ಮುಜುಗರ! 7ನೇ ತರಗತಿ ಬಾಲಕರಿಗೂ ಹಾಫ್ ಪ್ಯಾಂಟ್ ಬಟ್ಟೆ ವಿತರಣೆ, ಪೋಷಕರಿಗೆ ಇಕ್ಕಟ್ಟು
ಲಕ್ಷಾಂತರ ಬಡ ಮ್ಕಕಳಿಗೆ ಅನುಕೂಲವಾಗಬೇಕಿದ್ದ ಯೋಜನೆ ಹಳ್ಳ ಹಿಡಿಯಿತಾ ಎಂಬ ಅನುಮಾನ ಶುರುವಾಗಿದೆ. ಇನ್ನು ಟಿವಿ9 ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಶೂ ಭಾಗ್ಯ ಯೋಜನೆಯಡಿ ಇನ್ನು ಶೂ ವಿತರಣೆಯಾಗಿಲ್ಲ ಎನ್ನುವುದು ಬಯಲಾಗಿದೆ. ‘ಶೂ ಸಾಕ್ಸ್ ಖರೀದಿ ಮಾಡುವುದಕ್ಕೆ ನಮ್ಮ ಬಳಿ ಹಣವಿಲ್ಲ, ಹೀಗಾಗಿ ಸರ್ಕಾರ ಕೂಡಲೇ ಶೂ ವಿತರಿಸಬೇಕು’ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.
ಟೆಂಡರ್ ಕರೆದು ವಿತರಿಸಲು ಮುಂದಾದ ಸರ್ಕಾರ
ಇನ್ನು ಕಳೆದ ವರ್ಷ ಇಷ್ಟೋತ್ತಿಗಾಗಲೇ ಎಲ್ಲಾ ಶಾಲೆಗಳಿಗೆ ಶೂ ಮತ್ತು ಸಾಕ್ಸ್ ವಿತರಿಸಲಾಗಿತ್ತು. ಆಯಾ ಶಾಲೆಯ ಮಕ್ಕಳ ಶಾಲಾ ದಾಖಲಾತಿ ಅನುಸಾರ ಮುಖ್ಯೋಪಾಧ್ಯಾರ ಖಾತೆಗಳಿಗೆ ಸರ್ಕಾರ ಹಣ ಹಾಕುತ್ತಿದ್ದರು. ಆ ಹಣದಿಂದ ಆಯಾ ತಾಲ್ಲೂಕು ಹಾಗೂ ಜಿಲ್ಲೆಯ ಸ್ಥಳೀಯ ಅಂಗಡಿಗಳಲ್ಲಿ ಶಾಲೆಯ ಮುಖ್ಯೋಪಾಧ್ಯಾರು ಶೂ ಮತ್ತು ಸಾಕ್ಸ್ ಖರೀದಿಸಿ ವಿತರಣೆ ಮಾಡುತ್ತಿದ್ದರು. ಆದರೆ ಪ್ರಸಕ್ತ ವರ್ಷ ಆ ಯೋಜನೆ ಕೈ ಬಿಟ್ಟು ರಾಜ್ಯ ಸರ್ಕಾರವೇ ಟೆಂಡರ್ ಕರೆದು ವಿತರಿಸಲು ಮುಂದಾಗಿರುವುದರಿಂದ ಇಲ್ಲಿಯವರೆಗೆ ಶೂ ಮತ್ತು ಸಾಕ್ಸ್ ವಿತರಣೆಯಾಗಿಲ್ಲ.
ಡಿಡಿಪಿಐ ಶಂಕ್ರಮ್ಮ ಢವಳಗಿ ಹೇಳಿದ್ದಿಷ್ಟು
‘ಸದ್ಯ ಕಲಬುರಗಿ ಜಿಲ್ಲೆಯಲ್ಲಿ 1 ಲಕ್ಷ 94 ಸಾವಿರ 850 ಮಕ್ಕಳು ಶೂ ಮತ್ತು ಸಾಕ್ಸ್ಗಾಗಿ ಈಗಾಗಲೇ ನೋಂದಣಿ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲಿ ಎಲ್ಲಾ ಶಾಲಾ ಮಕ್ಕಳಿಗೆ ವಿತರಣೆ ಮಾಡುವುದಾಗಿ ಕಲಬುರಗಿ ಡಿಡಿಪಿಐ ಶಂಕ್ರಮ್ಮ ಢವಳಗಿ’ ಹೇಳಿದ್ದಾರೆ.
ಇದನ್ನೂ ಓದಿ: ಶಾಲಾ ಮಕ್ಕಳಿಗಿನ್ನು ಚಪ್ಪಲಿ ಭಾಗ್ಯ!: ಮಕ್ಕಳ ಆರೋಗ್ಯ ಗಮನದಲ್ಲಿರಿಸಿ ಶಿಕ್ಷಣ ಇಲಾಖೆಯಿಂದ ಹೊಸ ಚಿಂತನೆ
ಒಟ್ಟಿನಲ್ಲಿ ರಾಜ್ಯ ಸರ್ಕಾರ ಶೂ ಟೆಂಡರ್ ಕರೆದ ಪರಿಣಾಮ ಮಕ್ಕಳಿಗೆ ಶೂ ಭಾಗ್ಯ ವಿತರಣೆ ವಿಳಂಬಕ್ಕೆ ಕಾರಣವಾಗಿದೆ. ಹೀಗಾಗಿ ಆದಷ್ಟು ಬೇಗ ರಾಜ್ಯ ಸರ್ಕಾರ ಕಲಬುರಗಿ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ಶೂ ವಂಚಿತ ವಿದ್ಯಾರ್ಥಿಗಳಿಗೆ ಶೂ ಭಾಗ್ಯ ಕಲ್ಪಿಸಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.