ಕೊಪ್ಪಳ, ಜು.13: ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ವಿಂಡ್ ಪವರ್, ಸೋಲಾರ್ ಮತ್ತು ಕೆಪಿಟಿಸಿಎಲ್ ವಿದ್ಯುತ್ ಸಬ್‌ಸ್ಟೇಷನ್‌ಗಳ ಜಮೀನು ಸ್ವಾಧೀನ ಪ್ರಕ್ರಿಯೆಯದ್ದೇ ದೊಡ್ಡ ಸುದ್ದಿಯಾಗುತ್ತಿದೆ. ಇದರ ನಡುವೆಯೇ, ಯಲಬುರ್ಗಾ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ಅವರ ಆಪ್ತ ಎನ್ನಲಾದ ಮುಖಂಡ ಎಸ್.ಆರ್. ನವಲಿ ಹಿರೇಮಠ ರೈತರೊಂದಿಗೆ ಬಹಿರಂಗವಾಗಿ ಲ್ಯಾಂಡ್ ಡೀಲ್ ಮಾಡುತ್ತಿರುವ ಮತ್ತೊಂದಿಷ್ಟು ಸ್ಫೋಟಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸರಣಿಯಾಗಿ ವೈರಲ್ ಆಗುತ್ತಿದ್ದು, ಕ್ಷೇತ್ರದಲ್ಲಿ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಒಂದು ಕಡೆ ಶಾಸಕ ಬಸವರಾಜ್ ರಾಯರೆಡ್ಡಿ ಅವರು “ಯಾರೂ ಕಂಪನಿಗಳಿಗೆ ಜಮೀನು ಕೊಡಬೇಡಿ” ಎಂದು ರೈತರಿಗೆ ಬಹಿರಂಗವಾಗಿ ಕೈಮುಗಿದು ಪತ್ರ ಬರೆಯುತ್ತಿದ್ದರೆ, ಇನ್ನೊಂದೆಡೆ ಅವರದ್ದೇ ನೆರಳಿನಂತಿರುವ ಆಪ್ತ ನವಲಿ ಹಿರೇಮಠ ರೈತರ ಸಭೆ ನಡೆಸಿ ಜಮೀನು ಮಾರಾಟದ ಡೀಲ್ ಕುದುರಿಸುತ್ತಿರುವುದು ತೀವ್ರ ಕುತೂಹಲ ಮತ್ತು ಅನುಮಾನಗಳನ್ನು ಮೂಡಿಸಿದೆ.
ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಎಸ್.ಆರ್. ನವಲಿ ಹಿರೇಮಠ ಅವರು ಸುತ್ತಲೂ ಯಲಬುರ್ಗಾ ಭಾಗದ ರೈತರನ್ನು ಕೂರಿಸಿಕೊಂಡು ಸಭೆ ನಡೆಸುತ್ತಾ, ಲಕ್ಷ ಲಕ್ಷ ಹಣದ ಮಾತುಕತೆ ಆಡುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ನಿರ್ಮಾಣವಾಗಲಿರುವ ಕೆಪಿಟಿಸಿಎಲ್ ವಿದ್ಯುತ್ ಸಬ್‌ಸ್ಟೇಷನ್ ವಿಚಾರವಾಗಿ ರೈತರೊಂದಿಗೆ ಮಾತನಾಡುತ್ತಾ, “ನೀವು ಪ್ರತಿ ಎಕರೆಗೆ 40 ಲಕ್ಷ ರೂಪಾಯಿ ಕೇಳುತ್ತಿದ್ದೀರಿ. ಆದರೆ ಅದು 30 ರಿಂದ 32 ಲಕ್ಷ ರೂಪಾಯಿಗೆ ಬಗೆಹರಿಯಬಹುದು,” ಎಂದು ರೇಟ್ ಫಿಕ್ಸ್ ಮಾಡುತ್ತಿರುವ ಆಡಿಯೋ ಮತ್ತು ವಿಡಿಯೋ ವೈರಲ್ ಆಗಿದೆ.
ರೈತರನ್ನು ಒಪ್ಪಿಸುವ ಪ್ರಯತ್ನ ಮಾಡುತ್ತಿರುವ ಹಿರೇಮಠ, “ನೀವು ಮೊದಲು ಜಮೀನು ಕೊಡಲು ಒಪ್ಪಿಗೆ ನೀಡಿ ಸಹಿ ಹಾಕಿದರೆ, ಅದನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ಅಲ್ಲಿ ಕೆಪಿಟಿಸಿಎಲ್ ಎಂಡಿ (MD) ಇರುತ್ತಾರೆ, ಜೊತೆಗೆ ಒಬ್ಬರು ಐಎಎಸ್ (IAS) ಅಧಿಕಾರಿ ಕೂಡ ಇರುತ್ತಾರೆ,” ಎಂದು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಹೆಸರು ಬಳಸಿ ಪ್ರಭಾವದ ಮಾತುಗಳನ್ನು ಆಡಿದ್ದಾರೆ.
ಯಲಬುರ್ಗಾ ಕ್ಷೇತ್ರದಲ್ಲಿ ರೈತರ ಜಮೀನುಗಳನ್ನು ಬೃಹತ್ ಯೋಜನೆಗಳ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳುತ್ತಿರುವುದಕ್ಕೆ ಶಾಸಕ ಬಸವರಾಜ್ ರಾಯರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಕಂಪನಿಗಳಿಗೆ ರೈತರು ಯಾವುದೇ ಕಾರಣಕ್ಕೂ ಜಮೀನು ನೀಡದಂತೆ ಪತ್ರ ಬರೆದು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಶಾಸಕರ ಆಪ್ತ ನವಲಿ ಹಿರೇಮಠ ದಿನಕ್ಕೊಂದರಂತೆ ವಿಡಿಯೋ ವೈರಲ್ ಮಾಡಿಕೊಳ್ಳುವ ಮೂಲಕ ರೈತರೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಶಾಸಕರ ಬೆನ್ನಹಿಂದೆಯೇ ಅವರ ಆಪ್ತರು ಇಂತಹ ಲ್ಯಾಂಡ್ ಡೀಲಿಂಗ್ ದಂಧೆಯಲ್ಲಿ ತೊಡಗಿದ್ದಾರಾ? ಅಥವಾ ರೈತರನ್ನು ಕಂಪನಿಗಳ ಪರವಾಗಿ ಒಪ್ಪಿಸಲು ಇವರಿಗೆ ಯಾರು ಸುಪಾರಿ ಕೊಟ್ಟಿದ್ದಾರೆ? ಎಂಬ ಆಕ್ರೋಶದ ಪ್ರಶ್ನೆಗಳು ಸ್ಥಳೀಯವಾಗಿ ಕೇಳಿಬರುತ್ತಿವೆ.
ಇಲ್ಲಿದೆ ನೋಡಿ ವಿಡಿಯೋ:
ಆಪ್ತನ ಲ್ಯಾಂಡ್ ಡೀಲ್ ವಿಡಿಯೋ ವೈರಲ್ ಬೆನ್ನಲ್ಲೇ ಶಾಸಕ ಅಲರ್ಟ್
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಜಮೀನು ವಿಚಾರವಾಗಿ ಶಾಸಕ ಬಸವರಾಜ್ ರಾಯರೆಡ್ಡಿ ಅವರ ಆಪ್ತ ಎಸ್.ಆರ್. ನವಲಿ ಹಿರೇಮಠ ರೈತರೊಂದಿಗೆ ನಡೆಸುತ್ತಿದ್ದ ಲ್ಯಾಂಡ್ ಡೀಲಿಂಗ್‌ನ ಸರಣಿ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಶಾಸಕರು ತಕ್ಷಣವೇ ಅಲರ್ಟ್ ಆಗಿದ್ದಾರೆ. ಕ್ಷೇತ್ರದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ 770 ಮೆಗಾವ್ಯಾಟ್ ವಿದ್ಯುತ್ ಕೇಂದ್ರ ಸ್ಥಾಪನೆಗಾಗಿ ರೈತರ ಜಮೀನು ಖರೀದಿ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಕೋರಿ ಕೊಪ್ಪಳ ಜಿಲ್ಲಾಧಿಕಾರಿ ಸೇರಿದಂತೆ ಉನ್ನತಾಧಿಕಾರಿಗಳಿಗೆ ಶಾಸಕರು ತುರ್ತು ಪತ್ರ ಬರೆದಿದ್ದಾರೆ.
ಒಂದು ಕಡೆ ಆಪ್ತ ನವಲಿ ಹಿರೇಮಠ ರೈತರ ಸಭೆ ನಡೆಸಿ, “ನೀವು 40 ಲಕ್ಷ ಕೇಳಿದ್ದೀರಿ, ಆದರೆ ಪ್ರತಿ ಎಕರೆಗೆ 30 ರಿಂದ 32 ಲಕ್ಷಕ್ಕೆ ಡೀಲ್ ಮುಗಿಯಬಹುದು. ಅಲ್ಲಿ ಕೆಪಿಟಿಸಿಎಲ್ ಎಂಡಿ ಹಾಗೂ ಐಎಎಸ್ ಅಧಿಕಾರಿಗಳು ಇರುತ್ತಾರೆ,” ಎಂದು ಮಾತನಾಡಿದ್ದ ವಿಡಿಯೋಗಳು ದಿನಕ್ಕೊಂದರಂತೆ ಲೀಕ್ ಆಗಿ ತೀವ್ರ ಮುಜುಗರ ಉಂಟುಮಾಡಿದ್ದವು. ಈ ಬೆನ್ನಲ್ಲೇ ರಾಯರೆಡ್ಡಿ ಅವರು ನೇರವಾಗಿ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ತಮಗೂ ಈ ಡೀಲಿಂಗ್‌ಗೂ ಸಂಬಂಧವಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.
ಮೂವರು ಉನ್ನತಾಧಿಕಾರಿಗಳಿಗೆ ರಾಯರೆಡ್ಡಿ ಪತ್ರ
ಶಾಸಕ ಬಸವರಾಜ್ ರಾಯರೆಡ್ಡಿ ಅವರು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಕೆಪಿಸಿಎಲ್ (KPCL) ವ್ಯವಸ್ಥಾಪಕ ನಿರ್ದೇಶಕರು (MD) ಹಾಗೂ ಕೆಪಿಟಿಸಿಎಲ್ (KPTCL) ಎಂಡಿ ಅವರಿಗೆ ಅಧಿಕೃತ ಪತ್ರ ಬರೆದು ತಮ್ಮ ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ಜಮೀನು ಸ್ವಾಧೀನ ಮಾಡಿಕೊಳ್ಳದಂತೆ ಆಗ್ರಹಿಸಿದ್ದಾರೆ. “ಕೆಪಿಸಿಎಲ್ ಸಂಸ್ಥೆಯಿಂದ ಯಲಬುರ್ಗಾ ಕ್ಷೇತ್ರದಲ್ಲಿ 770 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಜಮೀನು ಖರೀದಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ವಿದ್ಯುತ್ ಕೇಂದ್ರದ ಜರೂರತ್ತು ನಮ್ಮ ತಾಲೂಕಿಗೆ ಇಲ್ಲ. ಹೀಗಾಗಿ ಇದನ್ನು ಯಲಬುರ್ಗಾ ಹಾಗೂ ಕುಕನೂರು ತಾಲೂಕು ಬಿಟ್ಟು ಬೇರೆಡೆಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು,” ಎಂದು ಪತ್ರದಲ್ಲಿ ಕೋರಿದ್ದಾರೆ.
“ಕೆಪಿಸಿಎಲ್ ಸಂಸ್ಥೆಯಿಂದ ಯಲಬುರ್ಗಾ ಕ್ಷೇತ್ರದಲ್ಲಿ 770 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಜಮೀನು ಖರೀದಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ವಿದ್ಯುತ್ ಕೇಂದ್ರದ ಜರೂರತ್ತು ನಮ್ಮ ತಾಲೂಕಿಗೆ ಇಲ್ಲ. ಹೀಗಾಗಿ ಇದನ್ನು ಯಲಬುರ್ಗಾ ಹಾಗೂ ಕುಕನೂರು ತಾಲೂಕು ಬಿಟ್ಟು ಬೇರೆಡೆಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು,” ಎಂದು ಪತ್ರದಲ್ಲಿ ಕೋರಿದ್ದಾರೆ. ತಮ್ಮ ತಾಲೂಕಿನ ರೈತರ ಹಿತರಕ್ಷಣೆಯ ಪರವಾಗಿ ಮಾತನಾಡಿದ ಶಾಸಕರು, ಭೂಸ್ವಾಧೀನದ ವಿರುದ್ಧ ತಮ್ಮ ಪತ್ರದಲ್ಲಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇನ್ನೂ 100 ಅಡಿ ತಲುಪಿಲ್ಲ ಕೆಆರ್ಎಸ್, ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ
“ನಮ್ಮ ತಾಲೂಕು ಆರ್ಥಿಕವಾಗಿ ಮೊದಲೇ ಹಿಂದುಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ 3 ರಿಂದ 4 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ ತೊಂದರೆಯಿಲ್ಲ. ಆದರೆ, ಬರೋಬ್ಬರಿ 180 ಎಕರೆ ಜಮೀನನ್ನು ಯೋಜನೆಯ ಹೆಸರಿನಲ್ಲಿ ಕಿತ್ತುಕೊಂಡರೆ ಇಲ್ಲಿನ ರೈತರು ಸಂಪೂರ್ಣವಾಗಿ ಭೂಮಿ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಾರೆ. ಒಂದು ವೇಳೆ ಯೋಜನೆ ಮಾಡಲೇಬೇಕಿದ್ದರೆ ಸರ್ಕಾರದ ಜಮೀನಿನಲ್ಲಿ ಮಾಡುವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ,” ಎಂದು ರಾಯರೆಡ್ಡಿ ಪತ್ರದಲ್ಲಿ ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ