ನೀನಾಸಂ ಸತೀಶ್ (Ninasam Satish) ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನೀನಾಸಂ ಹಿನ್ನೆಲೆಯಿಂದ ಬಂದ ಅವರು ಇಂದು ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಅವರ ಅಭಿನಯದ ‘ದಿ ರೈಸ್ ಆಫ್ ಅಶೋಕ’ ಸಿನಿಮಾ ಗಮನ ಸೆಳೆದಿದೆ. ಜಾತಿ ತಾರತಮ್ಯ ವಿರುದ್ಧ ಹೋರಾಡುವ ಈ ಕಥೆ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಸತೀಶ್ ಅವರು ತಮ್ಮ ಜರ್ನಿ ನೆನಪಿಸಿಕೊಂಡಿದ್ದಾರೆ. ಅವರು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.
‘ಶಿವಕುಮಾರ್, ನೀನಾಸಂ ಸತೀಶ್ ಆದ ಕಥೆ’ ಎಂದು ಮಾತು ಆರಂಭಿಸಿದ್ದಾರೆ ಸತೀಶ್. ‘ಇದು ವಿಧಿ ಬರೆದ ಕಥೆಯಲ್ಲ, ನಾನೇ ಬರೆದುಕೊಂಡ ಸಾಧಾರಣ ಕಥೆ. ನಮ್ಮೂರು ಮದ್ದೂರು ಬಳಿ ಇದೆ. ನಮಗೆ ಇರೋದು 30 ಗುಂಟೆ ಜಾಗ. ನಮ್ಮದು ಸಣ್ಣ ರೈತರ ಕುಟುಂಬ. ಛಲ ಎಲ್ಲಿಂದ ಬಂತು ಎಂದಾಗ ನಮ್ಮಮ್ಮ ನೆನಪಾಗುತ್ತಾಳೆ’ ಎಂದು ಹಳೆಯ ಕಥೆ ನೆನಪಿಸಿಕೊಂಡಿದ್ದಾರೆ ಸತೀಶ್.
‘ಬೆಂಗಳೂರಿಗೆ ಮೊದಲು ಬಂದಾಗ ಸಿಕ್ಕಿದ್ದು ಗೋಪಾಲ್ ಥಿಯೇಟರ್. ಇಲ್ಲಿ, ಕಸ ಗುಡಿಸಿದ್ದೆ, ಟೀ ಮಾರಿದ್ದೆ. ಟಾರ್ಚ್ ಬಿಟ್ಟಿದ್ದೆ. ಆಗ ಹೀರೋ ಆಗ್ತೀನಿ ಎಂದು ಎಂದಿಗೂ ಅಂದುಕೊಂಡಿರಲಿಲ್ಲ’ ಎಂದಿದ್ದಾರೆ ನೀನಾಸಂ ಸತೀಶ್. ಸಿಕ್ಕ ಸಿಕ್ಕ ಕೆಲಸ ಮಾಡಿದೆ. ಮತ್ತೆ ಊರು ಸೇರಿದೆ. ಆ ಬಳಿಕ ನಾಟಕ ಎಂಬ ಹೊಸ ಬಾಗಿಲು ತೆರೆಯಿತು’ ಎಂದು ಜರ್ನಿ ನೆನೆದರು ಸತೀಶ್.
ಇದನ್ನೂ ಓದಿ: ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಶೀರ್ಷಿಕೆ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್ ನೀನಾಸಂ
ಆ ಬಳಿಕ ಅವರು ನೀನಾಸಂ ಸೇರಿಕೊಂಡರು. ಇದಾದ ಬಳಿಕ ಅವರು ಮತ್ತೆ ಬೆಂಗಳೂರಿಗೆ ಬಂದರು. ‘ಹೀಗೆ ಶುರುವಾದ ಜರ್ನಿ ಇಲ್ಲಿವರೆಗೆ ಕರೆದುಕೊಂಡು ಬಂದು ನಿಲ್ಲಿಸಿದೆ. ಗೆಲುವು, ಸೋಲಿಗಿಂತ ಪ್ರಯತ್ನವನ್ನೇ ನಂಬಿದ್ದೇನೆ. ನಾನು ಪ್ರೀತಿಸಿ ಮಾಡಿರೋ ದಿ ರೈಸ್ ಆಫ್ ಅಶೋಕ ಚಿತ್ರ ಗೆಲ್ಲಿಸಿ’ ಎಂದು ಸತೀಶ್ ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.