ಶ್ರೀಲಂಕಾಕ್ಕೆ ಹೊರಟ ಪ್ರಶಾಂತ್ ನೀಲ್ ಮತ್ತು ಜೂ ಎನ್​​ಟಿಆರ್ – Kannada News

ಪ್ರಶಾಂತ್ ನೀಲ್ (Prashanth Neel) ಸಾಮಾನ್ಯವಾಗಿ ತಮ್ಮ ಸಿನಿಮಾಗಳನ್ನು ಸೆಟ್​​ಗಳಲ್ಲಿಯೇ ಚಿತ್ರೀಕರಿಸುತ್ತಾರೆ. ಅವರು ಚಿತ್ರೀಕರಣಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗುವುದು ಬಹಳ ಕಡಿಮೆ. ಅದರಲ್ಲೂ ವಿದೇಶದಲ್ಲಿ ಚಿತ್ರೀಕರಣವೆಂದರೆ ಅವರಿಗೆ ಆಗದು. ಇದೀಗ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ಚಿತ್ರೀಕರಣವನ್ನು ನೀಲ್ ಮಾಡುತ್ತಿದ್ದು, ಈ ಸಿನಿಮಾಕ್ಕಾಗಿ ತಮ್ಮ ಹಳೆಯ ಪದ್ಧತಿಗಳನ್ನು ಮುರಿದಿದ್ದಾರೆ ಪ್ರಶಾಂತ್ ನೀಲ್. ‘ಡ್ರ್ಯಾಗನ್’ ಸಿನಿಮಾಕ್ಕಾಗಿ ಪ್ರಶಾಂತ್ ನೀಲ್ ವಿದೇಶಗಳನ್ನು ಸುತ್ತುತ್ತಿದ್ದಾರೆ. ಈಗಾಗಲೇ ಒಂದು ದೇಶಕ್ಕೆ ಹೋಗಿ ಬಂದಿರುವ ನೀಲ್ ಮತ್ತು ಎನ್​​ಟಿಆರ್, ಈಗ ಶ್ರೀಲಂಕಾದತ್ತ ಮುಖ ಮಾಡಿದ್ದಾರೆ.

ಪ್ರಶಾಂತ್ ನೀಲ್ ಅವರು ಜೂ ಎನ್​​ಟಿಆರ್ ಅವರನ್ನು ಕರೆದುಕೊಂಡು ಶ್ರೀಲಂಕಾದತ್ತ ಪಯಣ ಬೆಳೆಸಿದ್ದಾರೆ. ಅಲ್ಲಿ ಒಂದು ಪ್ರಮುಖ ಆಕ್ಷನ್ ದೃಶ್ಯದ ಜೊತೆಗೆ ಮಾದಕ ವಸ್ತು ಬೆಳೆಯುವ ಗುಂಪಿನ ದೃಶ್ಯಗಳನ್ನು ಸಹ ಚಿತ್ರೀಕರಣ ಮಾಡಲಿದ್ದಾರಂತೆ. ಶ್ರೀಲಂಕಾನಲ್ಲಿ ಬೀಚ್​​ಗಳ ಜೊತೆಗೆ ಪರ್ವತಶೃಂಗಗಳು, ದಟ್ಟ ಅರಣ್ಯ ಮತ್ತು ಸಾಕಷ್ಟು ಟೀ-ಕಾಫಿ ಪ್ಲಾಂಟೇಶನ್​​ಗಳು ಇದ್ದು, ಇದು ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣಕ್ಕೆ ಸೂಕ್ತವೆಂಬ ಕಾರಣಕ್ಕೆ ನೀಲ್, ಶ್ರೀಲಂಕಾದತ್ತ ಹೊರಟಿದ್ದಾರೆ.

ನೀಲ್ ಸಾಮಾನ್ಯವಾಗಿ ಸೆಟ್ಟುಗಳಲ್ಲಿ ಚಿತ್ರೀಕರಣ ಮಾಡುತ್ತಾರೆ. ಅಲ್ಲದೆ, ಅವರು ಹೆಣೆಯುವ ಕತೆಗಳು ಸಹ ಬಹುತೇಕ ಒಂದೇ ಸ್ಥಳದಲ್ಲಿ ಸ್ಥಿತವಾಗಿರುವ ವ್ಯಕ್ತಿಗಳ ಕುರಿತಾಗಿರುತ್ತದೆ. ಆದರೆ ಈ ಬಾರಿ ‘ಡ್ರ್ಯಾಗನ್’ನಲ್ಲಿ ಅವರು ಮಾದಕ ವಸ್ತು ‘ಉದ್ಯಮ’ದ ಕುರಿತು ಕತೆ ಹೇಳುತ್ತಿದ್ದಾರೆ. ಹಾಗಾಗಿ ಸೆಟ್​​ನಲ್ಲಿ ಅಲ್ಲದೆ ನಿಜವಾದ ಲೊಕೇಶನ್​​ಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಮತ್ತೊಂದು ಆಕ್ಷನ್ ದೃಶ್ಯದ ಚಿತ್ರೀಕರಣಕ್ಕಾಗಿ ಜೋರ್ಡನ್​​ಗೆ ಹೋಗಿದ್ದರು ನೀಲ್ ಮತ್ತು ಜೂ ಎನ್​​ಟಿಆರ್. ಜೋರ್ಡನ್​​ನ ಮರು ಭೂಮಿಯಲ್ಲಿ ಅದ್ಧೂರಿ ಆಕ್ಷನ್ ದೃಶ್ಯದ ಚಿತ್ರೀಕರಣದಲ್ಲಿ ಜೂ ಎನ್​​ಟಿಆರ್ ಭಾಗಿ ಆಗಿದ್ದರಂತೆ. ಈಗ ಜೋರ್ಡನ್ ಬಳಿಕ ಶ್ರೀಲಂಕಾಕ್ಕೆ ತೆರಳಿದೆ ಚಿತ್ರತಂಡ.

ಇದನ್ನೂ ಓದಿ:‘ಧುರಂಧರ್’ ನೋಡಿ ‘ಡ್ರ್ಯಾಗನ್’ ಕತೆ ಬದಲಾಯಿಸಿದರೇ ಪ್ರಶಾಂತ್ ನೀಲ್?

‘ಡ್ರ್ಯಾಗನ್’ ಸಿನಿಮಾ ನೀಲ್ ಅವರ ನಿರ್ದೇಶನದ ಐದನೆ ಸಿನಿಮಾ ಆಗಿದ್ದು, ಈ ಹಿಂದಿನ ಸಿನಿಮಾಗಳಿಗಿಂತಲೂ ಹೆಚ್ಚು ರಿಚ್ ಆಗಿ ಮತ್ತು ಹೆಚ್ಚು ಆಕ್ಷನ್ ಭರಿತವಾಗಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ಸಿನಿಮಾನಲ್ಲಿರುವ ದುಷ್ಟ ಕೂಟವನ್ನು ಮತ್ತು ಅದರ ನಾಯಕನಂತಿರುವ ಜೂ ಎನ್​​ಟಿಆರ್ ಪಾತ್ರವನ್ನು ಖಡಕ್ ಆಗಿ ತೋರಿಸಿದ್ದಾರೆ. ಸಿನಿಮಾನಲ್ಲಿ ಜೂ ಎನ್​​ಟಿಆರ್ ಜೊತೆಗೆ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಅನಿಲ್ ಕಪೂರ್ ಪವರ್​​ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಿಜು ಮೆನನ್, ಆಶುತೋಶ್ ರಾಣಾ, ಖುಷ್ಬು ಸುಂದರ್ ಅವರುಗಳು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *