ಕೊಲಂಬೊ/ನವದೆಹಲಿ, ಏಪ್ರಿಲ್ 20: ಹಿಂದೂ ಮಹಾಸಾಗರದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವ ಚೀನಾವನ್ನು ಕಟ್ಟಿಹಾಕಲು ಭಾರತವು ಶ್ರೀಲಂಕಾದಲ್ಲಿ ಚಾಣಾಕ್ಷ್ಯತನದ ಹೆಜ್ಜೆಯನ್ನಿಟ್ಟಿದೆ. ಶ್ರೀಲಂಕಾದ ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ದ್ವೀಪ ರಾಷ್ಟ್ರವು ಭಾರತದ ಮೇಲೆ ಹೆಚ್ಚು ಅವಲಂಬಿತವಾಗುವಂತೆ ಮಾಡಲು ಭಾರತ-ಶ್ರೀಲಂಕಾ ಆಯಿಲ್ ಪೈಪ್ಲೈನ್ ಯೋಜನೆಯನ್ನು (India Sri Lanka Oil Pipeline) ಚುರುಕುಗೊಳಿಸಲಾಗಿದೆ.
ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಮಹತ್ವದ ವಿಷಯ ಚರ್ಚೆಯಾಗಿದೆ. ಶ್ರೀಲಂಕಾದ ತ್ರಿಕೋನಮಲಿಯಲ್ಲಿ (Trincomalee) ಬೃಹತ್ ಇಂಧನ ಕೇಂದ್ರವನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಕೈಜೋಡಿಸಿವೆ. ಇಲ್ಲಿಂದ ಭಾರತದವರೆಗೆ ತೈಲ ಪೈಪ್ಲೈನ್ ನಿರ್ಮಾಣವಾಗಲಿದೆ.
ಇದನ್ನೂ ಓದಿ: ಅಮೆರಿಕ ಇತಿಹಾಸದ ಅತಿದೊಡ್ಡ ರೀಫಂಡ್: ಟ್ರಂಪ್ ಸುಂಕದ ಹಣ ಇಂದಿನಿಂದ ವಾಪಸ್
ಚೀನಾಕ್ಕೆ ಹಿನ್ನಡೆ
ಹಂಬಂತೋಟ ಬಂದರಿನಲ್ಲಿ ಚೀನಾದ ‘ಸಿನೋಪೆಕ್’ (Sinopec) ಕಂಪನಿಯು ತೈಲ ಸಂಸ್ಕರಣಾಗಾರ ಸ್ಥಾಪಿಸಲು ಯೋಜಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತವು ತನ್ನದೇ ಆದ ಪೈಪ್ಲೈನ್ ಮತ್ತು ಇಂಧನ ಜಾಲವನ್ನು ವಿಸ್ತರಿಸುವ ಮೂಲಕ ಚೀನಾದ ಪ್ರಭಾವವನ್ನು ತಗ್ಗಿಸಲು ಮುಂದಾಗಿದೆ.
ಪಶ್ಚಿಮ ಏಷ್ಯಾದಲ್ಲಿನ ಯುದ್ಧದಂತಹ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಇಂತಹ ಸಮಯದಲ್ಲಿ ಈ ಪೈಪ್ಲೈನ್ ಶ್ರೀಲಂಕಾಕ್ಕೆ ಕಡಿಮೆ ದರದಲ್ಲಿ ಮತ್ತು ನಿರಂತರವಾಗಿ ಇಂಧನ ಪೂರೈಕೆ ಮಾಡಲು ಸಹಕಾರಿಯಾಗಲಿದೆ.
ನೆರೆಹೊರೆಗೆ ಆದ್ಯತೆ (Neighbourhood First) ಕೊಡುವ ಭಾರತದ ನೀತಿಯಡಿಯಲ್ಲಿ ಈಗಾಗಲೇ ಶ್ರೀಲಂಕಾಕ್ಕೆ ಆರ್ಥಿಕ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲಾಗಿದೆ. ಈಗ ಈ ತೈಲ ಯೋಜನೆಯು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕೆಗಳಿಗೆ ಇರಾನ್ನ ‘ಸೊಳ್ಳೆ ಪಡೆಗಳ’ ಕಾಟ
ಯೋಜನೆಯ ಮಹತ್ವವೇನು?
ಈ ಪೈಪ್ಲೈನ್ ಕೇವಲ ಇಂಧನ ಸಾಗಣೆಗೆ ಸೀಮಿತವಾಗಿಲ್ಲ. ಇದು ದಕ್ಷಿಣ ಏಷ್ಯಾದಲ್ಲಿ ಭಾರತದ ಭೌಗೋಳಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಮರುಸ್ಥಾಪಿಸುವ ಒಂದು ದಾರಿಯಾಗಿದೆ. ಚೀನಾವು ಶ್ರೀಲಂಕಾವನ್ನು ತನ್ನ ‘ಸಾಲದ ಸುಳಿ’ಯಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿರುವಾಗ, ಭಾರತವು ಮೂಲಸೌಕರ್ಯ ಮತ್ತು ಇಂಧನ ಸಂಪರ್ಕದ ಮೂಲಕ ಶ್ರೀಲಂಕಾದ ವಿಶ್ವಾಸ ಗಳಿಸುತ್ತಿದೆ.
ಈ ಯೋಜನೆಯು ಪೂರ್ಣಗೊಂಡರೆ, ಶ್ರೀಲಂಕಾ ತನ್ನ ಹೆಚ್ಚಿನ ಇಂಧನ ಅಗತ್ಯಗಳಿಗಾಗಿ ಭಾರತದ ಮೇಲೆ ಅವಲಂಬಿತವಾಗಲಿದೆ. ಇದು ಭದ್ರತೆಯ ದೃಷ್ಟಿಯಿಂದ ಭಾರತಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ವಿಶ್ಲೇಷಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ