ಶ್ರೀಲೀಲಾ (Sreeleela) ಭಾರತದ ಸ್ಟಾರ್ ಪ್ಯಾನ್ ಇಂಡಿಯಾ ನಟಿ ಆಗುವತ್ತ ದಾಪುಗಾಲಿಟ್ಟಿದ್ದಾರೆ. ಕನ್ನಡದ ಈ ನಟಿ, ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿ ಎನಿಸಿಕೊಂಡಿದ್ದು, ತಮಿಳಿನಲ್ಲೂ ಬ್ಯುಸಿ ಆಗಿದ್ದಾರೆ. ಶ್ರೀಲೀಲಾ ಈಗಾಗಲೇ ಕೆಲವು ಹಿಂದಿ ಸಿನಿಮಾಗಳನ್ನೂ ಸಹ ಒಪ್ಪಿಕೊಂಡಿದ್ದು, ದೊಡ್ಡ ನಿರ್ಮಾಣ ಸಂಸ್ಥೆಗಳ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಶ್ರೀಲೀಲಾ ಮೊದಲ ಹಿಂದಿ ಸಿನಿಮಾ ಒಪ್ಪಿಕೊಂಡು ವರ್ಷವಾಗುತ್ತಾ ಬಂದಿದೆ. ಆದರೆ ಸಿನಿಮಾದ ಬಿಡುಗಡೆ ಇನ್ನೂ ಸಾಕಷ್ಟು ತಡ ಆಗಬಹುದು ಎಂದು ಸ್ವತಃ ನಿರ್ದೇಶಕರೇ ಹೇಳಿದ್ದಾರೆ. ಮೊದಲ ಹಿಂದಿ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದ ಶ್ರೀಲೀಲಾಗೆ ಇದು ಬೇಸರ ತಂದಂತಿದೆ.
ಕಾರ್ತಿಕ್ ಆರ್ಯನ್ ನಾಯಕನಾಗಿ ನಟಿಸಿ, ಖ್ಯಾತ ನಿರ್ದೇಶಕ ಅನುರಾಗ್ ಬಸು ನಿರ್ದೇಶಿಸುತ್ತಿರುವ ಸಿನಿಮಾ ಮೂಲಕ ಶ್ರೀಲೀಲಾ ಬಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಮೊದಲ ಸಿನಿಮಾಕ್ಕೆ ಅನುರಾಗ್ ಬಸು ಅಂಥಹಾ ನಿರ್ದೇಶಕರು ಶ್ರೀಲೀಲಾಗೆ ದೊರಕಿದ್ದಾರೆ. ಆದರೆ ಸಿನಿಮಾದ ಮೊದಲ ಪೋಸ್ಟರ್ ಬಂದು ಒಂದೂವರೆ ವರ್ಷವಾಗಿದೆ ಆದರೆ ಸಿನಿಮಾದ ಚಿತ್ರೀಕರಣ ಆಮೆಗಿಂತಲೂ ನಿಧಾನ ಗತಿಯಲ್ಲಿ ಸಾಗುತ್ತಿದೆ. ಅಸಲಿಗೆ ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ವಾಸ್ತವವಾಗಿ ಚಿತ್ರದ ಕೇವಲ ಕೆಲವೇ ಭಾಗಗಳು ಮಾತ್ರ ಪೂರ್ಣಗೊಂಡಿವೆ ಎಂದು ತಿಳಿದುಬಂದಿದೆ. ಇದರರ್ಥ ಸಿನಿಮಾದ ಬಿಡುಗಡೆ ಈ ವರ್ಷ ಆಗುವುದು ಅನುಮಾನವೇ ಎಂಬಂತಾಗಿದೆ.
ಇದನ್ನೂ ಓದಿ:ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮಿಂಚಿದ ಶ್ರೀಲೀಲಾ: ವಿಡಿಯೋ ನೋಡಿ
ನಿರ್ದೇಶಕ ಅನುರಾಗ್ ಬಸು ಇತ್ತೀಚೆಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ತಂಡವು ಕೇವಲ 45 ದಿನಗಳಿಗಿಂತ ಹೆಚ್ಚು ಚಿತ್ರೀಕರಣ ನಡೆಸಿದೆ ಮತ್ತು ಶೂಟಿಂಗ್ ಈಗಷ್ಟೇ ಆರಂಭವಾಗಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಈ ಚಿತ್ರವನ್ನು ಘೋಷಿಸಿದಾಗ, ಇದು ಡಿಸೆಂಬರ್ 2025 ರಲ್ಲಿ ತೆರೆಗೆ ಬರಲಿದೆ ಎಂದು ತಂಡ ಖಚಿತಪಡಿಸಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಚಿತ್ರೀಕರಣ ವಿಳಂಬವಾಗಿದೆ. ಹೆಚ್ಚಿನ ಚಿತ್ರೀಕರಣ ಮುಗಿದಿದೆ ಎಂದು ಭಾವಿಸುವುದು ತಪ್ಪು ಎಂದು ನಿರ್ದೇಶಕರೇ ಈಗ ದೃಢಪಡಿಸಿದ್ದಾರೆ. ಇದೊಂದು ಪ್ರೇಮಕಥೆಯಾಗಿದ್ದು, ಇಷ್ಟು ಸುದೀರ್ಘ ಸಮಯ ತೆಗೆದುಕೊಳ್ಳುವುದು ಸಾಮಾನ್ಯವಲ್ಲ. ನಿರ್ದೇಶಕರ ಈ ಇತ್ತೀಚಿನ ಹೇಳಿಕೆಯು ಚಿತ್ರತಂಡದ ನಡುವೆ ಭಿನ್ನಾಭಿಪ್ರಾಯಗಳು ಇರಬಹುದೇ ಎಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಸಿನಿಮಾದ ಹೆಸರು ಸಹ ವಿವಾದಕ್ಕೆ ಈಡಾಗಿದೆ. ಸಿನಿಮಾ ಪ್ರಾರಂಭವಾದಾಗ ಸಿನಿಮಾಕ್ಕೆ ‘ಆಶಿಖಿ 3’ ಎಂದು ಕರೆಯಲಾಗಿತ್ತು. ಆದರೆ ಕೆಲವು ವಿವಾದಗಳ ಬಳಿಕ ಆ ಹೆಸರನ್ನು ಕೈಬಿಡಲಾಗಿದೆ. ಸಿನಿಮಾಕ್ಕೆ ಬೇರೆ ಹೆಸರಿಡಲು ತೀರ್ಮಾನಿಸಲಾಗಿದೆ. ಇನ್ನು ಶ್ರೀಲೀಲಾ, ಇದು ಮಾತ್ರವೇ ಅಲ್ಲದೆ ಇನ್ನೂ ಎರಡು ಹೊಸ ಹಿಂದಿ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ತಮಿಳಿನಲ್ಲಿ ಎರಡು ಹೊಸ ಸಿನಿಮಾ, ತೆಲುಗಿನಲ್ಲಿ ಎರಡು ಹೊಸ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ