ವಿಜಯಪುರ, ಮೇ.13: ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದ ಸಂಭ್ರಮದ ನಡುವೆಯೇ ಕರಾಳ ಘಟನೆಯೊಂದು ಸಂಭವಿಸಿದೆ. ಗೆಲುವಿನ ಉತ್ತುಂಗದಲ್ಲಿದ್ದಾಗ ಪಟ್ಟಣ ಪಂಚಾಯತ್ ಸದಸ್ಯರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೊಲ್ಹಾರ ಪಟ್ಟಣ ಪಂಚಾಯತ್ನ 16ನೇ ವಾರ್ಡ್ ಸದಸ್ಯರಾದ ತೌಸೀಪ್ ಗಿರಗಾಂವಿ ಅವರು ಮೃತಪಟ್ಟ ದುರ್ದೈವಿ. ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕೆಪಿಎಲ್ (KPL) ಮಾದರಿಯ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ತೌಸೀಪ್ ವೀಕ್ಷಿಸುತ್ತಿದ್ದರು. ಆಟದ ಅಂತ್ಯದಲ್ಲಿ ತಮ್ಮ ನೆಚ್ಚಿನ ತಂಡ ಜಯಗಳಿಸುತ್ತಿದ್ದಂತೆ ಮೈದಾನಕ್ಕಿಳಿದು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಯುವ ಸದಸ್ಯರ ಅಕಾಲಿಕ ನಿಧನದಿಂದಾಗಿ ಕೊಲ್ಹಾರ ಪಟ್ಟಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕ್ರೀಡೆಯ ಸಂಭ್ರಮವು ಕ್ಷಣಾರ್ಧದಲ್ಲಿ ಮೌನಕ್ಕೆ ತಿರುಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಹಿತಿ ಲಭ್ಯವಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ