ಬೆಂಗಳೂರು, (ಜುಲೈ 28): ಧರ್ಮಸ್ಥಳದ ಬುರುಡೆ ಕೇಸ್ನಲ್ಲಿ (dharmasthala mass burial case) ಮಾಜಿ ಐಎಎಸ್ ಅಧಿಕಾರಿ ಹಾಗೂ ಹಾಲಿ ಸಂಸದ ಸಸಿಕಾಂತ್ ಸೆಂಥಿಲ್ (Sasikanth Senthil) ಅವರು ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದ ಶಾಸಕ ಜನಾರ್ದನ ರೆಡ್ಡಿ (gali janardhan reddy) ವಿರುದ್ಧ ಮಾನನಷ್ಟ ದಾಖಲಿಸಿದ್ದಾರೆ. ಸಸಿಕಾಂತ್ ಸೆಂಥಿಲ್ ಅವರ ಖಾಸಗಿ ದೂರು ಸ್ವೀಕರಿಸಿದ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್, ಆಗಸ್ಟ್ 24ರಂದು ಖುದ್ದಾಗಿ ಹಾಜರಾಗುವಂತೆ ಜನಾರ್ದನ ರೆಡ್ಡಿ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.
ತಮಿಳುನಾಡಿ ತಿರುವಳ್ಳೂರು ಸಂಸದ ಸಸಿಕಾಂತ್ ಸೆಂಥಿಲ್ ಅವರು ಧರ್ಮಸ್ಥಳದ ಬುರುಡೆ ಪ್ರಕರಣದ ಸೂತ್ರಧಾರರಾಗಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ಸೆಂಥಿಲ್ ಅವರು ಖಾಸಗಿ ದೂರು ನೀಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಂಡು ಪ್ರತಿವಾದಿ ಜನಾರ್ದನ ರೆಡ್ಡಿ ಅವರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನ ಆಗಸ್ಟ್ 24ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಧರ್ಮಸ್ಥಳ ಕೇಸ್ಗೆ ಬಿಗ್ ಟ್ವಿಸ್ಟ್: ಅನಾಮಿಕ ಮಾಸ್ಕ್ ಮ್ಯಾನ್ ತಮಿಳುನಾಡಿನವ, ಸಸಿಕಾಂತ್ ಸೆಂಥಿಲ್ ಆಪ್ತ ಎಂದ ಜನಾರ್ದನ ರೆಡ್ಡಿ
ರೆಡ್ಡಿ-ಸೆಂಥಿಲ್ ಆರೋಪ ಪ್ರತ್ಯಾರೋಪ
ಧರ್ಮಸ್ಥಳದ ವಿರುದ್ಧ ನಡೆದಿರುವ ಷಡ್ಯಂತ್ರದ ಹಿಂದಿನ ಮಾಸ್ಟರ್ ಮೈಂಡ್ ಸಸಿಕಾಂತ್ ಸೆಂಥಿಲ್ ಅವರಾಗಿದ್ದಾರೆ ಎಂದು ಕಳೆದ ವರ್ಷ ಆಗಸ್ಟ್ನಲ್ಲಿ ಜನಾರ್ದನ ರೆಡ್ಡಿ ಅವರು ಆರೋಪಿಸಿ, ತನಿಖೆ ಎದುರಿಸುವಂತೆ ಸವಾಲೆಸೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸೆಂಥಿಲ್, “ಜನಾರ್ದನ ರೆಡ್ಡಿ ಅವರು ರಾಜಕೀಯ ದುರುದ್ದೇಶದಿಂದ ನನ್ನ ವಿರುದ್ಧ ಆಧಾರರಹಿತ ಸುಳ್ಳು ಆರೋಪ ಮಾಡಿದ್ದಾರೆ. ನಾನು ಈ ಹಿಂದೆ ಬಳ್ಳಾರಿಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾಗ ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಕೆಲವು ಪ್ರಕರಣಗಳ ಕುರಿತು ಸಿಬಿಐಗೆ ದಾಖಲೆಗಳನ್ನು ಒದಗಿಸಿದ್ದೆ. ಅದಕ್ಕಾಗಿ ಈಗ ರೆಡ್ಡಿ ಅವರು ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದರು.
ಬಳಿಕ ಪ್ರತಿಕ್ರಿಯಿಸಿದ್ದ ಜನಾರ್ದನ ರೆಡ್ಡಿ , “ಸೆಂಥಿಲ್ ಮತ್ತೊಮ್ಮೆ ಸುಳ್ಳು ಹೇಳಿದ್ದಾರೆ. ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ನನ್ನ ವಿರುದ್ಧದ ಪ್ರಕರಣಗಳು ಪ್ರಾರಂಭವಾದಾಗ ಕಾಂಗ್ರೆಸ್ ಸಂಸದರು ಸಹಾಯಕ ಆಯುಕ್ತರಾಗಿ ಎಂದಿಗೂ ಸೇವೆ ಸಲ್ಲಿಸಿರಲಿಲ್ಲ.ನನ್ನನ್ನು ಸೆಪ್ಟೆಂಬರ್ 5, 2011 ರಂದು ಬಂಧಿಸಲಾಯ್ತು. ನನ್ನ ಬಂಧನದ ನಂತರ, ಅವರು ಬಳ್ಳಾರಿಯಲ್ಲಿ ಕರ್ತವ್ಯಕ್ಕೆ ಸೇರಿದರು. ನನ್ನ ಮತ್ತು ಸೆಂಥಿಲ್ ನಡುವೆ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದರು.